ಕೋಲ್‌ಮಾಲ್: ಮಾಜಿ ಕಲ್ಲಿದ್ದಲು ಕಾರ್ಯದರ್ಶಿ, ಇಬ್ಬರು ಅಧಿಕಾರಿಗಳಿಗೆ ಎರಡು ವರ್ಷ ಜೈಲುಶಿಕ್ಷೆ

Update: 2017-05-22 13:17 GMT

ಹೊಸದಿಲ್ಲಿ,ಮೇ 22: ಮಧ್ಯಪ್ರದೇಶದ ಖಾಸಗಿ ಕಂಪನಿಯೊಂದಕ್ಕೆ ಕಲ್ಲಿದ್ದಲು ಗಣಿ ಹಂಚಿಕೆಗೆ ಸಂಬಂಧಿಸಿದ ಕಲ್ಲಿದ್ದಲು ಹಗರಣ ಪ್ರಕರಣವೊಂದರಲ್ಲಿ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್.ಸಿ.ಗುಪ್ತಾ ಮತ್ತು ಇತರ ಇಬ್ಬರು ಮಾಜಿ ಐಎಎಸ್ ಅಧಿಕಾರಿಗಳಾದ ಕೆ.ಎಸ್.ಕ್ರೋಫಾ ಮತು ಕೆ.ಸಿ.ಸಮಾರಿಯಾ ಅವರಿಗೆ ಸೋಮವಾರ ಇಲ್ಲಿಯ ವಿಶೇಷ ಸಿಬಿಐ ನ್ಯಾಯಾಲಯವು ತಲಾ ಎರಡು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದೆ. ಇದು ಹಿರಿಯ ಅಧಿಕಾರಿಗಳನ್ನು ದೋಷಿಗಳೆಂದು ಘೋಷಿಸಿರುವ ಮೊದಲ ಕಲ್ಲಿದ್ದಲು ಹಗರಣ ಪ್ರಕರಣವಾಗಿದೆ.

ಜೈಲುಶಿಕ್ಷೆಯ ಜೊತೆಗೆ ಈ ಮೂವರಿಗೂ ತಲಾ ಒಂದು ಲಕ್ಷ ರೂ.ಗಳ ದಂಡವನ್ನೂ ವಿಧಿಸಲಾಗಿದೆ.
ಇವರ ಜೊತೆಗೆ ಖಾಸಗಿ ಕಂಪನಿ ಕಮಲ್ ಸ್ಪಾಂಜ್ ಸ್ಟೀಲ್ ಆ್ಯಂಡ್ ಪವರ್ ಲಿ.ಗೆ ಒಂದು ಕೋ.ರೂ.ದಂಡವನ್ನು ವಿಧಿಸಿರುವ ನ್ಯಾಯಾಲಯವು, ಅದರ ಆಡಳಿತ ನಿರ್ದೇಶಕ ಪವನ್ ಕುಮಾರ್ ಅಹ್ಲುವಾಲಿಯಾಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 30 ಲ.ರೂ.ಗಳ ದಂಡ ವಿಧಿಸಿದೆ.

ಎಲ್ಲ ದೋಷಿಗಳಿಗೂ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅನುಕೂಲ ವಾಗುವಂತೆ ಜಾಮೀನು ಮಂಜೂರು ಮಾಡಲಾಗಿದೆ.
ಮಧ್ಯಪ್ರದೇಶದ ಥೇಸ್ಗೋರಾ-ಬಿ ರುದ್ರಪುರಿ ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿನ ಅಕ್ರಮಗಳಿಗಾಗಿ ಗುಪ್ತಾ, ಕ್ರೋಫಾ ಮತ್ತು ಸಮಾರಿಯಾ ತಪ್ಪಿತಸ್ಥರೆಂದು ನ್ಯಾಯಾಲಯ ವು ಮೇ 19ರಂದು ಘೋಷಿಸಿತ್ತು. ವಂಚನೆ ಮತ್ತು ಇತರ ಅಪರಾಧಗಳಿಗಾಗಿ ಕಂಪನಿ ಮತ್ತು ಅಹ್ಲುವಾಲಿಯಾರನ್ನೂ ತಪ್ಪಿತಸ್ಥರೆಂದು ಅದು ಎತ್ತಿ ಹಿಡಿದಿತ್ತು. ಆದರೆ ಚಾರ್ಟರ್ಡ್ ಅಕೌಂಟಂಟ್ ಅಮಿತ್ ಗೋಯಲ್ ಅವರನ್ನು ನ್ಯಾಯಾಲಯವು ಖುಲಾಸೆಗೊಳಿಸಿತ್ತು.

