ಮಳೆಗಾಲಕ್ಕೆ ಇನ್ನೂ ಸಿದ್ಧಗೊಳ್ಳದ ದ.ಕ. ಜಿಲ್ಲೆ!

Update: 2017-05-24 18:39 GMT
  • ಚರಂಡಿ-ತೋಡುಗಳಲ್ಲಿ ತುಂಬಿದ ಹೂಳು

ಹಂಝ ಮಲಾರ್ ಮಂಗಳೂರು, ಮೇ 24: ಕರಾವಳಿಯಲ್ಲಿ ಬುಧವಾರ ರಾತ್ರಿ ಭಾರೀ ಮಳೆ ಸುರಿಯುವುದರೊಂದಿಗೆ ಮುಂಗಾರು ಮಳೆಯ ಸೂಚನೆ ಕಾಣಿಸಿದೆ. ಆದರೆ ಮಳೆಗಾಲದ ವಿಪತ್ತು ಎದುರಿಸಲು ಪೂರ್ವಭಾವಿಯಾಗಿ ಸೂಕ್ತ ಸಿದ್ಧತೆ ನಡೆಸದ ಕಾರಣ ದ.ಕ. ಜಿಲ್ಲೆ ಅದರಲ್ಲೂ ಮಂಗಳೂರು ನಗರ ಮೊದಲ ಮಳೆಗೆ ನಲುಗಿದೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹಲವು ಕಡೆ ಮರಗಳು ಉರುಳಿವೆ. ಚರಂಡಿ, ತೋಡಿನಲ್ಲಿ ಹೂಳು ತುಂಬಿದ ಪರಿಣಾಮ ರಸ್ತೆಯಲ್ಲೇ ನೀರು ಹರಿದಿದ್ದು, ರಸ್ತೆಯ ಹೊಂಡ ಮುಚ್ಚದ ಕಾರಣ ನೀರು ನಿಂತು ವಾಹನ ಚಾಲಕರು ಪರದಾಡುವಂತಾಗಿದೆ. ನಗರದಲ್ಲಿ ಮಾತ್ರವಲ್ಲ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲೂ ಈ ಸಮಸ್ಯೆ ಇದೆ.

ಮಳೆಗಾಲಕ್ಕೆ ಮುನ್ನ ಅಂದರೆ ಮೇ ಮೊದಲ ವಾರದೊಳಗೆ ಒಳಚರಂಡಿ, ತೆರೆದ ಚರಂಡಿ, ತೋಡುಗಳ ಹೂಳೆತ್ತುವುದು, ಗುಂಡಿ ಬಿದ್ದ ರಸ್ತೆಯನ್ನು ದುರಸ್ತಿ ಮಾಡುವುದು, ಅಪಾಯ ಸ್ಥಿತಿಯಲ್ಲಿರುವ ಮರ ಅಥವಾ ಅವುಗಳ ಗೆಲ್ಲುಗಳ ವಿಲೇವಾರಿ ಮಾಡುವುದು, ರಸ್ತೆಯ ಇಕ್ಕಡೆಗಳಲ್ಲಿ ಕಸಕಡ್ಡಿ, ಹಳೆ ಕಟ್ಟಡಗಳ ತ್ಯಾಜ್ಯ ವಸ್ತುಗಳನ್ನು ಡಂಪಿಂಗ್ ಮಾಡದಂತೆ ಮಾಡಬೇಕಾದುದು ಆಡಳಿತದ ಹೊಣೆಯಾಗಿದೆ. ಆದರೆ ಗ್ರಾಮ ಮಟ್ಟದಿಂದ ನಗರ ಮಟ್ಟದ ಆಡಳಿತವು ಈ ವಿಷಯ ದಲ್ಲಿ ನಿರ್ಲಕ್ಷ ವಹಿಸಿದೆ. ಮಳೆ ಸುರಿದ ಬಳಿಕ ಪೂರ್ವಭಾವಿ ಸಿದ್ಧತೆ ನಡೆಸಿ ರಸ್ತೆ ದುರಸ್ತಿ ಮಾಡಲಾಗದೆ. ಚರಂಡಿಯ ಹೂಳೆತ್ತಲಾಗದೆ ಅರ್ಧದಲ್ಲಿ ಬಿಟ್ಟು ಅದಕ್ಕೆ ನಿಗದಿಪಡಿಸಿದ ಮೊತ್ತವನ್ನು ಬಾಚಿ ಮೂಲ ಉದ್ದೇಶವನ್ನೇ ಮರೆತು ಬಿಡಲಾಗುತ್ತದೆ ಎಂಬ ಆರೋಪ ಕೇಳಿ ಬಂದಿದೆ.

