ಶೀನಾ ಬೋರಾ ಕೊಲೆ ಪ್ರಕರಣದ ತನಿಖಾಧಿಕಾರಿಯ ಪತ್ನಿಯ ಹತ್ಯೆ:,ಮಗನೇ ಶಂಕಿತ ಆರೋಪಿ
ಮುಂಬೈ,ಮೇ 24: ಶೀನಾ ಬೋರಾ ಹತ್ಯೆ ಪ್ರಕರಣದ ತನಿಖಾ ತಂಡದ ಸದಸ್ಯರಾಗಿದ್ದ ಇಲ್ಲಿಯ ಖಾರ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಜ್ಞಾನೇಶ್ವರ ಗಣೋರೆ ಅವರ ಪತ್ನಿಯ ಶವ ಕೊಲೆಯಾದ ಸ್ಥಿತಿಯಲ್ಲಿ ಮಂಗಳವಾರ ರಾತ್ರಿ ಸಾಂತಾಕ್ರೂಝ್ ವಕೋಲಾದ ಪ್ರಭಾತ ಕಾಲನಿಯಲ್ಲಿನ ನಿವಾಸದಲ್ಲಿ ಪತ್ತೆಯಾಗಿದೆ. ಅವರ ಪುತ್ರ ಸಿದ್ಧಾಂತ್ ಗಣೋರೆ (21) ಪ್ರಮುಖ ಶಂಕಿತ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದಾನೆ.
ಶವ ಬಿದ್ದುಕೊಂಡಿದ್ದ ಬೆಡ್‌ರೂಮಿನ ನೆಲದಲ್ಲಿ ತಾಯಿಯ ರಕ್ತದಿಂದಲೇ ‘ಸ್ಮೈಲಿ’ಯನ್ನು ಚಿತ್ರಿಸಿರುವ ಸಿದ್ಧಾಂತ್,‘‘ಆಕೆಯಿಂದ ಬೇಸತ್ತಿದ್ದೆ. ನನ್ನನ್ನು ಬಂಧಿಸಿ ನೇಣು ಹಾಕಿ ’’ಎಂದು ಬರೆದಿಟ್ಟಿದ್ದಾನೆ.
ಗಣೋರೆ ಮಂಗಳವಾರ ರಾತ್ರಿ ಮನೆಗೆ ಮರಳಿದಾಗ ಪತ್ನಿ ದೀಪಾಲಿ(42) ಕೊಲೆಯಾ ಗಿದ್ದು ಬೆಳಕಿಗೆ ಬಂದಿತ್ತು. ಆಕೆಯ ಕುತ್ತಿಗೆಯನ್ನು ಚೂರಿಯಿಂದ ನಾಲ್ಕೈದು ಬಾರಿ ಇರಿದು ಕೊಲ್ಲಲಾಗಿತ್ತು.
ಮಂಗಳವಾರ ರಾತ್ರಿಯಿಂದಲೇ ಸಿದ್ಧಾಂತ ನಾಪತ್ತೆಯಾಗಿದ್ದಾನೆ. ಇಂಜಿನಿಯರಿಂಗ್ ವ್ಯಾಸಂಗವನ್ನು ಅರ್ಧಕ್ಕೇ ಬಿಟ್ಟಿದ್ದ ಆತ ನ್ಯಾಷನಲ್ ಕಾಲೇಜಿನಲ್ಲಿ ಓದುತ್ತಿದ್ದು, ಪರೀಕ್ಷಾ ಫಲಿತಾಂಶಕ್ಕಾಗಿ ಕಾಯುತ್ತಿದ್ದ. ಓದಿನಲ್ಲಿ ಹಿಂದಿದ್ದರಿಂದ ತಾಯಿ ಆಗಾಗ್ಗೆ ಬೈಯುತ್ತಿದ್ದಳು ಎನ್ನಲಾಗಿದೆ.
ಕಳೆದೆರಡು ತಿಂಗಳುಗಳಿಂದ ಆತನಲ್ಲಿ ಉದಾಸೀನತೆ ಹೆಚ್ಚಾಗಿತ್ತು, ಅಲ್ಲದೆ ಸಾಮಾಜಿಕ ಮಾಧ್ಯಮಗಳಿಂದಲೂ ದೂರವಿದ್ದ ಎಂದು ಸಿದ್ಧಾಂತ್‌ನ ಸ್ನೇಹಿತರು ಹೇಳಿದರು.
ಮಂಗಳವಾರ ರಾತ್ರಿ ಆತ ತಾಯಿಯ ಬಳಿ ಹಣ ಕೇಳಿದ್ದು, ಆಕೆ ನಿರಾಕರಿಸಿದಾಗ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಪ್ರಕರಣವನ್ನು ದಾಖಲಿಸಿಕೊಂಡಿರುವ ವಕೋಲಾ ಪೊಲೀಸರು ಶಂಕಿಸಿದ್ದಾರೆ.
================