ಹರ್ಷ ಗೊಯೆಂಕಾ ವಿರುದ್ಧ ಧೋನಿ ಅಭಿಮಾನಿಗಳ ಆಕ್ರೋಶ

Update: 2017-05-22 18:02 GMT

ಹೈದರಾಬಾದ್, ಮೇ 22: ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್ ಫೈನಲ್‌ನಲ್ಲಿ ಕೇವಲ ಒಂದು ರನ್‌ನಿಂದ ಸೋತ ಬೆನ್ನಿಗೇ ಪುಣೆ ತಂಡದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಧೋನಿಯ ಕಟ್ಟಾ ಅಭಿಮಾನಿಗಳು ಪುಣೆ ತಂಡದ ಮಾಲಕ ಸಂಜಯ್ ಗೊಯೆಂಕಾರ ಸಹೋದರ ಹರ್ಷ ಗೊಯೆಂಕಾರ ವಿರುದ್ಧ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಹರ್ಷ ಗೊಯೆಂಕಾ ಈ ವರ್ಷದ ಐಪಿಎಲ್‌ನಲ್ಲಿ ಭಾರತದ ಮಾಜಿ ನಾಯಕ ಧೋನಿಯ ವಿರುದ್ಧ ಟೀಕೆಗಳನ್ನು ಮಾಡುವ ಮೂಲಕ ಸುದ್ದಿಯಲ್ಲಿದ್ದರು. ಟೂರ್ನಿಯ ಎರಡನೆ ಲೀಗ್ ಪಂದ್ಯದಲ್ಲಿ ಪುಣೆ ತಂಡ ಮುಂಬೈಯನ್ನು ಮಣಿಸಿದ ಸಂದರ್ಭದಲ್ಲಿ ಗೊಯೆಂಕಾ ಅವರು ಧೋನಿಯ ನಾಯಕತ್ವದ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ‘ಸ್ಮಿತ್ ತಾನೊಬ್ಬ ‘ಕಿಂಗ್ ಆಫ್ ಜಂಗಲ್’ ಎಂದು ಸಾಬೀತುಪಡಿಸಿದ್ದಾರೆ. ನಾಯಕನ ಆಟದ ಮೂಲಕ ಧೋನಿಯನ್ನು ಸಂಪೂರ್ಣವಾಗಿ ಮೀರಿಸಿದ್ದಾರೆ. ಸ್ಮಿತ್‌ರನ್ನು ಪುಣೆ ತಂಡದ ನಾಯಕನಾಗಿ ಆಯ್ಕೆ ಮಾಡಿದ್ದು ಉತ್ತಮ ಹೆಜ್ಜೆ ಎಂದು ಗೊಯೆಂಕಾ ಈ ಹಿಂದೆ ಟ್ವೀಟ್ ಮಾಡಿದ್ದರು.

  ಆರ್‌ಪಿಎಸ್ ತಂಡ ಪಂಜಾಬ್ ವಿರುದ್ಧ ತನ್ನ 2ನೆ ಲೀಗ್ ಪಂದ್ಯವನ್ನು ಸೋತಾಗ ಗೊಯೆಂಕಾ ಅವರು ಈ ವರ್ಷ ಆಡುತ್ತಿರುವ ಪುಣೆ ಆಟಗಾರರ ಸ್ಟ್ರೈಕ್‌ರೇಟ್‌ನ್ನು ಸ್ಕ್ರೀನ್‌ಶಾಟ್‌ನಲ್ಲಿ ಹಂಚಿಕೊಂಡಿದ್ದರು. ಮನೋಜ್ ತಿವಾರಿ, ರಹಾನೆ, ಕ್ರಿಸ್ಟಿಯನ್ ಶ್ರೇಷ್ಠ ಸ್ಟ್ರೈಕ್‌ರೇಟ್ ಹೊಂದಿದ್ದಾರೆಂದು ಗೊಯೆಂಕಾ ಟ್ವೀಟ್ ಮಾಡಿದ್ದರು.

