ಸಿಯಾಚೆನ್ ಬಳಿ ಪಾಕ್ ಯುದ್ಧವಿಮಾನಗಳ ಹಾರಾಟ

Update: 2017-05-24 10:34 GMT

ಹೊಸದಿಲ್ಲಿ,ಮೇ 24: ಪಾಕಿಸ್ತಾನದ ಯುದ್ಧವಿಮಾನಗಳು ಬುಧವಾರ ಸಿಯಾಚೆನ್ ನೀರ್ಗಲ್ಲು ಪ್ರದೇಶದ ಬಳಿ ಹಾರಾಟ ನಡೆಸಿವೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆಯಾದರೂ, ಭಾರತದ ವಾಯುಪ್ರದೇಶದ ಉಲ್ಲಂಘನೆಯಾಗಿಲ್ಲ ಎಂದು ಭಾರತೀಯ ವಾಯುಪಡೆಯು ಹೇಳಿದೆ.

ಪಾಕಿಸ್ತಾನಿ ವಾಯುಪಡೆ (ಪಿಎಎಫ್)ಯ ಯುದ್ಧವಿಮಾನಗಳು ಬುಧವಾರ ಬೆಳಿಗ್ಗೆ ಸಿಯಾಚೆನ್ ಗ್ಲೇಸಿಯರ್ ಬಳಿ ಹಾರಾಟ ನಡೆಸಿವೆ ಎಂದು ವರದಿ ಮಾಡಿರುವ ಪಾಕ್‌ನ ಸಮಾ ಟಿವಿಯು, ಪಿಎಎಫ್‌ನ ಎಲ್ಲ ಮುಂಚೂಣಿ ನೆಲೆಗಳನ್ನು ಸಂಪೂರ್ಣ ಕಾರ್ಯಸನ್ನದ್ಧ ಗೊಳಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಹೇಳಿದೆ.

ಪಿಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಸೊಹೈಲ್ ಅಮಾನ್ ಅವರು ಬುಧವಾರ ಸ್ಕರ್ಡು ವಾಯುನೆಲೆಗೆ ಭೇಟಿ ನೀಡಿದ್ದು, ಮಿರಾಜ್ ಯುದ್ಧವಿಮಾನವನ್ನು ಸ್ವತಃ ಅವರೇ ಚಾಲನೆ ಮಾಡಿದ್ದರು ಎಂದು ವರದಿಯು ತಿಳಿಸಿದೆ.

 ಅಮಾನ್ ವಾಯುಪಡೆಯ ಪೈಲಟ್‌ಗಳು ಮತ್ತು ತಾಂತ್ರಿಕ ಸಿಬ್ಬಂದಿಗಳನ್ನು ಭೇಟಿಯಾಗಿದ್ದರು ಎಂದು ಪಿಎಎಫ್ ತಿಳಿಸಿದೆ. ಈ ವೇಳೆ ಪಾಕ್ ಯುದ್ಧವಿಮಾನಗಳ ಗುಂಪೊಂದು ಹೆಚ್ಚಿನ ಎತ್ತರದಲ್ಲಿ ಮತ್ತು ಕೆಳಮಟ್ಟದಲ್ಲಿ ಹಾರಾಟ ನಡೆಸಿತ್ತು.

ಸಿಯಾಚೆನ್ ಗ್ಲೇಸಿಯರ್ ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿಯಾಗಿದೆ. ಹಿಮಾಲಯ ಪರ್ವತಗಳ ಪೂರ್ವ ಕಾರಾಕೋರಂ ಪ್ರದೇಶದಲ್ಲಿರುವ ಸಿಯಾಚೆನ್‌ನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ನಿಯಂತ್ರಣ ರೇಖೆಯು ಅಂತ್ಯಗೊಳ್ಳುತ್ತದೆ.

 ಪಾಕಿಸ್ತಾನದ ವಿಮಾನಗಳು ಸಿಯಾಚೆನ್ ಸಮೀಪ ಭಾರತೀಯ ಪ್ರದೇಶದಲ್ಲಿ ಹಾರಾಟ ನಡೆಸಿವೆ ಎಂಬ ಪಾಕ್ ಮಾಧ್ಯಮಗಳ ವರದಿಯನ್ನು ಇಲ್ಲಿಯ ಭಾರತೀಯ ವಾಯುಪಡೆ ಮೂಲಗಳು ನಿರಾಕರಿಸಿದ್ದು, ಭಾರತೀಯ ವಾಯುಪ್ರದೇಶದ ಉಲ್ಲಂಘನೆ ಯಾಗಿಲ್ಲ ಎಂದು ಸ್ಪಷ್ಟಪಡಿಸಿವೆ.

 ಭಯೋತ್ಪಾದಕ ಕೃತ್ಯಗಳಿಗೆ ಪ್ರತೀಕಾರವಾಗಿ ತಾನು ಈ ತಿಂಗಳು ನಿಯಂತ್ರಣ ರೇಖೆಯಲ್ಲಿನ ಪಾಕಿಸ್ತಾನಿ ನೆಲೆಗಳ ಮೇಲೆ ದಾಳಿ ನಡೆಸಿ ಹಾನಿಯನ್ನುಂಟು ಮಾಡಿದ್ದೇನೆ ಎಂದು ಭಾರತೀಯ ಸೇನೆಯು ಪ್ರಕಟಿಸಿದ ಮರುದಿನವೇ ಪಾಕ್ ಯುದ್ಧವಿಮಾನಗಳು ಸಿಯಾಚೆನ್ ಸಮೀಪ ಹಾರಾಟ ನಡೆಸಿದ ವರದಿಗಳು ಹೊರಬಿದ್ದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News