ಜೆಎನ್ ಯು ವಿದ್ಯಾರ್ಥಿನಿ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಗಾಯಕ ಅಭಿಜೀತ್ ಬಾಯಿ ಮುಚ್ಚಿಸಿದ ಟ್ವಿಟ್ಟರ್

Update: 2017-05-23 17:41 GMT

ಹೊಸದಿಲ್ಲಿ, ಮೇ 23: ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಗಳನ್ನು ಹಾಕಿದ್ದ ಗಾಯಕ ಅಭಿಜೀತ್ ಬಟ್ಟಾಚಾರ್ಯರ ಖಾತೆಯನ್ನು ಟ್ವಿಟ್ಟರ್ ಅಮಾನತುಗೊಳಿಸಿದೆ.

58ರ ಹರೆಯದ ಗಾಯಕ “ಅನುಚಿತ”, “ಅವಮಾನಕರ” ಟ್ವೀಟ್ ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳ ಬಳಕೆದಾರರ ಆರೋಪದ ಹಿನ್ನೆಲೆಯಲ್ಲಿ ಟ್ವಿಟ್ಟರ್ ಈ ಕ್ರಮ ಕೈಗೊಂಡಿದೆ.

ಪತ್ರಕರ್ತೆ ಸ್ವಾತಿ ಚತುರ್ವೇದಿಯವರ ಬಗ್ಗೆ ಆಕ್ಷೇಪಾರ್ಹ ರೀತಿಯ ಪೋಸ್ಟ್ ಗಳನ್ನು ಹಾಕಿದ್ದ ಅಭಿಜೀತ್ ವಿರುದ್ಧ ಸಾಮಾಜಿಕ ಜಾಲತಾಣ ಬಳಕೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸ್ವಾತಿ ಪೊಲೀಸರಿಗೆ ದೂರು ನೀಡಿದ್ದು, ಅಭಿಜೀತ್ ರನ್ನು ಬಂಧಿಸಲಾಗಿತ್ತು. ಆದರೆ ಮತ್ತೆ ಅದೇ ರೀತಿಯ ಪೋಸ್ಟ್ ಗಳನ್ನು ಹಾಕುವುದನ್ನು ಅಭಿಜೀತ್ ಮುಂದುವರಿಸಿದ್ದು, ಜೆಎನ್ ಯು ವಿದ್ಯಾರ್ಥಿನಿ, ಹೋರಾಟಗಾರ್ತಿ ಶೆಹ್ಲಾ ರಶೀದ್ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್ ಗಳನ್ನು ಮಾಡಿದ್ದರು.

“ಎರಡು ಗಂಟೆಗಳಿಗೆ ಹಣ ಪಡೆದುಕೊಂಡ ಆಕೆ ಗಿರಾಕಿಯನ್ನು ಸಂತೋಷಪಡಿಸಿಲ್ಲ ಎನ್ನುವ ವದಂತಿಯಿದೆ” ಎಂಬ ಅಭಿಜೀತ್ ಟ್ವೀಟ್ ಸಾಕಷ್ಟು ವಿವಾದಕ್ಕೆ ಕಾರಣವಾಗಿ, ಟ್ವಿಟ್ಟರಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಟ್ವಿಟ್ಟರ್ ತೆಗೆದುಕೊಂಡ ಕ್ರಮ ಶಾಶ್ವತವೋ ಅಥವಾ ತಾತ್ಕಾಲಿಕವೇ ಎನ್ನುವುದು ಇನ್ನೂ ತಿಳಿದುಬಂದಿಲ್ಲ.

ಈ ಬಗ್ಗೆ ಅವರನ್ನು ಮಾಧ್ಯಮಗಳು ಸಂಪರ್ಕಿಸಿದ್ದು. ನನ್ನ ಖಾತೆಯ ಅಮಾನತಿನ ಹಿಂದೆ ಅರುಂಧತಿ ರಾಯ್ ಹಾಗೂ ಜೆಎನ್ ಯು ಬೆಂಬಲಿಗರಿದ್ದಾರೆ. ಅವರು ಪರೇಶ್ ರಾವಲ್ ಖಾತೆಯನ್ನೂ ಬ್ಲಾಕ್ ಮಾಡಲು ಯತ್ನಿಸುತ್ತಿದ್ದಾರೆ” ಎಂದು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News