ವಿಮಾನವಾಹಕ ನೌಕೆ ಗೊರ್ಷಕೊವ್‌ನ ವೆಚ್ಚ ಏರಿಕೆಯನ್ನು ಒಪ್ಪಿಕೊಂಡಿದ್ದೇಕೆ ಎನ್ನುವುದನ್ನು ಬಹಿರಂಗಗೊಳಿಸಿ:ಸಿಐಸಿ

Update: 2017-05-21 15:40 GMT

ಹೊಸದಿಲ್ಲಿ,ಮೇ 21: ರಷ್ಯಾದಿಂದ ನವೀಕೃತ ವಿಮಾನ ವಾಹಕ ನೌಕೆ ಅಡ್ಮಿರಲ್ ಗೊರ್ಷಕೊವ್ ಅನ್ನು ನಿಗದಿಯಾಗಿದ್ದ ಬೆಲೆಗಿಂತ ಹೆಚ್ಚಿನ ಮೊತ್ತಕ್ಕೆ ಭಾರತವು ಒಪ್ಪಿಕೊಂಡಿ ದ್ದೇಕೆ ಎನ್ನುವುದನ್ನು ಬಹಿರಂಗಗೊಳಿಸಬೇಕು ಎನ್ನುವುದನ್ನು ಕೇಂದ್ರ ಮಾಹಿತಿ ಆಯೋಗ (ಸಿಐಸಿ)ವು ಎತ್ತಿ ಹಿಡಿದಿದೆ. ಅಲ್ಲದೆ ಹೊಸ ಯುದ್ಧನೌಕೆಯನ್ನು ಖರೀದಿಸುವ ಬದಲಿಗೆ ನವೀಕೃತ ನೌಕೆಯನ್ನು ದೇಶವು ಆಯ್ಕೆ ಮಾಡಿಕೊಂಡಿದ್ದೇಕೆ ಎನ್ನುವುದನ್ನು ಬಹಿರಂಗ ಗೊಳಿಸುವಂತೆ ಅದು ರಕ್ಷಣಾ ಸಚಿವಾಲಯಕ್ಕೂ ನಿರ್ದೇಶ ನೀಡಿದೆ.

ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಬಳಿಕ ಐಎನ್‌ಎಸ್ ವಿಕ್ರಮಾದಿತ್ಯ ಎಂದು ನಾಮಕರಣಗೊಂಡಿರುವ ರಷ್ಯದ ಅಡ್ಮಿರಲ್ ಗೊರ್ಷಕೊವ್ ಅನ್ನು 974 ಮಿ.ಡಾ. ಗಳಿಗೆ ಖರೀದಿಸುವ ಒಪ್ಪಂದಕ್ಕೆ 2004ರಲ್ಲಿ ಆಗಿನ ಎನ್‌ಡಿಎ ಸರಕಾರವು ಸಹಿ ಹಾಕಿತ್ತು. ರಷ್ಯಾ ಅಂತಿಮವಾಗಿ 2010ರಲ್ಲಿ ಈ ಮೊತ್ತವನ್ನು 2.35 ಶತಕೋಟಿ ಡಾ.ಗಳಿಗೆ ಹೆಚ್ಚಿಸಿತ್ತು.

ಪರಿವರ್ತನೆ ಮತ್ತು ನವೀಕರಣ ವೆಚ್ಚಗಳು ಸೇರಿದಂತೆ ಈಗ 30 ವರ್ಷಗಳಷ್ಟು ಹಳೆಯದಾಗಿರುವ ನೌಕೆಯ ಮೇಲೆ ಮಾಡಲಾಗಿರುವ ‘ನಿವ್ವಳ ಅಂತಿಮ ವೆಚ್ಚ ’ವನ್ನು ಹಾಗೂ ಭಾರತದಿಂದ ಹಣ ಪಾವತಿಯ ದಿನಾಂಕಗಳನ್ನು ಬಹಿರಂಗಗೊಳಿಸುವಂತೆ ಆಯೋಗವು ಭಾರತೀಯ ನೌಕಾಪಡೆಗೆ ನಿರ್ದೇಶ ನಿಡಿದೆ.

ಈ ಕುರಿತ ಮಾಹಿತಿಗಳನ್ನು ರಕ್ಷಣಾ ಸಚಿವಾಲಯವು ಒದಗಿಸಬೇಕಾಗುತ್ತದೆ ಎಂದು ಹೇಳುವ ಮೂಲಕ ಆಯೋಗದ ದಾರಿ ತಪ್ಪಿಸಲು ನೌಕಾಪಡೆಯು ಪ್ರಯತ್ನಿಸುತ್ತಿದ್ದರೆ, ನೌಕೆಗೆ ಸಂಬಂಧಿಸಿದ ಎಲ್ಲ ಕಡತಗಳು ನೌಕಾಪಡೆಯ ಕೇಂದ್ರ ಕಚೇರಿಯಲ್ಲಿವೆ ಮತ್ತು ವಿವರಗಳನ್ನು ಬಹಿರಂಗಗೊಳಿಸುವಂತೆ ಅದಕ್ಕೆ ಸೂಚಿಸಲಾಗಿದೆ ಎಂದು ರಕ್ಷಣಾ ಸಚಿವಾಲಯವು ಸ್ಪಷ್ಟಪಡಿಸಿತ್ತು.

ರಷ್ಯದ ಬೇಡಿಕೆಯಂತೆ ವೆಚ್ಚ ಪರಿಷ್ಕರಣೆಗೆ ಒಪ್ಪಿಗೆಗೆ ಸಂಬಂಧಿಸಿದ ಕಡತ ಟಿಪ್ಪಣಿ ಗಳು, ಪತ್ರ ವ್ಯವಹಾರಗಳು ಮತ್ತು ದಾಖಲೆಗಳನ್ನು ಬಹಿರಂಗಗೊಳಿಸುವಂತೆ ಕೇಂದ್ರ ಮಾಹಿತಿ ಆಯುಕ್ತ ಅಮಿತಾವ್ ಭಟ್ಟಾಚಾರ್ಯ ಅವರು ನೌಕಾಪಡೆಗೆ ನಿರ್ದೇಶ ನೀಡಿ ದ್ದಾರೆ.

44,500 ಟನ್ ತೂಕದ ಈ ವಿಮಾನ ವಾಹಕ ನೌಕೆಯ ಖರೀದಿಗೆ ಸಂಬಂಧಿಸಿದಂತೆ ಹಲವಾರು ಮಾಹಿತಿಗಳನ್ನು ಕೋರಿ ಮಾಹಿತಿ ಹಕ್ಕು ಕಾರ್ಯಕರ್ತ ಸುಭಾಷ್ ಅಗರವಾಲ್ ಅವರು ಆರ್‌ಟಿಐ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು.

ಅಂದಿನ ಸೋವಿಯತ್ ರಷ್ಯಾ 1987,ಡಿ.20ರಂದು ಅಡ್ಮಿರಲ್ ಗೊರ್ಷಕೊವ್ ಅನ್ನು ಕಾರ್ಯಾರಂಭಗೊಳಿಸಿತ್ತು ಮತ್ತು 1996ರಲ್ಲಿ ಅದನ್ನು ಸೇವೆಯಿಂದ ಹಿಂದೆಗೆದು ಕೊಂಡಿತ್ತು.

ಈ ನೌಕೆಯು 30ಕ್ಕೂ ಅಧಿಕ ಯುದ್ಧ ವಿಮಾನಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News