ಕಾಶ್ಮೀರ: ಮಾನವ ಗುರಾಣಿ ವಿವಾದ; ಮೇಜರ್ ಗೊಗೋಯಿ ಕ್ರಮ ಸಮರ್ಥಿಸಿದ ಅಟಾರ್ನಿ ಜನರಲ್
ಹೊಸದಿಲ್ಲಿ, ಮೇ 25: ಯುವಕನೋರ್ವನನ್ನು ಸೇನಾಪಡೆಯ ಜೀಪಿಗೆ ಕಟ್ಟಿ ಮಾನವ ಗುರಾಣಿಯಂತೆ ಬಳಸಿಕೊಂಡ ಸೇನೆಯ ಮೇಜರ್ ನಿತಿನ್ ಲೀಟಲ್ ಗೊಗೋಯಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಮತ್ತು ಅಗತ್ಯಬಿದ್ದರೆ ಅವರ ಕ್ರಮವನ್ನು ನ್ಯಾಯಾಲಯದಲ್ಲಿ ಸಮರ್ಥಿಸುವುದಾಗಿ ಅಟಾರ್ನಿ ಜನರ್ ಮುಕುಲ್ ರೋಹಟ್ಗಿ ತಿಳಿಸಿದ್ದಾರೆ.
ಎಪ್ರಿಲ್‌ನಲ್ಲಿ ಹಿಂಸಾಚಾರದ ಮಧ್ಯೆ ನಡೆದಿದ್ದ ಶ್ರೀನಗರ ಲೋಕಸಭಾ ಉಪಚುನಾವಣೆಯ ಸಂದರ್ಭ ಗೊಗೊಯಿ, ಉದ್ರಿಕ್ತ ಪ್ರತಿಭಟನಾಕಾರರ ನಡುವೆ ಸಿಲುಕಿದ್ದ ಸೇನಾಪಡೆಯ ಜೀಪಿನ ಬಾನೆಟ್‌ಗೆ ವ್ಯಕ್ತಿಯೋರ್ವನನ್ನು ಕಟ್ಟಿ ಹಾಕಿ ಮಾನವ ಗುರಾಣಿಯಂತೆ ಬಳಸಿಕೊಂಡು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಸಫಲರಾಗಿದ್ದರು. ಈ ಕ್ರಮ ವ್ಯಾಪಕ ಚರ್ಚೆಗೆ ಗ್ರಾಸ ಒದಗಿಸಿದ್ದು ಸಾಕಷ್ಟು ಶ್ಲಾಘನೆಯೂ ವ್ಯಕ್ತವಾಗಿತ್ತು.
ಮಾನವ ಹಕ್ಕು ಉಲ್ಲಂಘಿಸಿದ್ದಾರೆ ಎಂಬ ಆರೋಪದಲ್ಲಿ ಗೊಗೊಯಿ ವಿರುದ್ಧ ನಾ್ಯಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು.
ಅಗತ್ಯಬಿದ್ದರೆ ನ್ಯಾಯಾಲಯದಲ್ಲಿ ಗೊಗೊಯಿ ಕೃತ್ಯವನ್ನು ನಾನು ಸಮರ್ಥಿಸುತ್ತೇನೆ. ಮೇಜರ್ ಗೊಗೊಯಿ ದೇಶಕ್ಕಾಗಿ ತನ್ನ ಪ್ರಾಣವನ್ನೇ ಪಣವಾಗಿಟ್ಟಿದ್ದಾರೆ. ನಾವು ನಿರ್ಭಯವಾಗಿ ಬದುಕುವಂತಾಗಲು ತಮ್ಮ ಪ್ರಾಣದ ಹಂಗು ತೊರೆದು ಕಾರ್ಯ ನಿರ್ವಹಿಸುವ ಯೋಧರ ಬಗ್ಗೆ ಕಿಂಚಿತ್ತೂ ಗೌರವವಿಲ್ಲದ ಕೆಲವರು ಅಸಂಬದ್ಧ ಟೀಕೆ ಮಾಡುತ್ತಿದ್ದಾರೆ. ಆ ಸಂದರ್ಭ ಗೊಗೊಯಿ ತೋರಿದ ಸಮಯಪ್ರಜ್ಞೆ ಹಲವರ ಪ್ರಾಣ ಕಾಪಾಡಿದೆ. ಆ ಸಂದರ್ಭ ಮೇಜರ್ ‘ಸಂಯಮ ಸೂತ್ರ’ ಅನುಸರಿಸಿ ಉದ್ರಿಕ್ತ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಿರು ಎಂದು ರೋಹಟ್ಗಿ ಶ್ಲಾಘಿಸಿದರು.