ಸಸಿಹಿತ್ಲು: ‘ಇಂಡಿಯನ್ ಓಪನ್ ಆಫ್ ಸರ್ಫಿಂಗ್’ಗೆ ಚಾಲನೆ

Update: 2017-05-26 06:17 GMT

ಮಂಗಳೂರು, ಮೇ 26: ಸಸಿಹಿತ್ಲು ಬಳಿಯ ಕಡಲ ತೀರದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ ಅಂತಾರಾಷ್ಟ್ರೀಯ ಸರ್ಫಿಂಗ್ ಉತ್ಸವ ‘ಇಂಡಿಯನ್ ಓಪನ್ ಆಫ್ ಸರ್ಫಿಂಗ್’ ಸ್ಪರ್ಧೆ ಇಂದು ಬೆಳಗ್ಗೆ ಉದ್ಘಾಟನೆಗೊಂಡಿತು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ಸರ್ಫಿಂಗ್ ಉತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸರ್ಫಿಂಗ್‌ಗೆ ವಿದೇಶದಲ್ಲಿ ಸಿಗುತ್ತಿರುವಷ್ಟು ಮನ್ನಣೆ ನಮ್ಮಲ್ಲಿ ಸಿಗುತ್ತಿಲ್ಲ. ಈ ಕಾರಣದಿಂದ ಸಸಿಹಿತ್ಲು ಬೀಚ್‌ನಲ್ಲಿ ಕಳೆದ ವರ್ಷದಿಂದ ಸರ್ಫಿಂಗ್‌ಗೆ ವಿಶೇಷ ಮುತುವರ್ಜಿ ವಹಿಸಲಾಗುತ್ತಿದೆ. ಇಲ್ಲಿ ಸರ್ಫಿಂಗ್ ಅನ್ನು ಬೆಳೆಸಲು ಸರಕಾರ ಹೆಚ್ಚಿನ ಸಹಕಾರ ನೀಡುತ್ತಿದೆ ಎಂದರು.

*2018ರಲ್ಲಿ ಸಸಿಹಿತ್ಲುವಿನಲ್ಲಿ ವರ್ಲ್ಡ್ ಸರ್ಫಿಂಗ್ ಫೆಸ್ಟ್

ದ.ಕ. ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಮಾತನಾಡಿ, 2018ರ ಮೇ 25ರಿಂದ 27ರವರೆಗೆ ಸಸಿಹಿತ್ಲುವಿನಲ್ಲಿ ವರ್ಲ್ಡ್ ಸರ್ಫಿಂಗ್ ಫೆಸ್ಟ್ ಆಯೋಜಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಈಗಾಗಲೇ ಸಿದ್ಧತೆಗಳು ಆರಂಭಗೊಂಡಿದೆ ಎಂದು ತಿಳಿಸಿದರು.

ಶಾಸಕ ಅಭಯಚಂದ್ರ ಜೈನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಶಾಸಕ ಜೆ.ಆರ್.ಲೋಬೊ, ಮನಪಾ ಮೇಯರ್ ಕವಿತಾ ಸನಿಲ್, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ನವೀನ್‌ರಾಜ್ ಸಿಂಗ್, ಕೆನರಾ ವಾಟರ್ ಸ್ಪೋರ್ಟ್ಸ್ ಆ್ಯಂಡ್ ಪ್ರಮೋಶನ್ಸ್ ಕೌನ್ಸಿಲ್ ಅಧ್ಯಕ್ಷ ಮನೋಹರ್ ಶೆಟ್ಟಿ, ಮಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್, ಎಡಿಸಿ ಕುಮಾರ್, ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಕಿಶೋರ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಇಂದು ಬೆಳಗ್ಗೆಯಿಂದ ಆರಂಭಗೊಂಡ ಮೂರು ದಿನಗಳ ಕಾಲ ನಡೆಯುವ ಈ ಸರ್ಫಿಂಗ್ ಉತ್ಸವದಲ್ಲಿ ಅಂತಾರಾಷ್ಟ್ರೀಯ ಸರ್ಫರ್‌ಗಳು ಸೇರಿದಂತೆ ಒಟ್ಟು 120 ಸರ್ಫರ್‌ಗಳು ಕಡಲ ಅಲೆಗಳ ಏರಿಳಿತದಲ್ಲಿ ತಮ್ಮ ಸಾಹಸ ಪ್ರದರ್ಶನವನ್ನು ನೀಡಲಿದ್ದಾರೆ.

ಬಾಲಿವುಡ್ ನಟ ಸುನಿಲ್ ಶೆಟ್ಟಿ ಸರ್ಫಿಂಗ್ ಉತ್ಸವದ ರಾಯಭಾರಿಯಾಗಿದ್ದಾರೆ.

ಅಂತಾರಾಷ್ಟ್ರೀಯ ಸರ್ಫಿಂಗ್ ಒಕ್ಕೂಟ ಹಾಗೂ ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾ ಈ ಸಂಸ್ಥೆಗಳು 2ನೇ ಇಂಡಿಯನ್ ಓಪನ್ ಸರ್ಫಿಂಗ್ ಕ್ರೀಡಾಕೂಟಕ್ಕೆ ಮಾನ್ಯತೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕೆನರಾ ಸರ್ಫಿಂಗ್ ಮತ್ತು ಜಲಕ್ರೀಡೆ ಉತ್ತೇಜನಾ ಸಂಸ್ಥೆ, ಮಂತ್ರ ಸರ್ಫ್ ಕ್ಲಬ್ ಜಂಟಿಯಾಗಿ ಈ ಕ್ರೀಡಾಕೂಟವನ್ನು ಆಯೋಜಿಸಿದೆ.

ಸರ್ಫಿಂಗ್ ಕ್ರೀಡಾಕೂಟದೊಂದಿಗೆ ಸಸಿಹಿತ್ಲು ಕಡಲಕಿನಾರೆಯಲ್ಲಿ ಅತ್ಯಾಕರ್ಷಕ ಸಾಂಸ್ಕೃತಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಇದಲ್ಲದೆ ಬೀಚ್ ವಾಲಿಬಾಲ್ ಸಹಿತ ವಿವಿಧ ಕ್ರೀಡಾಕೂಟಗಳು, ರುಚಿಕರ ಆಹಾರ ಖಾದ್ಯಗಳನ್ನೊಳಗೊಂಡ ಆಹಾರ ಉತ್ಸವವನ್ನೂ ಮೂರು ದಿನಗಳ ಸರ್ಫಿಂಗ್ ಕ್ರೀಡಾಕೂಟದ ಸಂದರ್ಭದಲ್ಲಿ ಆಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News