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಣ್ಣ ಮತ್ತು ದೊಡ್ಡ ಸಹಿತ 116 ತೋಡುಗಳಿವೆ. ಸಾಮಾನ್ಯವಾಗಿ ಮೇ ಮೊದಲ ವಾರಕ್ಕೆ ಮುನ್ನ ಅವುಗಳ ಹೂಳೆತ್ತುವಿಕೆ ಕಾರ್ಯ ಮುಗಿಯಬೇಕು. ಆದರೆ, ಮೇ ಅಂತ್ಯಕ್ಕೂ ಈ ಕಾರ್ಯ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಮಳೆ ಸುರಿದ ಬಳಿಕವಂತೂ ಈ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳ್ಳುತ್ತದೆ. ಆದರೆ, ಇವುಗಳಿಗೆ ನಿಗದಿಪಡಿಸಲಾದ ಮೊತ್ತ ಮಾತ್ರ ಖಾಲಿಯಾಗುತ್ತದೆ.

ಅಂದಹಾಗೆ, ಮಂಗಳೂರು ನಗರ ಪಾಲಿಕೆಯ 60 ವಾರ್ಡ್‌ನಲ್ಲಿ ಪ್ರತೀ ವಾರ್ಡ್‌ನ 1 ಮೀ.ಅಗಲದ ಚಿಕ್ಕ ಚಿಕ್ಕ ತೋಡುಗಳ ಹೂಳನ್ನು ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್‌ಗೆ ಗುತ್ತಿಗೆ ನೀಡಲಾಗಿದೆ. ಉಳಿದಂತೆ ಒಂದೊಂದು ವಾರ್ಡ್‌ಗೆ ಒಂದೊಂದು ಗ್ಯಾಂಗ್ ರಚಿಸಲಾಗಿದೆ. ಈ ಗ್ಯಾಂಗ್ ಕನಿಷ್ಠ ಮೂರು ತಿಂಗಳು ಅಂದರೆ ಮೇ, ಜೂನ್, ಜುಲೈಯವರೆಗೆ ನಿರ್ವಹಿಸಬೇಕು. ಪ್ರತಿ 1 ಗ್ಯಾಂಗ್‌ನಲ್ಲಿ 1 ಟಿಪ್ಪರ್ ಸಹಿತ ನುರಿತ 8 ಮಂದಿ ಕೂಲಿ ಕಾರ್ಮಿಕರಿರಬೇಕು.

