ಭಾರತದ ಎಸ್‌ಯು-30 ವಿಮಾನದ ಮಾಹಿತಿಯಿಲ್ಲ: ಚೀನಾ

Update: 2017-05-24 16:58 GMT

ಬೀಜಿಂಗ್, ಮೇ 24: ಭಾರತ-ಚೀನಾ ಗಡಿಯಲ್ಲಿ ನಾಪತ್ತೆಯಾಗಿರುವ ಭಾರತೀಯ ವಾಯುಪಡೆಗೆ ಸೇರಿದ ಸುಖೋಯ್-30 ಯುದ್ಧ ವಿಮಾನದ ಬಗ್ಗೆ ತನ್ನಲ್ಲಿ ಮಾಹಿತಿಯಿಲ್ಲ ಎಂದು ಚೀನಾ ಬುಧವಾರ ಹೇಳಿದೆ. ಅದೇ ವೇಳೆ, ಈ ವಲಯವನ್ನು ಅಸ್ಥಿರಗೊಳಿಸುವ ಪ್ರಯತ್ನಗಳನ್ನು ಭಾರತ ಕೈಬಿಡಬೇಕು ಎಂದು ಅದು ಹೇಳಿದೆ.

ಇಬ್ಬರು ಪೈಲಟ್‌ಗಳನ್ನು ಹೊತ್ತ ವಿಮಾನ ಮಂಗಳವಾರ ಅಸ್ಸಾಂನ ತೇಝ್‌ಪುರ್ ವಾಯುನೆಲೆಯಿಂದ ಹಾರಾಟ ನಡೆಸಿದ ಬಳಿಕ ಗಡಿ ಸಮೀಪ ನಾಪತ್ತೆಯಾಗಿತ್ತು.

ವಿಮಾನವನ್ನು ಪತ್ತೆಹಚ್ಚುವ ಕೆಲಸದಲ್ಲಿ ಚೀನಾ ನೆರವು ನೀಡುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಚೀನಾ ವಿದೇಶ ಸಚಿವಾಲಯದ ವಕ್ತಾರ ಲು ಕಾಂಗ್, ಭಾರತ ಪೂರ್ವದ ಗಡಿಯಲ್ಲಿ ನೆಲೆಸಿರುವ ಶಾಂತಿಯನ್ನು ಕದಡುವುದಿಲ್ಲ ಎಂದು ತನ್ನ ದೇಶ ಭಾವಿಸುತ್ತದೆ ಎಂದು ಹೇಳಿದರು.

‘‘ನೀವು ಕೇಳಿರುವ ವಿಷಯಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಲು ನನ್ನಲ್ಲಿ ಈ ಕ್ಷಣದಲ್ಲಿ ಹೊಸ ಮಾಹಿತಿ ಇಲ್ಲ’’ ಎಂದು ನಾಪತ್ತೆಯಾಗಿರುವ ವಿಮಾನದ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದರು.

ಅರುಣಾಚಲಪ್ರದೇಶ ದಕ್ಷಿಣ ಟಿಬೆಟ್ ಆಗಿದೆ ಎಂದು ಚೀನಾ ಭಾವಿಸುತ್ತದೆ ಹಾಗೂ ಅಲ್ಲಿಗೆ ಇತ್ತೀಚೆಗೆ ಟಿಬೆಟ್‌ನ ಆಧ್ಯಾತ್ಮಿಕ ನಾಯಕ ದಲಾಯಿ ಲಾಮಾ ನೀಡಿದ ಭೇಟಿಯಿಂದ ಉಭಯ ದೇಶಗಳ ನಡುವಿನ ಸಂಬಂಧ ಕೆಟ್ಟಿದೆ ಎಂದು ಹೇಳಿದೆ.

ಅದೇ ವೇಳೆ, ಈಶಾನ್ಯದ ರಾಜ್ಯಗಳ ಮುಂಚೂಣಿ ನೆಲೆಗಳಲ್ಲಿ ಎಸ್‌ಯು-30 ಮುಂತಾದ ವಿಮಾನಗಳನ್ನು ನಿಯೋಜಿಸುವ ಭಾರತೀಯ ವಾಯುಪಡೆಯ ನಿರ್ಧಾರವೂ ಬೀಜಿಂಗ್‌ನ ಅಸಮಾಧಾನಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News