‘ಬಾಹುಬಲಿ’ಯ ಕಟ್ಟಪ್ಪ ವಿರುದ್ಧ ಬಂಧನ ವಾರಂಟ್

Update: 2017-05-23 10:17 GMT

ಉದಕಮಂಡಲಂ,ಮೇ 23: ಇಲ್ಲಿಯ ಫ್ರೀಲಾನ್ಸ್ ಜರ್ನಲಿಸ್ಟ್ ಎಂ.ರೊಜಾರಿಯೊ ಎನ್ನುವವರು ದಾಖಲಿಸಿರುವ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನೆದುರು ಹಾಜರಾಗುವಲ್ಲಿ ವೈಫಲ್ಯಕ್ಕಾಗಿ ‘ಬಾಹುಬಲಿ’ ಚಿತ್ರದ ‘ಕಟ್ಟಪ್ಪ’ ಸತ್ಯರಾಜ್ ಹಾಗೂ ಸೂರ್ಯ, ಆರ್.ಶರತ್‌ಕುಮಾರ್ ಮತ್ತು ಶ್ರೀಪ್ರಿಯಾ ಸೇರಿದಂತೆ ಎಂಟು ತಮಿಳು ನಟರ ವಿರುದ್ಧ ಸ್ಥಳೀಯ ನ್ಯಾಯಾಲಯವು ಮಂಗಳವಾರ ಜಾಮೀನುರಹಿತ ಬಂಧನ ವಾರಂಟ್‌ಗಳನ್ನು ಹೊರಡಿಸಿದೆ.

ತಮಿಳು ದೈನಿಕವೊಂದು ನಟಿಯರ ವ್ಯಕ್ತಿತ್ವಕ್ಕೆ ಕಳಂಕ ತರುವ ಲೇಖನವೊಂದನ್ನು ಪ್ರಕಟಿಸಿದ್ದನ್ನು ಖಂಡಿಸಲು ದಕ್ಷಿಣ ಭಾರತ ಸಿನಿತಾರೆಯರ ಸಂಘ(ನಡಿಗರ್ ಸಂಘಂ) 2009,ಅ.7ರಂದು ಚೆನ್ನೈನಲ್ಲಿ ಸಭೆಯೊಂದನ್ನು ಕರೆದಿತ್ತು.

ಸಭೆಯಲ್ಲಿ ಮಾತನಾಡಿದ್ದ ನಟ-ನಟಿಯರು ಲೇಖನವನ್ನು ಪ್ರಕಟಿಸಿದ್ದ ನಿರ್ದಿಷ್ಟ ತಮಿಳು ದೈನಿಕವನ್ನು ಖಂಡಿಸುವ ಬದಲು ಸಾರಾಸಗಟಾಗಿ ಎಲ್ಲ ಪತ್ರಕರ್ತರ ವಿರುದ್ಧ ದಾಳಿ ನಡೆಸಿ ಅವಮಾನಿಸಿದ್ದರು ಎಂದು ರೊಜಾರಿಯೊ ನ್ಯಾಯಾಲಯಕ್ಕೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದರು.

2011,ಡಿ.19ರಂದು ತನ್ನೆದುರು ಹಾಜರಾಗುವಂತೆ ಸೂರ್ಯ, ಸತ್ಯರಾಜ್, ಶರತ್‌ಕುಮಾರ್, ಶ್ರೀಪ್ರಿಯಾ, ವಿಜಯಕುಮಾರ್,ಅರುಣ ವಿಜಯ್, ವಿವೇಕ್ ಮತ್ತು ಚೇರನ್ ಅವರಿಗೆ ನ್ಯಾಯಾಲಯವು ಸಮನ್ಸ್ ಹೊರಡಿಸಿತ್ತು. ಆದರೆ ನ್ಯಾಯಾಲಯಕ್ಕೆ ಖುದ್ದು ಹಾಜರಾತಿಯಿಂದ ವಿನಾಯಿತಿ ಕೋರಿ ಇವರೆಲ್ಲ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರಾದರೂ ಅದು ವಜಾಗೊಳಿಸಲ್ಪಟ್ಟಿತ್ತು.

2017,ಮೇ 15ರಂದು ಪ್ರಕರಣವು ಪುನಃ ವಿಚಾರಣೆಗೆ ಬಂದಿತ್ತು. ನಟರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ ಎಂಬ ಮಾಹಿತಿ ಪಡೆದ ನ್ಯಾ.ಸೆಂಥಿಲ್‌ಕುಮಾರ ರಾಜಾವೇಲ್ ಅವರು ಆರೋಪಿಗಳ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್‌ಗಳನ್ನು ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News