×
Ad

ಅಂಡರ್-17 ವಿಶ್ವಕಪ್ ದೇಶಕ್ಕೆ ಹೆಮ್ಮೆ ತರಲಿದೆ: ದತ್ತ ವಿಶ್ವಾಸ

Update: 2017-05-23 23:37 IST

ಚಾಂಗ್‌ಶಾ(ಚೀನಾ), ಮೇ 23: ಮುಂಬರುವ ಫಿಫಾ ಅಂಡರ್-17 ವಿಶ್ವಕಪ್‌ನಲ್ಲಿ 2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಗಿರುವಂತಹ ಯಾವುದೇ ಅವ್ಯವಸ್ಥೆ, ಭ್ರಷ್ಟಾಚಾರ ಹಗರಣಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಭಾರತ ಭರವಸೆ ನೀಡಿದೆ.

‘‘ಭಾರತದಲ್ಲಿ ಇದೇ ಮೊದಲ ಬಾರಿ ಅಕ್ಟೋಬರ್‌ನಲ್ಲಿ ನಡೆಯಲಿರುವ ಅತ್ಯಂತ ಪ್ರತಿಷ್ಠಿತ ಫುಟ್ಬಾಲ್ ಟೂರ್ನಮೆಂಟ್ ದೇಶಕ್ಕೆ ಹೆಮ್ಮೆ ತರಲಿದೆ. ಈ ಟೂರ್ನಿಯು ಕಾಮನ್‌ವೆಲ್ತ್ ಗೇಮ್ಸ್‌ಗಿಂತ ಸಂಪೂರ್ಣ ಭಿನ್ನವಾಗಿರಲಿದೆ’’ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಉಪಾಧ್ಯಕ್ಷ ಸುಬ್ರತಾ ದತ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ದತ್ ಅವರು ವಿಶ್ವ ಫುಟ್ಬಾಲ್ ಫೋರಮ್‌ನಲ್ಲಿ ಭಾಗಿಯಾಗಲು ಚೀನಾಕ್ಕೆ ತೆರಳಿದ್ದಾರೆ.

ಮೂರು ವಾರಗಳ ಕಾಲ ನಡೆಯಲಿರುವ ಅಂಡರ್-17 ಫಿಫಾ ವಿಶ್ವಕಪ್ ಟೂರ್ನಿಯು ಭಾರತದ ಆರು ನಗರಗಳಾದ-ಹೊಸದಿಲ್ಲಿ, ಮುಂಬೈ, ಕೋಲ್ಕತಾ, ಗೋವಾ, ಗುವಾಹಟಿ ಹಾಗೂ ಕೊಚ್ಚಿಯಲ್ಲಿ ನಡೆಯಲಿದೆ. ಅಕ್ಟೋಬರ್ 28 ರಂದು ಕೋಲ್ಕತಾದಲ್ಲಿ ಫೈನಲ್ ಪಂದ್ಯ ನಿಗದಿಯಾಗಿದೆ.

ದೊಡ್ಡ ಕ್ರೀಡಾಕೂಟಗಳನ್ನು ಆಯೋಜಿಸುವಲ್ಲಿ ಭಾರತ ಹೊಂದಿದ್ದ ಗೌರವ 2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಣ್ಣುಪಾಲಾಗಿತ್ತು. ಗೇಮ್ಸ್‌ನಲ್ಲಿ ಅಪೂರ್ಣ ಮೂಲಭೂತ ಸೌಕರ್ಯ ಹಾಗೂ ಅಥ್ಲೀಟ್‌ಗಳ ನೆಲೆಸಿದ್ದ ಕ್ರೀಡಾಗ್ರಾಮಗಳ ಕಳಪೆ ವ್ಯವಸ್ಥೆಯಿಂದಾಗಿ ಭಾರತ ಮುಖಭಂಗಕ್ಕೀಡಾಗಿತ್ತು. ಉದ್ಘಾಟನಾ ಸಮಾರಂಭದ ಮುನ್ನಾದಿನ ಮುಖ್ಯ ಸ್ಟೇಡಿಯಂನ ಪಾದಚಾರಿ ಸೇತುವೆ ಕುಸಿದುಬಿದ್ದಿತ್ತು. ಮೇಲ್ಛಾವಣಿ ಸೋರಿಕೆಯಿಂದ ಈಜು ಸ್ಪರ್ಧೆಗೆ ತೊಂದರೆಯಾಗಿತ್ತು.

ಗೇಮ್ಸ್‌ನಲ್ಲಿ ಹಣಕಾಸು ದುರ್ಬಳಕೆ ಹಾಗೂ ಇತರ ಭ್ರಷ್ಟಾಚಾರ ಆರೋಪಗಳಲ್ಲಿ ಗೇಮ್ಸ್‌ನ ಮುಖ್ಯ ಆಯೋಜಕರಾಗಿದ್ದ ಸುರೇಶ್ ಕಲ್ಮಾಡಿ 10 ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು.

 ‘‘ಅಂಡರ್-17 ವಿಶ್ವಕಪ್‌ನ್ನು ಯಶಸ್ವಿಯಾಗಿ ಆಯೋಜಿಸುವ ದೃಷ್ಟಿಯಿಂದ ಕಳೆದ ಎರಡೂವರೆ ವರ್ಷಗಳಿಂದ ಶ್ರಮಿಸುತ್ತಿದ್ದೇವೆ. ಅಗತ್ಯವಿರುವ ಎಲ್ಲ ಮೂಲ ಸೌಕರ್ಯವನ್ನು ಮಾಡಲಾಗಿದೆ.. ಇದೀಗ ಎಲ್ಲ ಕಾಮಗಾರಿಗಳು ಅಂತಿಮ ಹಂತದಲ್ಲಿದೆ. ಫಿಫಾ ನಮಗೆ ನಿರಂತರವಾಗಿ ಮಾರ್ಗದರ್ಶನ ನೀಡುತ್ತಾ ಬಂದಿದೆ’’ ಎಂದು ದತ್ತ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News