ಚೂರಿ ಇರಿತದಿಂದ ಕ್ವಿಟೋವಾ ಚೇತರಿಕೆ: ವಿಂಬಲ್ಡನ್‌ಗೆ ವಾಪಸಾಗಲು ಸಿದ್ಧತೆ

Update: 2017-05-23 18:08 GMT

 ಲಂಡನ್, ಮೇ 23: ಸುಮಾರು ಐದು ತಿಂಗಳ ಹಿಂದೆ ತನ್ನ ಮನೆಯೊಳಗೆ ನುಗ್ಗಿದ್ದ ದರೋಡೆಕೋರನ ಚೂರಿ ಇರಿತದಿಂದ ಗಾಯಗೊಂಡಿದ್ದ ಎರಡು ಬಾರಿಯ ಚಾಂಪಿಯನ್ ಪೆಟ್ರಾ ಕ್ವಿಟೋವಾ ಮುಂಬರುವ ವಿಂಬಲ್ಡನ್ ಟೂರ್ನಿಯಲ್ಲಿ ವಾಪಸಾಗಲು ಸಜ್ಜಾಗಿದ್ದಾರೆ.

ಕಳೆದ ವರ್ಷ ಡಿಸೆಂಬರ್ 20 ರಂದು ಕೆಲಸಗಾರನ ಸೋಗಿನಲ್ಲಿ ಝೆಕ್ ಆಟಗಾರ್ತಿ ಕ್ವಿಟೋವಾ ನೆಲೆಸಿರುವ ಅಪಾರ್ಟ್‌ಮೆಂಟ್‌ಗೆ ಪ್ರವೇಶಿಸಿದ್ದ ವ್ಯಕ್ತಿಯೊಬ್ಬ ಕ್ವಿಟೋವಾರ ಕುತ್ತಿಗೆಗೆ ಚೂರಿ ಇರಿಯಲು ಮುಂದಾಗಿದ್ದ. ಕ್ವಿಟೋವಾ ದುಷ್ಕರ್ಮಿಯನ್ನು ತಳ್ಳಿದಾಗ ಆಕೆಯ ನಾಲ್ಕು ಬೆರಳು ಹಾಗೂ ಹೆಬ್ಬೆಟ್ಟಿಗೆ ಗಾಯವಾಗಿತ್ತು. ಜೀವಾಪಾಯದಿಂದ ಪಾರಾಗಿದ್ದ ಕ್ವಿಟೋವಾ ಚೂರಿ ಇರಿತದ ಬಳಿಕ ನಾಲ್ಕು ಗಂಟೆಗಳ ಕಾಲ ಸರ್ಜರಿಗೆ ಒಳಗಾಗಿದ್ದರು. ಇದೀಗ ನಿರೀಕ್ಷೆಗಿಂತ ಬೇಗನೆ ಚೇತರಿಸಿಕೊಂಡಿದ್ದು, ರವಿವಾರ ಪ್ಯಾರಿಸ್‌ನಲ್ಲಿ ಆರಂಭವಾಗಲಿರುವ ಫ್ರೆಂಚ್ ಓಪನ್‌ನಲ್ಲಿ ಸಕ್ರಿಯ ಟೆನಿಸ್‌ಗೆ ವಾಪಸಾಗುವ ಯೋಜನೆಯನ್ನ್ನೂ ಹಾಕಿಕೊಂಡಿದ್ದಾರೆ.

‘‘ಕ್ವಿಟೋವಾ ವಿಂಬಲ್ಡನ್ ಟೂರ್ನಿಯಲ್ಲಿ ಆಡುವ ಯೋಜನೆ ಹಾಕಿಕೊಂಡಿದ್ದಾರೆ. ರವಿವಾರ ಪ್ಯಾರಿಸ್‌ನಲ್ಲಿ ಆರಂಭವಾಗಲಿರುವ ಫ್ರೆಂಚ್ ಓಪನ್‌ನಲ್ಲಿ ಭಾಗವಹಿಸುವ ಕುರಿತು ಈ ವಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ’’ ಎಂದು ಕ್ವಿಟೋವಾರ ಮ್ಯಾನೇಜರ್ ಕಾಟಿ ಸ್ಪೆಲ್‌ಮನ್ ಹೇಳಿದ್ದಾರೆ.