ಜೊತೆಗೆ ಕತ್ತಿ, ಹಗ್ಗ, ಹಾರೆ, ಪಿಕ್ಕಾಸು, ಬುಟ್ಟಿ ಇತ್ಯಾದಿ ಎಲ್ಲವೂ ಈ ಗ್ಯಾಂಗ್‌ನಲ್ಲಿರಬೇಕು. ಸದ್ಯ ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್‌ಗೊಂದರಂತೆ 60 ಗ್ಯಾಂಗ್‌ಗಳಿವೆ. ಜೊತೆಗೆ ಲಾಲ್‌ಬಾಗ್ ಮತ್ತು ಸುರತ್ಕಲ್‌ನಲ್ಲಿ ರಾತ್ರಿ ಗಸ್ತು ಗ್ಯಾಂಗ್ ಕೂಡ ಇದೆ. ಈ ಗ್ಯಾಂಗ್‌ನಲ್ಲಿ ಮೆಸ್ಕಾಂ, ಅಗ್ನಿಶಾಮಕ ದಳದ ನುರಿತ ಕಾರ್ಮಿಕರು ಇದ್ದಾರೆ. ಈ ಗ್ಯಾಂಗ್ ನಿರಂತರವಾಗಿ ಮೂರು ತಿಂಗಳು ವಾರ್ಡ್ ವ್ಯಾಪ್ತಿಯ ಚರಂಡಿಯ ಹೂಳು ಎತ್ತುವುದು, ಮರಮಟ್ಟುಗಳನ್ನು ಕಡಿಯುವುದು, ರಸ್ತೆ, ಚರಂಡಿಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಅನಿವಾರ್ಯ. ಈ ಗ್ಯಾಂಗ್‌ಗೆ ಮೂರು ತಿಂಗಳಿಗೆ 2.67 ಲಕ್ಷ ರೂ. ನೀಡಲಾಗುತ್ತದೆ. ಈ ಗ್ಯಾಂಗ್‌ನ ಮೇಲ್ನೋಟದ ಹೊಣೆಯನ್ನು ಆಯಾ ವಾರ್ಡ್‌ನ ಕಾರ್ಪೊರೇಟರ್‌ಗೆ ನೀಡಲಾಗಿದೆ. ನಗರದ ಹೊರವಲಯದ ತಗ್ಗುಪ್ರದೇಶದ ಅನೇಕ ಕಡೆ ಕೃತಕ ನೆರೆ ಸೃಷ್ಟಿಯಾಗುವುದು ಸಾಮಾನ್ಯವಾಗಿದ್ದು, ನಗರದ ಬಹುತೇಕ ಪ್ರಮುಖ ರಸ್ತೆಗಳ ಇಕ್ಕಡೆಗಳ ಫುಟ್‌ಪಾತ್‌ಗಳು ಮಾಯವಾಗಿದೆ. ಇನ್ನು ಅಲ್ಲಲ್ಲಿರುವ ಕೆಲವು ಫುಟ್‌ಪಾತ್‌ಗಳು ಕುಸಿದ ಮತ್ತು ಕಾಂಕ್ರಿಟ್ ಸ್ಲಾಬ್ ಕಿತ್ತು ಹೋದ ಕಾರಣ ಪಾದಚಾರಿಗಳು ನಡೆದಾಡಲು ಕೂಡ ಕಷ್ಟವಾಗುತ್ತಿದೆ.

ಅನೇಕ ರಸ್ತೆಯ ಮಧ್ಯೆಯಿರುವ ಮ್ಯಾನ್‌ಹೋಲ್‌ಗಳ ಕಾಮಗಾರಿ ಕೂಡ ಮಂದಗತಿಯಲ್ಲಿ ಸಾಗಿವೆ. ಇದು ಕೂಡ ವಾಹನ ಸಂಚಾರಕ್ಕೆ ತೊಂದರೆಯಾಗಿ ಪರಿಣಮಿಸಿದೆ. ಇದರಿಂದ ಸೃಷ್ಟಿಯಾಗುವ ಟ್ರಾಫಿಕ್ ಜಾಂ ಮಳೆಗಾಲದಲ್ಲಿ ಮತ್ತಷ್ಟು ಅಪಘಾತಕ್ಕೆ ಕಾರಣವಾಗಲಿದೆ.

ನಗರದ ಕೆಎಸ್‌ರಾವ್ ರಸ್ತೆಯ ಸಿಟಿ ಸೆಂಟರ್ ಮತ್ತು ಎರಡು ಟಾಕೀಸ್ ಬಳಿ, ಜ್ಯೋತಿ ವೃತ್ತದ ಸಮೀಪದ ಕಾಲೇಜು ಎದುರು, ಪಾಂಡೇಶ್ವರ ರೈಲ್ವೆ ಗೇಟ್ ಬಳಿ ರಸ್ತೆ, ನಗರದ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿ, ಪಂಪ್‌ವೆಲ್, ಜಪ್ಪು ಪಟ್ಣ, ಕಾರ್‌ಸ್ಟ್ರೀಟ್, ಬಂದರ್ ಆಸುಪಾಸಿನ ರಸ್ತೆಗಳಲ್ಲಿ ನೀರು ನಿಲ್ಲುವ ಕಾರಣ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ನಡೆದಾಡಲು ಪರದಾಡುವಂತಾಗಿದೆ. ಇದು ‘ಸ್ಮಾರ್ಟ್ ಸಿಟಿ’ಗೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ.