ಧೋನಿ ಹಾಲಿ ಚಾಂಪಿಯನ್ ಹೈದರಾಬಾದ್ ವಿರುದ್ಧ ಅಜೇಯ ಅರ್ಧಶತಕ ಬಾರಿಸಿದ್ದ ಸಂದರ್ಭದಲ್ಲಿ ಯು-ಟರ್ನ್ ಹೊಡೆದಿದ್ದ ಗೊಯೆಂಕಾ,‘‘ ಧೋನಿ ಅತ್ಯುತ್ತಮ ಇನಿಂಗ್ಸ್ ಆಡಿದ್ದಾರೆ. ಅವರು ಫಾರ್ಮ್‌ಗೆ ಮರಳಿದ್ದನ್ನು ನೋಡಲು ಸಂತೋಷವಾಗುತ್ತಿದೆ. ಅವರಂತಹ ಉತ್ತಮ ಗೇಮ್ ಫಿನಿಶರ್ ಇಲ್ಲ. ಅವರು ಪುಣೆಗೆ ರೋಚಕ ಗೆಲುವು ತಂದುಕೊಟ್ಟಿದ್ದಾರೆ ಎಂದು ಟ್ವೀಟ್ ಮಾಡಿದ್ದರು.

ಮುಂಬೈ ವಿರುದ್ಧವೇ ಪುಣೆ ತಂಡ ಫೈನಲ್ ಪಂದ್ಯದ ಕೊನೆಯ ಎಸೆತದಲ್ಲಿ ಮುಗ್ಗರಿಸಿದ ತಕ್ಷಣವೇ ಧೋನಿ ಅಭಿಮಾನಿಗಳು ಗೊಯೆಂಕಾರನ್ನು ಟ್ವಿಟರ್‌ನ ಮೂಲಕ ಟೀಕಿಸಲಾರಂಭಿಸಿದ್ದಾರೆ.

‘‘ಗೊಯೆಂಕಾರ ‘ಕಿಂಗ್ ಆಫ್ ಜಂಗಲ್’ ಸ್ಟೀವ್ ಸ್ಮಿತ್‌ರ ಇನಿಂಗ್ಸ್‌ಗೆ ಎರಡು ನಿಮಿಷ ವೌನ ಪ್ರಾರ್ಥನೆ ಮಾಡಬೇಕಾಗಿದೆ’’ ಎಂದು ಧೋನಿಯ ಸಹ ಆಟಗಾರ ಸರ್ ರವೀಂದ್ರ ಜಡೇಜ ಟ್ವೀಟ್ ಮಾಡಿದ್ದಾರೆ.

ಸಂಜೀವ್ ಗೊಯೆಂಕಾ ಹಾಗೂ ಹರ್ಷ ಗೊಯೆಂಕಾ... ನೀವು ಯಾರನ್ನೂ ನೋಯಿಸಬೇಡಿ. ಮಾಡಿದ್ದುಣ್ಣೊ ಮಹರಾಯ ಎಂದು ಇನ್ನೊಬ್ಬ ಧೋನಿ ಅಭಿಮಾನಿ ಟ್ವೀಟ್ ಮಾಡಿದ್ದಾನೆ.

ಇದೀಗ ಕಿಂಗ್ ಆಫ್ ಜಂಗಲ್(ಕಾಡಿನ ರಾಜ) ಯಾರೆನ್ನುವುದು ಗೊಯೆಂಕಾರಿಗೆ ಗೊತ್ತಾಗಿರಬೇಕು. ನಾನು ಪುಣೆ ನಿವಾಸಿ. ನಮ್ಮ ಲೆಜಂಡ್‌ಗೆ ಅವಮಾನ ಮಾಡಿದರೆ ಪುಣೆ ತಂಡಕ್ಕೆ ಬೆಂಬಲ ನೀಡುವುದಿಲ್ಲ. ಧೋನಿಗೆ ಗೌರವ ಕೊಡಿ ಎಂದು ಧೋನಿ ಅಭಿಮಾನಿ ಟ್ವೀಟ್ ಮಾಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News