ಸಿಬಿಐ 2012,ಅಕ್ಟೋಬರ್‌ನಲ್ಲಿ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿತ್ತಾದರೂ 2014,ಮಾ.27ರಂದು ಮುಕ್ತಾಯ ವರದಿಯನ್ನು ಸಲ್ಲಿಸಿತ್ತು. 2014,ಅ.13ರಂದು ಈ ವರದಿಯನ್ನು ತಿರಸ್ಕರಿಸಿದ್ದ ನ್ಯಾಯಾಲಯವು ಗುಪ್ತಾ ಮತ್ತು ಇತರ ಆರೋಪಿಗಳಿಗೆ ಸಮನ್ಸ್ ಹೊರಡಿಸಿತ್ತು.

ಕಂಪನಿಯು ತನ್ನ ನಿವ್ವಳ ವೌಲ್ಯ ಮತ್ತು ಹಾಲಿ ಸಾಮರ್ಥ್ಯದ ಬಗ್ಗೆ ತಪ್ಪು ಮಾಹಿತಿ ಗಳನ್ನು ನೀಡಿದೆ ಎಂದು ಆರೋಪಿಸಿದ್ದ ಸಿಬಿಐ, ಕಂಪನಿಗೆ ಕಲ್ಲಿದ್ದಲು ಗಣಿಯನ್ನು ಮಂಜೂರು ಮಾಡುವಂತೆ ರಾಜ್ಯ ಸರಕಾರವು ಶಿಫಾರಸು ಮಾಡಿರಲಿಲ್ಲ ಎಂದು ಹೇಳಿತ್ತು.

ಕಲ್ಲಿದ್ದಲು ಗಣಿಗಾರಿಕೆ ಹಕ್ಕುಗಳ ಕನಿಷ್ಠ 40 ಪ್ರಕರಣಗಳಿಗೆ ಒಪ್ಪಿಗೆ ನೀಡಿದ್ದ ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿದ್ದ ಗುಪ್ತಾ ಈ ಬೃಹತ್ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು.

ಕಳೆದ ವರ್ಷದ ಅ.14ರಂದು ಆರೋಪಿಗಳ ವಿರುದ್ಧ ಆರೋಪಗಳನ್ನು ರೂಪಿಸಿದ್ದ ನ್ಯಾಯಾಲಯವು ಗುಪ್ತಾ ಅವರು ಕಲ್ಲಿದ್ದಲು ಸಚಿವಾಲಯವನ್ನೂ ಹೊಂದಿದ್ದ ಆಗಿನ ಪ್ರಧಾನಿ ಮನಮೋಹನ ಸಿಂಗ್ ಅವರನ್ನು ಕಲ್ಲಿದ್ದಲು ಗಣಿ ಹಂಚಿಕೆ ವಿಷಯದಲ್ಲಿ 'ಕತ್ತಲಲ್ಲಿರಿಸಿದ್ದರು ' ಹಾಗೂ ಕಾನೂನು ಮತ್ತು ತನ್ನಲ್ಲಿರಿಸಲಾಗಿದ್ದ ನಂಬಿಕೆಯನ್ನು ಉಲ್ಲಂಘಿಸಿದ್ದರು ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಗುಪ್ತಾ ವಿರುದ್ಧ ಇನ್ನೂ 10 ಪ್ರತ್ಯೇಕ ಕಲ್ಲಿದ್ದಲು ಹಗರಣ ಪ್ರಕರಣಗಳು ಬಾಕಿಯಿವೆ. ಈ ಎಲ್ಲ ಪ್ರಕರಣಗಳ ಜಂಟಿ ವಿಚಾರಣೆಯನ್ನು ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಕಳೆದ ವರ್ಷ ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News