ವೈರಲ್ ಆಯ್ತು ಭಾರತದ ಗ್ರಾಮವೊಂದರ ಬಗೆಗಿನ ನಿಕ್ಕಿ ಮಿನಾಜ್ ಪೋಸ್ಟ್: ಆಕೆ ಹೇಳಿದ್ದೇನು?

Update: 2017-05-22 12:16 GMT

ಹೊಸದಿಲ್ಲಿ, ಮೇ 22; ಪ್ರಸಿದ್ಧ ಅಮೆರಿಕನ್ ರ್ಯಾಪರ್, ಗಾಯಕಿ ನಿಕ್ಕಿ ಮಿನಾಜ್ ಹಾಕಿರುವ ಇನ್ಸ್ಟಾಗ್ರಾಮ್ ಪೋಸ್ಟ್ ಒಂದು ಇದೀಗ ಭಾರೀ ಸುದ್ದಿ ಮಾಡುತ್ತಿದೆ. ಕೆಲ ವರ್ಷಗಳಿಂದ ಮೂಲಭೂತ ಸೌಕರ್ಯ ವಂಚಿತ ಭಾರತದ ಗ್ರಾಮವೊಂದಕ್ಕೆ ತಾನು ಸಹಾಯಹಸ್ತ ನೀಡುತ್ತಿರುವುದಾಗಿಯೂ, ಇದರಿಂದ ಗ್ರಾಮಸ್ಥರು ಹರ್ಷಗೊಂಡಿದ್ದಾರೆ ಎಂದಿರುವ ನಿಕ್ಕಿ ಮಿನಾಜ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

“ಇಂತಹ ಸಂಗತಿಗಳು ನನಗೆ ಹೆಮ್ಮೆ ಮೂಡಿಸುತ್ತದೆ. ಭಾರತದ ಹಳ್ಳಿಯೊಂದಕ್ಕೆ ಕೆಲ ವರ್ಷಗಳಿಂದ ನಾನು ನೀಡುತ್ತಿರುವ ಹಣಕಾಸಿನ ನೆರವಿನಿಂದ ಗ್ರಾಮಸ್ಥರು ಕಂಪ್ಯೂಟರ್ ಕೇಂದ್ರ, ಟೈಲರಿಂಗ್  ಸಂಸ್ಥೆ ಹಾಗೂ ಎರಡು ನೀರಿನ ಬಾವಿಗಳನ್ನು ಪಡೆಯುವಂತಾಗಿದೆ” ಎಂದು ಮಿನಾಜ್ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವರು ಕೈಪಂಪ್ ಒಂದನ್ನು ತೋರಿಸುತ್ತಿರುವ ವಿಡಿಯೋ ಒಂದನ್ನು ಹಾಕಿದ್ದಾರೆ.

“ನಾವು ಸಣ್ಣ ಸಣ್ಣ ವಿಚಾರಗಳಿಗೆ ತಲೆಕೆಡಿಸಿ ತಗಾದೆ ಎತ್ತುತ್ತಿರಬೇಕಾದರೆ, ಕೆಲವು ಜನರಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿಯಿದೆ” ಎಂದವರು ಹೇಳಿದ್ದಾರೆ.

ಮಹಿಳೆಯರು ಹಾಗೂ ಕೆಲ ಹೊಸ ಹೊಲಿಗೆ ಯಂತ್ರಗಳಿರುವ ಇನ್ನೊಂದು ಚಿತ್ರವನ್ನು ಪೋಸ್ಟ್ ಮಾಡಿರುವ ನಿಕ್ಕಿ, “ಭಾರತದ ಸಹೋದರಿಯರ ಬಗ್ಗೆ ಹೆಮ್ಮೆಯಿದೆ. ನೀರಿನ ಬಾವಿ ಹೊಂದುವುದು, ತಂತ್ರಜ್ಞಾನಗಳ ಬಗ್ಗೆ ಕಲಿಯುವುದು, ಕಂಪ್ಯೂಟರ್ ಮೊದಲಾದ ಸೌಲಭ್ಯಗಳನ್ನು ಹೊಂದುವುದು ಅವರ ಬಯಕೆಯಾಗಿತ್ತು. ನಾವಿನ್ನೂ ಆರಂಭದಲ್ಲಿದ್ದೇವೆ.” ಎಂದಿದ್ದಾರೆ.

ನಿಕ್ಕಿ ಮಿನಾಜ್ ರ ಈ ಪೋಸ್ಟ್ ಗಳು ಇದೀಗ ವೈರಲ್ ಆಗಿದ್ದು, ಸಾಕಷ್ಟು ಪ್ರಶಂಸೆಗಳು ವ್ಯಕ್ತವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News