ದಿಲ್ಲಿಯಿಂದ ಅಮೆರಿಕಕ್ಕೆ ಒಂದು ರೂ.ಗೆ ಏರ್ ಇಂಡಿಯಾ ಟಿಕೆಟ್!

Update: 2017-05-22 17:38 GMT

ಹೊಸದಿಲ್ಲಿ, ಮೇ 22: ಸಾಮಾನ್ಯವಾಗಿ ವಿಮಾನಯಾನ ದರಗಳು ಆರಂಭವಾಗುವುದೇ ಸಾವಿರಾರು ರೂ.ಗಳಿಂದ. ಸೀಸನ್ ಗಳಲ್ಲಂತೂ ಈ ದರ ಬಹಳಷ್ಟು ಹೆಚ್ಚಳವಾಗುವುದು ಸಾಮಾನ್ಯ. ಪ್ರಾದೇಶಿಕ ವಿಮಾನಗಳ ದರವೇ ದುಬಾರಿಯಾಗಿರುವಾಗ ಇಲ್ಲೊಬ್ಬ ಯುವಕನಿಗೆ ಏರ್ ಇಂಡಿಯಾ ದಿಲ್ಲಿಯಿಂದ ಅಮೆರಿಕ ಪ್ರಯಾಣಕ್ಕೆ ನೀಡಿರುವ ಟಿಕೆಟ್ ದರ ಕೇವಲ 1 ರೂ.

ವಿಚಿತ್ರವಾದರೂ ಸತ್ಯ ಘಟನೆಯಾದ ಈ ಪ್ರಕರಣದ ಹಿಂದೆ ಚಾಣಾಕ್ಷ ಯುವಕನೊಬ್ಬನಿದ್ದಾನೆ. ಹ್ಯಾಕಿಂಗ್ ಜಗತ್ತಿನಲ್ಲಿ ಬೇರೆಯವರ ಕಂಪ್ಯೂಟರ್ ನೊಳಕ್ಕೆ ನುಗ್ಗಿ ಡಾಟಾಗಳನ್ನು ಕಳವು ಮಾಡಿ ಲಕ್ಷಾಂತರ ರೂ.ಗಳನ್ನು ಗಳಿಸುವವರೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ದೇಶದ ಪ್ರಮುಖ ವಿಮಾನಯಾನ ಸಂಸ್ಥೆಯ ದುರ್ಬಲ ಟಿಕೆಟ್ ವ್ಯವಸ್ಥೆಯ ಬಗ್ಗೆ ಎಚ್ಚರಿಸಿರುವ ಯುವಕ, ಈ ಬಗ್ಗೆ ಸ್ವತಃ ತಾನೇ ವ್ಯವಸ್ಥೆಯನ್ನು ಹ್ಯಾಕ್ ಮಾಡಿ ಎಲ್ಲರ ಹುಬ್ಬೇರಿಸಿದ್ದಾನೆ.

ಈ ಬಗ್ಗೆ ಏರ್ ಇಂಡಿಯಾ ಸಂಸ್ಥೆಗೆ ಇ-ಮೇಲ್  ಸಂದೇಶ ಕಳುಹಿಸಿದ್ದ ಕೌಶಿಕ್ ಸಜ್ನಾನಿ, ಸಂಸ್ಥೆಯ ಅಪ್ಲಿಕೇಶನ್ ಟಿಕೆಟಿಂಗ್ ವ್ಯವಸ್ಥೆಯಲ್ಲಿದ್ದ ಪ್ರಮುಖ ಸಮಸ್ಯೆಯ ಬಗ್ಗೆ ತಿಳಿಸಿದ್ದ. ಅಲ್ಲದೆ ಹ್ಯಾಕಿಂಗನ್ನು ದುರುಪಯೋಗಪಡಿಸುವ ಯಾವ ಉದ್ದೇಶವೂ ತನಗಿಲ್ಲ. ಈ ಬಗ್ಗೆ ವಿವರವಾಗಿ ಮುಂದೆ ತಿಳಿಸುತ್ತೇನೆ. ಬೇರೆ ಹ್ಯಾಕರ್ ಗಳು ಇದನ್ನು ದುರುಪಯೋಗಪಡಿಸಿದ್ದಲ್ಲಿ ಸಂಸ್ಥೆಗೆ ಭಾರೀ ನಷ್ಟವಾಗಲಿದೆ ಎಂದಿದ್ದ.

