ಪಾಕಿಸ್ತಾನದ ವಸೀಂ ಅಕ್ರಂ 1992ರ ವಿಶ್ವಕಪ್ ಸಾಧನೆಯನ್ನು ನೆನಪಿಸಿದ ಮಿಚೆಲ್ ಜಾನ್ಸನ್

Update: 2017-05-22 18:01 GMT

ಹೊಸದಿಲ್ಲಿ, ಮೇ 22: ಪುಣೆ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್‌ಗೆ 1 ರನ್‌ಗಳ ರೋಚಕ ಗೆಲುವನ್ನು ತಂದುಕೊಟ್ಟ ಎಡಗೈ ವೇಗದ ಬೌಲರ್ ಮಿಚೆಲ್ ಜಾನ್ಸನ್ ಕೊನೆಯ ಓವರ್ ಹೀರೋವಾಗಿ ಮೂಡಿಬಂದರು. ಈ ಮೂಲಕ 1992ರ ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನದ ವಸೀಂ ಅಕ್ರಂರ ಸಾಧನೆಯನ್ನು ನೆನಪಿಸಿದರು.

ಪುಣೆ ಗೆಲುವಿಗೆ ಅಂತಿಮ ಓವರ್‌ನಲ್ಲಿ 10 ರನ್ ಅಗತ್ಯವಿತ್ತು. ಕೊನೆಯ ಓವರ್ ಬೌಲಿಂಗ್ ಮಾಡಿದ ಜಾನ್ಸನ್ ಸತತ ಎಸೆತಗಳಲ್ಲಿ ಮನೋಜ್ ತಿವಾರಿ ಹಾಗೂ ನಾಯಕ ಸ್ಟೀವ್ ಸ್ಮಿತ್ ವಿಕೆಟ್‌ನ್ನು ಕಬಳಿಸಿದ್ದರು. ಜಾನ್ಸನ್ ಎಸೆದ ಮೊದಲ ಎಸೆತವನ್ನು ತಿವಾರಿ ಬೌಂಡರಿಗೆ ಅಟ್ಟಿದ್ದರು. ಮುಂದಿನ ಮೂರು ಎಸೆತಗಳಲ್ಲಿ 5 ರನ್ ನೀಡಿದ ಜಾನ್ಸನ್ ಮುಂಬೈ ತಂಡ ಮೂರನೆ ಬಾರಿ ಐಪಿಎಲ್ ಪ್ರಶಸ್ತಿ ಜಯಿಸಲು ನೆರವಾಗಿದ್ದರು.

 ಕೊನೆಯ ಓವರ್‌ನಲ್ಲಿ ಮುಂಬೈಗೆ ಗೆಲುವು ತಂದ ಜಾನ್ಸನ್ 1992ರ ವಿಶ್ವಕಪ್‌ನಲ್ಲಿ ಅಕ್ರಂರ ಪ್ರದರ್ಶನವನ್ನು ನೆನಪಿಸಿದರು. ಇಂಗ್ಲೆಂಡ್‌ನ ವಿರುದ್ಧ 1992ರಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್‌ನಲ್ಲಿ ಪಾಕ್ ನಾಯಕ ಇಮ್ರಾನ್ ಖಾನ್ ಅವರು ಎಡಗೈ ವೇಗಿ ಅಕ್ರಂ(3-49) ಕೈಗೆ ಚೆಂಡು ನೀಡಿದ್ದರು. ಅಲನ್ ಲ್ಯಾಂಬ್ ಹಾಗೂ ಕ್ರಿಸ್ ಲೂವಿಸ್ ವಿಕೆಟ್‌ಗಳನ್ನು ಸತತ ಎಸೆತಗಳಲ್ಲಿ ಕಬಳಿಸಿದ್ದ ಅಕ್ರಂ ಇಂಗ್ಲೆಂಡ್‌ನ ಮಧ್ಯಮ ಕ್ರಮಾಂಕದ ಕುಸಿತ ಕಾರಣರಾಗಿದ್ದರು. ಪಾಕ್ ತಂಡ 22 ರನ್‌ಗಳಿಂದ ಜಯ ಸಾಧಿಸಿ ಚೊಚ್ಚಲ ವಿಶ್ವಕಪ್ ಜಯಿಸಲು ಪ್ರಮುಖ ಕಾಣಿಕೆ ನೀಡಿದ್ದರು.

ಎ.24 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ತಂಡ ಪುಣೆ ವಿರುದ್ಧ 3 ರನ್‌ಗಳಿಂದ ಸೋತ ಬಳಿಕ ಜಾನ್ಸನ್ ಮುಂಬೈನ ಆಡುವ 11ರ ಬಳಗದಿಂದ ಕೈಬಿಡಲ್ಪಟ್ಟಿದ್ದರು. ಆ ಪಂದ್ಯದಲ್ಲಿ ಅವರು 4 ಓವರ್‌ಗಳಲ್ಲಿ 34 ರನ್‌ನೀಡಿ 1 ವಿಕೆಟ್ ಪಡೆದಿದ್ದರು.

ಕೆಕೆಆರ್ ವಿರುದ್ಧದ ಮಳೆ ಬಾಧಿತ ಪಂದ್ಯದಲ್ಲಿ ಮಿಚೆಲ್ ಮೆಕ್ಲಿನಘನ್ ಗಾಯಗೊಂಡ ಕಾರಣ ಜಾನ್ಸನ್ ಮುಂಬೈ ತಂಡದಲ್ಲಿ ಮತ್ತೊಮ್ಮೆ ಅವಕಾಶ ಪಡೆದಿದ್ದರು. ಆ ಪಂದ್ಯದಲ್ಲಿ 28 ರನ್‌ಗೆ 2 ವಿಕೆಟ್ ಪಡೆದಿದ್ದರು.

   35ರ ಹರೆಯದ ಜಾನ್ಸನ್ ಈ ವರ್ಷ ಮುಂಬೈನ ಪರ ಕೇವಲ 5 ಪಂದ್ಯಗಳನ್ನು ಆಡಿದ್ದರು. ಜಾನ್ಸನ್ ಮುಂಬೈ ತಂಡ 2013ರಲ್ಲಿ ಮೊದಲ ಬಾರಿ ಐಪಿಎಲ್ ಟ್ರೋಫಿ ಜಯಿಸಲು ಪ್ರಮುಖ ಪಾತ್ರವಹಿಸಿದ್ದರು. ಪುಣೆ ವಿರುದ್ಧದ ಫೈನಲ್ ಪಂದ್ಯದಲ್ಲಿ 26 ರನ್‌ಗೆ 3 ವಿಕೆಟ್‌ಗಳನ್ನು ಕಬಳಿಸಿದ ಜಾನ್ಸನ್ ತನ್ನಲ್ಲಿ ಇನ್ನೂ ಪಂದ್ಯ ಗೆಲ್ಲಿಸಬಲ್ಲ ಸಾಮರ್ಥ್ಯವಿದೆ ಎಂದು ಸಾಬೀತುಪಡಿಸಿದ್ದಾರೆ.

ಮುಂಬೈ ಪರ ಅಮೋಘ ಪ್ರದರ್ಶನ ನೀಡಿರುವ ಜಾನ್ಸನ್ 2013-14ರ ಆ್ಯಶಸ್ ಸರಣಿಯಲ್ಲಿನ ಪ್ರದರ್ಶನವನ್ನು ನೆನಪಿಸಿದರು. ಆ ಸರಣಿಯಲ್ಲಿ ಅವರು ಒಟ್ಟು 37 ವಿಕೆಟ್‌ಗಳನ್ನು ಪಡೆದಿದ್ದರು. ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News