ಎನ್‌ಎಸ್‌ಜಿಗೆ ಭಾರತ ಸೇರ್ಪಡೆ: ಚೀನಾದಿಂದ ಮತ್ತೆ ವಿರೋಧ

Update: 2017-05-22 15:26 GMT

ಬೀಜಿಂಗ್, ಮೇ 22: ಜೂನ್‌ನಲ್ಲಿ ನಡೆಯಲಿರುವ ಪರಮಾಣು ಪೂರೈಕೆದಾರರ ಗುಂಪಿ (ಎನ್‌ಎಸ್‌ಜಿ)ನ ಪೂರ್ಣಾಧಿವೇಶನದಲ್ಲಿ ಗುಂಪಿಗೆ ಭಾರತದ ಸೇರ್ಪಡೆಯನ್ನು ತಾನು ಬೆಂಬಲಿಸುವುದಿಲ್ಲ ಎಂಬ ಇಂಗಿತವನ್ನು ಚೀನಾ ಸೋಮವಾರ ವ್ಯಕ್ತಪಡಿಸಿದೆ.

ಪರಮಾಣು ಪ್ರಸರಣ ನಿಷೇಧ ಒಪ್ಪಂದ (ಎನ್‌ಪಿಟಿ)ಕ್ಕೆ ಸಹಿ ಹಾಕದ ದೇಶಗಳಿಂದ ಅರ್ಜಿಗಳನ್ನು ಪಡೆಯುವುದಕ್ಕೆ ಸಂಬಂಧಿಸಿ ಸಾರ್ವತ್ರಿಕ ಸೂತ್ರವೊಂದು ರೂಪುಗೊಳ್ಳದೆ ತಾನು ಭಾರತದ ಸೇರ್ಪಡೆಯನ್ನು ಬೆಂಬಲಿಸುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಭಾರತ ಮತ್ತು ಪಾಕಿಸ್ತಾನ ಮುಂತಾದ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕದ ದೇಶಗಳನ್ನು ಎನ್‌ಎಸ್‌ಜಿಗೆ ಸೇರ್ಪಡೆಗೊಳಿಸುವುದಕ್ಕೆ ಎರಡು ಹಂತಗಳ ಪ್ರಕ್ರಿಯೆ ಇರಬೇಕು ಎಂದು ಚೀನಾ ಹೇಳಿದೆ. ಅವುಗಳೆಂದರೆ- ಇಂಥ ಎಲ್ಲ ದೇಶಗಳಿಗಾಗಿ ಸಾರ್ವತ್ರಿಕ ಸೂತ್ರವೊಂದನ್ನು ರೂಪಿಸಬೇಕು ಮತ್ತು ಪ್ರತಿಯೊಂದು ದೇಶದ ಅರ್ಜಿಯನ್ನು ಎತ್ತಿಕೊಳ್ಳಬೇಕು.

 ಸ್ವಿಟ್ಸರ್‌ಲ್ಯಾಂಡ್‌ನ ಬರ್ನ್‌ನಲ್ಲಿ ನಡೆಯಲಿರುವ ಎನ್‌ಎಸ್‌ಜಿ ಪೂರ್ಣಾಧಿವೇಶನದಲ್ಲಿ ಭಾರತದ ಸೇರ್ಪಡೆಗೆ ಸಂಬಂಧಿಸಿ ಚೀನಾ ತೆಗೆದುಕೊಳ್ಳಲಿರುವ ನಿಲುವು ಉಭಯ ದೇಶಗಳ ನಡುವಿನ ಬಾಂಧವ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

‘‘ಎನ್‌ಎಸ್‌ಜಿಗೆ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕದ ದೇಶಗಳ ಸೇರ್ಪಡೆಯ ವಿಚಾರದಲ್ಲಿ ಚೀನಾದ ನಿಲುವು ಬದಲಾಗಿಲ್ಲ’’ ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News