ಇದು ಮಂಗಳೂರು ನಗರದ ಸಮಸ್ಯೆಯಾದರೆ ಬೆಳೆಯುತ್ತಿರುವ ನಗರ ಮತ್ತು ಗ್ರಾಮಾಂತರ ಪ್ರದೇಶದ ಸಮಸ್ಯೆ ಕೂಡ ಇದಕ್ಕೆ ಹೊರತಾಗಿಲ್ಲ. ಇಲ್ಲೂ ರಸ್ತೆಯಲ್ಲಿ ಗುಂಡಿ, ರಸ್ತೆಯ ಇಕ್ಕಡೆಗಳ ತೆರೆದ ಮತ್ತು ಒಳಚರಂಡಿಯಲ್ಲಿ ಹೂಳು ತುಂಬಿರುವುದು, ಹುಲ್ಲು ಬೆಳೆದಿರುವುದು ಸಾಮಾನ್ಯವಾಗಿದೆ. ಅದನ್ನು ವಿಲೇವಾರಿ ಮಾಡುವ ಆಸಕ್ತಿಯನ್ನೂ ಸ್ಥಳೀಯಾಡಳಿತ ಸಂಸ್ಥೆಗಳು ಹೊಂದಿಲ್ಲ.

  • ಟೆಂಡರ್ ಕರೆದಿಲ್ಲಮಳೆಗಾಲ ಆರಂಭಗೊಂಡರೂ ಗ್ಯಾಂಗ್‌ಗೆ ಸಂಬಂಧಿಸಿದಂತೆ ಟೆಂಡರ್ ಇನ್ನೂ ಕರೆದಿಲ್ಲ. ಆದರೆ ಕೆಲವು ಕಾರ್ಪೊರೇಟರ್‌ಗಳು ಗುತ್ತಿಗೆದಾರರ ಜೊತೆ ಒಳ ಒಪ್ಪಂದ ಮಾಡಿಕೊಂಡ ಪರಿಣಾಮ ಹೂಳೆತ್ತುವುದು, ಮರಮಟ್ಟುಗಳ ವಿಲೇವಾರಿ ಇತ್ಯಾದಿ ಕಾಮಗಾರಿ ನಡೆಯುತ್ತಿದೆ. ಈ ಸಾಲಿನ ನಿಯಮಾವಳಿಯಂತೆ ಪ್ರತೀ ದಿನ ಟಿಪ್ಪರ್ ಬಳಕೆ ಮಾಡಬೇಕಾಗಿಲ್ಲ. ಬದಲಾಗಿ ಎರಡು ದಿನಕ್ಕೊಮ್ಮೆ ಟಿಪ್ಪರ್ ಬಳಸಿದರೂ ಸಾಕು.

  • ಬುಧವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಅನೇಕ ಕಡೆ ಮರಗಳು ಉರುಳಿ ಬಿದ್ದಿವೆ, ಮೆಸ್ಕಾಂ ಕಂಬಗಳಿಗೆ ಹಾನಿಯಾಗಿವೆ. ಆದರೆ ಜಿಲ್ಲಾಡಳಿತದ ಅಧೀನದಲ್ಲಿರುವ ಪ್ರಾಕೃತಿಕ ವಿಕೋಪ ಕೇಂದ್ರಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇನ್ನು ಜಿಲ್ಲಾಧಿಕಾರಿ ಕೂಡ ಮಳೆಗಾಲ ಪೂರ್ವ ಸಿದ್ಧತೆಗಾಗಿ ಅಧಿಕಾರಿಗಳ ಸಭೆ ಕರೆದಿಲ್ಲ.