ಇ-ಮೇಲ್ ಕಳುಹಿಸಿ ಹಲವು ದಿನಗಳ ನಂತರ ಏರ್ ಇಂಡಿಯಾದ ಫೈನಾನ್ಸ್ ಮ್ಯಾನೇಜರ್ ಕೌಶಿಕ್ ಗೆ ಕರೆ ಮಾಡಿ ವ್ಯವಸ್ಥೆಯಲ್ಲಿರುವ ಸಮಸ್ಯೆಯನ್ನು ಸಾಬೀತುಪಡಿಸುವಂತೆ ಹೇಳಿದ್ದರು. ತಕ್ಷಣವೇ ಹ್ಯಾಕಿಂಗ್ ಮೂಲಕ ಕೌಶಿಕ್ ದಿಲ್ಲಿಯಿಂದ ಅಮೆರಿಕಕ್ಕೆ 1 ರೂ. ನಲ್ಲಿ ಟಿಕೆಟ್ ಖರೀದಿಸಿ, ಅದನ್ನು ಸಂಸ್ಥೆಗೆ ಮೇಲ್ ಮಾಡಿದ್ದ. ಮೇಲ್ ನೊಂದಿಗೆ ವಿಡಿಯೋ ಒಂದನ್ನು ಕಳುಹಿಸಿದ್ದ ಕೌಶಿಕ್ ತಾನು ಹೇಗೆ ಟಿಕೆಟಿಂಗ್ ವ್ಯವಸ್ಥೆಯನ್ನು ಹ್ಯಾಕ್ ಮಾಡಿದ್ದೇನೆ ಎನ್ನುವುದನ್ನು ವಿವರಿಸಿದ್ದ. ಇದರಿಂದ ಎಚ್ಚೆತ್ತ ಏರ್ ಇಂಡಿಯಾ, ಕೌಶಿಕ್ ಜಾಣ್ಮೆಗೆ ತಲೆದೂಗಿ ಇಂಟರ್ನ್ ಶಿಪ್ ಆಫರ್ ನೀಡಿದ್ದು, ಆದರೆ ಕೌಶಿಕ್ ನಿರಾಕರಿಸಿದ್ದ.

4 ರೂ.ಗೆ ಗೋವಾ ಪ್ರಯಾಣ

ಈ ಘಟನೆ ನಡೆಯುವ ಕೆಲ ದಿನಗಳಿಗೆ ಮುಂಚಿತವಾಗಿ ಕೌಶಿಕ್ 4,028 ರ ಗೋವಾ ಟಿಕೆಟನ್ನು ಕೇವಲ 4 ರೂ.ಗೆ ಖರೀದಿಸಿದ್ದ. ಈ  ಬಗ್ಗೆ ಸ್ಪೈಸ್ ಜೆಟ್ ಸಂಸ್ಥೆಗೆ ಮೇಲ್ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮೇಲ್ ಗಮನಿಸಿದ್ದ ಸಂಸ್ಥೆಯ ಜನರಲ್ ಮ್ಯಾನೇಜರ್ ಗೆ ಕೌಶಿಕ್ ಹೇಳಲು ಬಂದ ವಿಚಾರ ಅರ್ಥವಾಗಿಲ್ಲವೋ ಅಥವಾ ಅರ್ಥವಾಗಿದ್ದರೂ ಸಂಸ್ಥೆಯ ಪ್ರಮಾದವನ್ನು ಒಪ್ಪಲು ತಯಾರಿರಲಿಲ್ಲವೋ ಕೌಶಿಕ್ ಮೇಲ್ ನಿಂದ ಯಾವುದೇ ಪ್ರಯೋಜನವಾಗಿರಲಿಲ್ಲ.

ಇಷ್ಟೇ ಅಲ್ಲದೆ ಕೌಶಿಕ್ ಹಲವು ಬಾರಿ 1  ರೂ.ಗೆ ಬಿರಿಯಾನಿಯನ್ನೂ ಆರ್ಡರ್ ಮಾಡಿದ್ದ. “ಏರ್ ಇಂಡಿಯಾ, ಸ್ಪೈಸ್ ಜೆಟ್, ಕ್ಲಿಯರ್ ಟ್ರಿಪ್, ಮೊಬಿಕ್ವಿಕ್ ಹಾಗೂ ಫಾಸೋಸ್ ನಾನು ಮಾತುಕತೆ ನಡೆಸಿರುವ ಕಂಪೆನಿಗಳಾಗಿವೆ. ಉಳಿದವರಿಗೆ ಯಾವುದೇ ದೋಷಗಳ ಬಗ್ಗೆ ಮಾಹಿತಿ ನೀಡಿಲ್ಲ. ಅದೇ ಕಾರಣಕ್ಕಾಗಿ ತಾಂತ್ರಿಕ ವಿವರಗಳನ್ನು ನಾನೆಲ್ಲೂ ಹಂಚಿಕೊಂಡಿಲ್ಲ” ಎಂದು ಕೌಶಿಕ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News