ಶಾಲೆಗಳಲ್ಲಿ ಭಗವದ್ಗೀತೆ ಕಡ್ಡಾಯದ ವಿಧೇಯಕ ಮುಂದಿನ ಅಧಿವೇಶನದಲ್ಲಿ ಚರ್ಚೆಗೆ ಬರುವ ನಿರೀಕ್ಷೆ

Update: 2017-05-21 14:03 GMT


    ಹೊಸದಿಲ್ಲಿ, ಮೇ 21: ಭಗವದ್ಗೀತೆಯನ್ನು ಶಾಲೆಯ ಪಠ್ಯಪುಸ್ತಕದಲ್ಲಿ ಕಡ್ಡಾಯಗೊಳಿಸುವ ಮತ್ತು ಇದನ್ನು ಪಾಲಿಸದ ಸಂಸ್ಥೆಗಳ ಮಾನ್ಯತೆಯನ್ನು ರದ್ದುಗೊಳಿಸುವ ಶಿಫಾರಸು ಹೊಂದಿರುವ ವಿಧೇಯಕ ಮುಂಬರುವ ಸಂಸತ್ ಅಧಿವೇಶನದಲ್ಲಿ ಚರ್ಚೆಗೆ ಬರುವ ನಿರೀಕ್ಷೆಯಿದೆ
ಭಗವದ್ಗೀತೆಯಲ್ಲಿರುವ ಶ್ರೇಷ್ಠ ಚಿಂತನೆ ಮತ್ತು ಉಪದೇಶಗಳು ಯುವಜನತೆಯನ್ನು ಉತ್ತಮ ನಾಗರಿಕರನ್ನಾಗಿಸಿ ಅವರ ವ್ಯಕ್ತಿತ್ವವನ್ನು ಶ್ರೀಮಂತಗೊಳಿಸುತ್ತದೆ ಎಂದು ವಿಧೇಯಕವನ್ನು ಮಂಡಿಸಿರುವ ಬಿಜೆಪಿಯ ಸಂಸದ ರಮೇಶ್ ಬಿಧೂರಿ ಹೇಳಿದ್ದಾರೆ.
    ಶಿಕ್ಷಣ ಸಂಸ್ಥೆಗಳಲ್ಲಿ ಭಗವದ್ಗೀತೆಯನ್ನು ನೈತಿಕ ಪಠ್ಯ ಕ್ರಮವಾಗಿ ಕಡ್ಡಾಯಗೊಳಿಸುವ ಮಸೂದೆ -2016 ಎಂಬ ಹೆಸರಿನ ಈ ಮಸೂದೆಯ ಪ್ರಕಾರ , ಅಲ್ಪಸಂಖ್ಯಾತರ ಶಾಲೆಯನ್ನು ಹೊರತುಪಡಿಸಿ ಉಳಿದೆಲ್ಲಾ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಭಗವದ್ಗೀತೆಯನ್ನು ನೈತಿಕ ಶಿಕ್ಷಣದ ಭಾಗವಾಗಿ ತಮ್ಮ ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಬೇಕು.ಇದನ್ನು ಪಾಲಿಸದ ಶಾಲೆಗಳ ಮಾನ್ಯತೆಯನ್ನು ಸರಕಾರ ರದ್ದುಪಡಿಸಬೇಕು .
      ಮಾರ್ಚ್‌ನಲ್ಲಿ ನಡೆದ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗಿತ್ತು. ಎಲ್ಲಾ ವಯೋಮಾನದವರಿಗೂ ಸಲ್ಲುವ ಅಗಣಿತ ತತ್ವಬೋಧನೆ ಹೊಂದಿರುವ ಈ ಶ್ರೀಮಂತ ಸಾಹಿತ್ಯವನ್ನು ಶಿಕ್ಷಣ ಸಂಸ್ಥೆಗಳು ನಿರ್ಲಕ್ಷಿಸುತ್ತಿರುವುದು ಶೋಚನೀಯವಾಗಿದೆ. ಸ್ವಾಮಿ ವಿವೇಕಾನಂದ, ಅರೊಬಿಂದೊ, ಆಲ್ಬರ್ಟ್ ಐನ್‌ಸ್ಟೀನ್ ಮುಂತಾದ ಚಿಂತಕರು ಗೀತೆಯ ಬೋಧನೆಯಿಂದ ಪ್ರಭಾವಿತರಾಗಿದ್ದಾರೆ . ಗೀತೆಯನ್ನು ಶಾಲೆಗಳಲ್ಲಿ ಬೋಧನಾಕ್ರಮವಾಗಿಸುವ ಪ್ರಕ್ರಿಯೆಗೆ ಸರಕಾರ 5,000 ಕೋಟಿ ರೂ. ಮೀಸಲಿಡಬೇಕು. ಅಲ್ಲದೆ ಆವರ್ತಕವಲ್ಲದ ವೆಚ್ಚವಾಗಿ ಸುಮಾರು 100 ಕೋಟಿ ರೂ. ವ್ಯಯಿಸಬೇಕು ಎಂದು ಅವರು ಹೇಳಿದ್ದಾರೆ.
ವಿಧೇಯಕದಲ್ಲಿ ಒಳಗೊಂಡಿರುವ ವಿಷಯದ ಬಗ್ಗೆ ರಾಷ್ಟ್ರಪತಿಯವರಿಗೆ ಮಾಹಿತಿ ನೀಡಲಾಗಿದ್ದು ಸಂವಿಧಾನದ 117ನೆ ಪರಿಚ್ಛೇದದ ಅನುಬಂಧ(3)ರ ಅಡಿ ಚರ್ಚೆಗೆ ಪರಿಗಣಿಸುವಂತೆ ಶಿಫಾರಸು ಮಾಡಲಾಗಿದೆ ಎಂದು ಲೋಕಸಭೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News