ಒಂದು ಫೋಟೋ ಇದ್ದರೆ ಸಾಕು

ಗ್ಯಾಂಗ್‌ಮೆನ್‌ಗಳು ಕೆಲಸ ಮಾಡುತ್ತಾರೋ, ಇಲ್ಲವೋ ಅಥವಾ ನಗರದ ಸಮಸ್ಯೆ ಪರಿಹಾರ ಆಗಿದೆಯೋ ಇಲ್ಲವೋ ಎಂಬುದು ಮುಖ್ಯವಲ್ಲ. ಯಾವುದಾದರೊಂದು ಕಡೆ ಜೆಸಿಬಿಯನ್ನು ತೋಡಿಗೆ ಇಳಿಸಿ ಫೋಟೋ ತೆಗೆದು ಬಿಟ್ಟರೆ ಸಾಕು, ಬಿಲ್ ಪಾಸ್ ಆದಂತೆಯೇ. ಗುತ್ತಿಗೆದಾರರು ತೋಡಿನ ಹೂಳೆತ್ತಿಸುವುದೂ ಇಲ್ಲ. ಆಡಳಿತಗಾರರು ಸರಿಯಾಗಿ ತೆಗೆಸುವುದೂ ಇಲ್ಲ. ಎಪ್ರಿಲ್‌ನಲ್ಲಿ ಮುಗಿಯಬೇಕಿದ್ದ ಮಳೆಗಾಲ ಪೂರ್ವ ಸಿದ್ಧತೆಯು ಇನ್ನೂ ಆರಂಭಗೊಂಡಿಲ್ಲ. ಇನ್ನೊಂದೆರಡು ಮಳೆ ಸುರಿದ ಬಳಿಕ ಆರಂಭಿಸಿ ಮತ್ತೆ ಮಳೆಯ ನೆಪವೊಡ್ಡಿ ಕಾಮಗಾರಿ ನಿಲ್ಲಿಸುತ್ತಾರೆ. ಬಿಲ್ ಮಾತ್ರ ಪೂರ್ತಿ ಪಾವತಿಯಾಗುತ್ತದೆ. ಇದು ಪ್ರತೀ ವರ್ಷ ಮಳೆಗಾಲ ಪೂರ್ವ ಸಿದ್ಧತೆಗೆ ಸಂಬಂಧಿಸಿ ನಡೆಯುವ ವಿದ್ಯಮಾನವಾಗಿದೆ.

-ಹನುಮಂತ ಕಾಮತ್

ಸಾಮಾಜಿಕ ಹೋರಾಟಗಾರರು, ಮಂಗಳೂರು.

ಗ್ಯಾಂಗ್ ಎಲ್ಲಿ?

ಮಳೆಗಾಲ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿಕೊಳ್ಳಲಾಗುತ್ತಿದೆಯೇ ವಿನಃ ಎಲ್ಲೂ ಸಿದ್ಧತೆ ಮಾಡಿಕೊಂಡಿಲ್ಲ. ಮನಪಾದಲ್ಲಿ ಗುಣಮಟ್ಟದ ಕಾಮಗಾರಿ ಮಾಡಿದ ಗುತ್ತಿಗೆದಾರರ ಬಿಲ್ ಪಾಸ್ ಆಗುವುದು ಕಷ್ಟ. ಹಾಗಾಗಿ ಹೆಚ್ಚಿನ ಗುತ್ತಿಗೆದಾರರು ಕಾಮಗಾರಿ ಕೈಗೆತ್ತಿಕೊಳ್ಳಲು ಹಿಂದೇಟು ಹಾಕುತ್ತಾರೆ. ಮನಪಾದ 60 ವಾರ್ಡ್‌ನಲ್ಲಿ 60 ಗ್ಯಾಂಗ್‌ಮೆನ್ ತಂಡವನ್ನು ರಚಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ನನ್ನ ವಾರ್ಡ್‌ನಲ್ಲಿ ಈವರೆಗೆ ಯಾವುದೇ ಗ್ಯಾಂಗ್‌ಮೆನ್‌ಗಳ ತಂಡ ರಚನೆಯಾದ ಬಗ್ಗೆ ನನಗೆ ಮಾಹಿತಿ ಇಲ್ಲ. ನಮ್ಮದೇ ನಿಧಿಯಿಂದ ಸಣ್ಣಪುಟ್ಟ ಕಾಮಗಾರಿ ಮಾಡಿ ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುತ್ತದೆ.

-ಲತೀಫ್ ಕಂದುಕ ಕಾರ್ಪೊರೇಟರ್,

ಮನಪಾ ಮಂಗಳೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News