2011 ಹಾಗೂ 2014ರಲ್ಲಿ ವಿಂಬಲ್ಡನ್ ಚಾಂಪಿಯನ್ ಆಗಿರುವ ಕ್ವಿಟೋವಾ ಬುಧವಾರ ಬಿಡುಗಡೆಯಾಗಲಿರುವ ಈ ವರ್ಷದ ಚಾಂಪಿಯನ್‌ಶಿಪ್‌ನ ಅಧಿಕೃತ ಪ್ರವೇಶ ಪಟ್ಟಿಯಲ್ಲಿ ಸೇರ್ಪಡೆಯಾಗುವ ಸಾಧ್ಯತೆಯಿದೆ.

‘‘ಮಾಜಿ ಚಾಂಪಿಯನ್ ಕ್ವಿಟೋವಾಗೆ ನಾವು ಸದಾ ಸ್ವಾಗತಿಸುತ್ತೇವೆ. ಈ ವರ್ಷದ ಚಾಂಪಿಯನ್‌ಶಿಪ್‌ನಲ್ಲಿ ಕ್ವಿಟೋವಾ ಸ್ಪರ್ಧಿಸಿದರೆ ನಮಗೆ ತುಂಬಾ ಸಂತೋಷವಾಗುತ್ತದೆ. ಈಗ ಅವರು ಸಕ್ರಿಯ ಟೆನಿಸ್‌ಗೆ ವಾಪಸಾಗಲು ತಯಾರಿ ನಡೆಸುತ್ತಿದ್ದಾರೆ’’ ಎಂದು ವಿಂಬಲ್ಡನ್ ಟೂರ್ನಿಯ ಆಯೋಜಕರು ತಿಳಿಸಿದ್ದಾರೆ.

ಈ ತಿಂಗಳಾರಂಭದಲ್ಲಿ ಮಾಂಟೆಕಾರ್ಲೊ ಟೂರ್ನಿಗೆ ಅಭ್ಯಾಸ ನಡೆಸುತ್ತಿದ್ದ ಚಿತ್ರವನ್ನು ಪೋಸ್ಟ್ ಮಾಡಿದ್ದ ಕ್ವಿಟೋವಾ ಒಂದು ವೇಳೆ ಫ್ರೆಂಚ್ ಓಪನ್‌ನಲ್ಲಿ ಭಾಗವಹಿಸಿದರೆ ಎಲ್ಲರಿಗೂ ಅಚ್ಚರಿಯಾಗಬಹುದು. 27ರ ಹರೆಯದ ಕ್ವಿಟೋವಾ 2011ರಲ್ಲಿ ವಿಂಬಲ್ಡನ್ ಓಪನ್ ಫೈನಲ್‌ನಲ್ಲಿ ಮರಿಯಾ ಶರಪೋವಾರನ್ನು ಮಣಿಸಿ ಪ್ರಶಸ್ತಿ ಜಯಿಸಿದ್ದರು.2014ರಲ್ಲಿ ಎವ್‌ಜಿನಿ ಬೌಚರ್ಡ್‌ರನ್ನು ನೇರ ಸೆಟ್‌ಗಳಿಂದ ಮಣಿಸಿ ಮತ್ತೊಮ್ಮೆ ಪ್ರಶಸ್ತಿ ಗೆದ್ದುಕೊಂಡಿದ್ದರು. ಕ್ವಿಟೋವಾ ನವೆಂಬರ್ 12 ರಂದು ಫೆಡ್ ಕಪ್ ಫೈನಲ್‌ನಲ್ಲಿ ಫ್ರಾನ್ಸ್‌ನ ವಿರುದ್ಧ ಕೊನೆಯಬಾರಿ ಆಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News