ಐಟಿಐಗೆ ಹೊಸ ರೂಪ ನೀಡಲು ಸರಕಾರದ ನಿರ್ಧಾರ
ಹೊಸದಿಲ್ಲಿ, ಮೇ 21: ಕೌಶಲ್ಯ ಶಿಕ್ಷಣ ಒದಗಿಸುತ್ತಿರುವ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ)ಗಳನ್ನು ಅತಿಶೀಘ್ರವಾಗಿ ಸಾಂಪ್ರದಾಯಿಕ ಶಾಲೆಗಳಾಗಿ ಅಭಿವೃದ್ಧಿಗೊಳಿಸುವ ಮೂಲಕ ಐಟಿಐ ಪದವೀಧರರಿಗೆ ಇತರ ಶಾಲೆಗಳಲ್ಲಿ ನಿಯಮಾನುಕ್ರಮ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಡಲಾಗುವುದು.
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಈ ನಿಟ್ಟಿನಲ್ಲಿ ಮಾಡಿರುವ ಪ್ರಸ್ತಾವನೆಯನ್ನು ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯವು ಅಂಗೀಕರಿಸಿದ್ದು ಇದರಿಂದ ಈ ವರ್ಷ ಐಟಿಐಯಿಂದ ಪದವಿ ಪಡೆಯಲಿರುವ 2 ಮಿಲಿಯನ್‌ಗೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.
ಸಿಬಿಎಸ್‌ಇ ಮತ್ತು ಐಸಿಎಸ್‌ಇ ರೀತಿಯಲ್ಲಿ ಪ್ರತ್ಯೇಕ ಮಂಡಳಿಯೊಂದನ್ನು ರಚಿಸಲಾಗುವುದು. ಈ ಮಂಡಳಿ ನೀಡುವ ಪ್ರಮಾಣಪತ್ರ ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ಶಿಕ್ಷಣ ಮಂಡಳಿ ನೀಡುವ ಪ್ರಮಾಣಪತ್ರದಷ್ಟೇ ಮಹತ್ವದ್ದಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತಾವನೆಗೆ ನಿಶ್ಚಿತ ಚೌಕಟ್ಟು ದೊರೆತ ಬಳಿಕ , ಪರೀಕ್ಷೆ ನಡೆಸುವುದು, ಪ್ರಮಾಣಪತ್ರ ನೀಡುವುದು ಇತ್ಯಾದಿ ಕಾರ್ಯದ ಉಸ್ತುವಾರಿಯನ್ನು ವೃತ್ತಿಪರ ತರಬೇತಿಯ ರಾಷ್ಟ್ರೀಯ ಸಮಿತಿ (ಎನ್‌ಸಿವಿಟಿ)ಗೆ ವಹಿಸಲಾಗುತ್ತದೆ.