ಎವರೆಸ್ಟ್‌ನಲ್ಲಿ 4 ಆರೋಹಿಗಳ ಮೃತದೇಹ ಪತ್ತೆ: ಇನ್ನೊಂದು ಶವ ಹುಡುಕಲು ಹೋಗಿದ್ದ ರಕ್ಷಣಾ ತಂಡ

Update: 2017-05-24 14:40 GMT

  ಕಠ್ಮಂಡು (ನೇಪಾಳ), ಮೇ 24: ರಕ್ಷಣಾ ಕಾರ್ಯಕರ್ತರು ವೌಂಟ್ ಎವರೆಸ್ಟ್‌ನಲ್ಲಿ ನಾಲ್ವರು ಆರೋಹಿಗಳ ಮೃತದೇಹಗಳನ್ನು ಪತ್ತೆಹಚ್ಚಿದ್ದಾರೆ ಎಂದು ಆರೋಹಣಾ ಸಂಸ್ಥೆಯೊಂದು ಬುಧವಾರ ತಿಳಿಸಿದೆ. ಇದರೊಂದಿಗೆ, ಈ ಪರ್ವತಾರೋಹಣ ಋತುವಿನಲ್ಲಿ ಮೃತಪಟ್ಟ ಆರೋಹಿಗಳ ಸಂಖ್ಯೆ 10ಕ್ಕೆ ಏರಿದೆ.

ಅದೇ ವೇಳೆ, ಕಡಿಮೆ ಬೆಲೆಯ ಪರ್ವತಾರೋಹಣ ಉಪಕರಣಗಳು ಆರೋಹಿಗಳ ಜೀವಗಳನ್ನು ಅಪಾಯಕ್ಕೆ ಒಡ್ಡುತ್ತಿವೆ ಎಂದು ಪರಿಣತರು ಎಚ್ಚರಿಸಿದ್ದಾರೆ.
  7,950 ಮೀಟರ್ ಎತ್ತರದಲ್ಲಿರುವ ನಾಲ್ಕನೆ ಶಿಬಿರದ ಡೇರೆಯೊಳಗೆ ಈ ನಾಲ್ವರ ಮೃತದೇಹಗಳು ಮಂಗಳವಾರ ಪತ್ತೆಯಾಗಿವೆ. ರವಿವಾರ ಪರ್ವತದಲ್ಲಿ ಮೃತಪಟ್ಟ ಸ್ಲೊವಾಕ್ ಆರೋಹಿಯೊಬ್ಬರ ಮೃತದೇಹದ ಶೋಧಕ್ಕಾಗಿ ಹೊರಟಿದ್ದ ರಕ್ಷಣಾ ತಂಡಕ್ಕೆ ಈ ನಾಲ್ವರ ಶವಗಳು ದೊರೆತಿವೆ.

‘‘ನಾಲ್ಕನೆ ಶಿಬಿರದಲ್ಲಿರುವ ಡೇರೆಯೊಂದರಲ್ಲಿ ನಾಲ್ವರು ಆರೋಹಿಗಳ ಶವಗಳನ್ನು ನಮ್ಮ ರಕ್ಷಣಾ ಕಾರ್ಯಕರ್ತರು ನಿನ್ನೆ ಪತ್ತೆಹಚ್ಚಿದ್ದಾರೆ. ಅವರು ಯಾರು ಮತ್ತು ಅವರು ಹೇಗೆ ಸತ್ತರು ಎಂಬ ವಿವರಗಳು ನಮ್ಮಲ್ಲಿಲ್ಲ’’ ಎಂದು ‘ಸೆವೆನ್ ಸಮಿಟ್ಸ್ ಟ್ರೆಕ್ಸ್’ನ ಮುಖ್ಯಸ್ಥ ಮಿಂಗ್ಮ ಶೆರ್ಪ ತಿಳಿಸಿದರು.
‘ಸೆವೆನ್ ಸಮಿಟ್ಸ್ ಟ್ರೆಕ್ಸ್’ ಪರ್ವತಾರೋಹಣ ಮತ್ತು ಪರ್ವತದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವ ಕಠ್ಮಂಡುವಿನ ಸಂಸ್ಥೆಯಾಗಿದೆ.
ಮೃತಪಟ್ಟವರ ಪೈಕಿ ಇಬ್ಬರು ವಿದೇಶಿ ಪರ್ವತಾರೋಹಿಗಳು ಮತ್ತು ಇಬ್ಬರು ನೇಪಾಳಿ ಮಾರ್ಗದರ್ಶಕರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಎವರೆಸ್ಟ್‌ನಲ್ಲಿ ಮಂಗಳವಾರ ಬಲವಾದ ಗಾಳಿ ಬೀಸಿದ್ದು, ಹೆಚ್ಚಿನವರು ಆರೋಹಣ ಯತ್ನವನ್ನು ಕೈಬಿಟ್ಟು ನಾಲ್ಕನೆ ಶಿಬಿರದಲ್ಲೇ ಉಳಿದಿದ್ದರು.


ಕಾರ್ಬನ್ ಮೋನಾಕ್ಸೈಡ್ ಕಾರಣ?

ಅವರು ತಮ್ಮ ಡೇರೆಯ ಒಳಗಿನ ಪರಿಸರವನ್ನು ಬೆಚ್ಚಗಿಡಲು ಡೇರೆಯ ಒಳಗೆ ಸ್ಟೋವ್‌ಗಳನ್ನು ಹೊತ್ತಿಸಿರಬಹುದು ಹಾಗು ಅದರಿಂದಾಗಿ ಕಾರ್ಬನ್ ಮೋನಾಕ್ಸೈಡ್ ವಿಷಾನಿಲ ಬಿಡುಗಡೆಗೊಂಡು ಅದನ್ನು ಸೇವಿಸಿ ಅವರು ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಪರ್ವತಾರೋಹಣ ತಜ್ಞ ಅಲನ್ ಆರ್ನೆಟ್ ಹೇಳಿದ್ದಾರೆ.

ಈ ರೀತಿಯ ಸಾವುಗಳನ್ನು ತಡೆಯಬಹುದಾಗಿದ್ದು, ಆರೋಹಿಗಳು ಮತ್ತು ಅವರ ಮಾರ್ಗದರ್ಶಿಗಳು ಅನನುಭವಿಗಳು ಎನ್ನುವುದನ್ನು ಇದು ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ.


ಅನನುಭವಿ ಕಂಪೆನಿಗಳು

ಪರ್ವತಾರೋಹಣದಲ್ಲಿ ಕಡಿಮೆ ವೆಚ್ಚದ ದಿರಿಸು ಮತ್ತು ಉಪಕರಣಗಳ ಬಳಕೆ ಹೆಚ್ಚುತ್ತಿರುವುದು ಹಾಗೂ ಅನನುಭವಿ ಕಂಪೆನಿಗಳು ಸಿದ್ಧಗೊಳ್ಳದ ಆರೋಹಿಗಳನ್ನು ಶಿಖರಕ್ಕೆ ಕರೆದುಕೊಂಡು ಹೋಗುವುದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ಎವರೆಸ್ಟ್ ಅನುಭವಿ ಟಿಮ್ ಮೋಸ್‌ಡೇಲ್ ಹೇಳಿದ್ದಾರೆ.

ಅವರು ತನ್ನ ಅಭಿಪ್ರಾಯವನ್ನು ಇತ್ತೀಚೆಗೆ ‘ಫೇಸ್‌ಬುಕ್’ನಲ್ಲಿ ಹಂಚಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News