ಕಡಲ ಅಲೆಗಳ ಜತೆ ಮೈ ನವಿರೇಳಿಸುವ ಸರ್ಫರ್‌ಗಳ ಸಾಹಸ!

Update: 2017-05-26 10:27 GMT

ಮಂಗಳೂರು, ಮೇ 26: ಕಡಲ ಕಿನಾರೆಯಲ್ಲಿ ಒಂದರ ಮೇಲೊಂದರಂತೆ ಗಾಳಿಯ ವೇಗಕ್ಕೆ ತಕ್ಕಂತೆ ಪುಟಿದೇಳುವ ಅಲೆಗಳ ಮೇಲೆ ಕಾಲಿಗೆ ಹಲಗೆಯ ರೂಪದ ಸರ್ಫಿಂಗ್ ಬೋರ್ಡ್ ಮೇಲೆ ದೇಹದ ಸಮತೋಲನವನ್ನು ಕಾಯ್ದುಕೊಂಡು ಅಲೆಗಳೊಂದಿಗೆ ಸಾಗುವುದೇ ಸರ್ಫಿಂಗ್. ನೋಡುಗರ ಮೈ ನವಿರೇಳಿಸುವ ಈ ಜಲಸಾಹಸ ಕ್ರೀಡೆ ನೋಡುಗರನ್ನು ನಿಬ್ಬೆಸಬೆರಗಾಗಿಸುವುದಂತೂ ನಿಜ.

ಸಸಿಹಿತ್ಲುವಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಅಂತಾರಾಷ್ಟ್ರ ಮಟ್ಟದ ಸರ್ಫಿಂಗ್ ಸ್ಪರ್ಧೆಯಲ್ಲಿ ವಿದೇಶಿ ಸರ್ಫರ್‌ಗಳು ಕೂಡಾ ಭಾಗವಹಿಸುತ್ತಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾದ ಒಬ್ಬರು, ಫ್ರಾನ್ಸ್‌ನ ಮೂವರು, ರಿ ಯೂನಿಯನ್ ಐಲ್ಯಾಂಡ್‌ನ ಇಬ್ಬರು, ಮಡಾಸ್ಕರ್‌ನ ಒಬ್ಬರು, ಮಾಲ್ಡೀವ್ಸ್‌ನ ಇಬ್ಬರು ಸರ್ಫರ್‌ಗಳು ಸಸಿಹಿತ್ಲುವಿನಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಕಡಲ ಅಲೆಗಳ ಜತೆ ವಿದೇಶಿ ಸರ್ಫರ್‌ಗಳ ಜತೆ ಸ್ಥಳೀಯ ಸರ್ಫರ್‌ಗಳು ಕೂಡಾ ತಮ್ಮ ಸಾಹಸ ಪ್ರದರ್ಶನವನ್ನು ನೀಡುವುದನ್ನು ಕಡಲ ಅಂಚಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಲ ಸಾಹಸ ಪ್ರೇಮಿಗಳು ವೀಕ್ಷಿಸಿದರು.

ಕಡಲ ಕಿನಾರೆಯ ಸಾಲು ಮರಗಳ ನಡುವೆ ಮಕ್ಕಳ ಜತೆ ಪೋಷಕರು ವಿವಿಧ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಮನರಂಜನೆ ಪಡೆದರು. ಸರ್ಫಿಂಗ್ ಕ್ರೀಡೆಗೆ ಪೂರಕವಾದ ಸ್ಕೇಟಿಂಗಿಗೂ ಕಡಲ ಕಿನಾರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಸ್ಕೇಟಿಂಗ ಬೋರ್ಡ್‌ನಲ್ಲಿ ಸ್ಥಳೀಯರು ಮಾತ್ರವಲ್ಲದೆ , ನೆರೆಯ ರಾಜ್ಯಗಳ ಸ್ಕೇಟಿಂಗ್ ಕ್ರೀಡಾಳುಗಳು ತಮ್ಮ ಚಾಕಚಕ್ಯತೆಯನ್ನು ಪ್ರದರ್ಶಿಸಿದರು. ಸಾಲು ಮರಗಳಿಗೆ ಸುಮಾರು 2 ಅಡಿ ಎತ್ತರದಲ್ಲಿ ಕಟ್ಟಲಾಗಿದ್ದ ಹಗ್ಗಗಳ ಮೇಲೆ ಮಕ್ಕಳು ಹಾಗೂ ಹಿರಿಯರು ಹತ್ತಿಳಿದು ಬೀಳುವ ಮೂಲಕ ಸಾಹಸ ಪ್ರದರ್ಶನ ನೀಡಿದರು.

# ಕರಾವಳಿ ತೀರದಲ್ಲಿ ಸರ್ಫಿಂಗ್‌ಗೆ ಜೀವ ತುಂಬಿದ ಸರ್ಫಿಂಗ್ ಸ್ವಾಮಿ!

ಒಂದು ಸಮಯದಲ್ಲಿ ಕೇವಲ ಹೊರ ರಾಷ್ಟ್ರಗಳಿಗೆ ಮಾತ್ರ ಸೀಮಿತವಾಗಿದ್ದ ಈ ಕ್ರೀಡೆ 14 ವರ್ಷಗಳಿಂದೀಚೆಗೆ ಮುಲ್ಕಿ ಕಡಲ ಕಿನಾರೆಯ ಮೂಲಕ ಸ್ಥಳೀಯ ಯುವ ಸಾಹಸಿಗಳನ್ನು ಆಕರ್ಷಿಸಿದೆ. ಸ್ಥಳೀಯವಾಗಿ ಸರ್ಫಿಂಗ್ ಸ್ವಾಮಿ ಎಂದೇ ಕರೆಸಿಕೊಳ್ಳುವ ಅಮೆರಿಕದ ಜ್ಯಾಕ್ ಎಬ್ನೇರ್ ಮುಲ್ಕಿ ಕಡಲ ಕಿನಾರೆಯಲ್ಲಿ ಹುಟ್ಟು ಹಾಕಿದ ಮಂತ್ರ ಕ್ಲಬ್‌ನ ಮೂಲಕ ಈಗಾಗಲೇ ನೂರಾರು ಜಲ ಸಾಹಸ ಕ್ರೀಡಾಪಟುಗಳು ತಮ್ಮ ಸಾಹಸವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಿದ್ದಾರೆ.

40 ವರ್ಷಗಳ ಹಿಂದೆ ಭಾರತಕ್ಕೆ ಆಗಮಿಸಿದ್ದ ಜ್ಯಾಕ್ ಎಬ್ನೇರ್ ಆರಂಭದಲ್ಲಿ ಶ್ರೀರಂಗಪಟ್ಟಣದಲ್ಲಿ ಮಕ್ಕಳಿಗೆ ಸಾಹಸ ಕ್ರೀಡೆಗಳ ತರಬೇತಿ ನೀಡಲಾರಂಭಿಸಿದರು. ಕಡಲ ಕಿನಾರೆಗಳಿಗೆ ಪ್ರವಾಸ ಹೋಗುತ್ತಿದ್ದ ಅವರು ಮಂಗಳೂರಿನ ಕಡಲ ಕಿನಾರೆಗೂ ಆಗಮಿಸಿದ್ದ ವೇಳೆ ತಮ್ಮ ಆಸಕ್ತಿಯ ಸರ್ಫಿಂಗ್ ಕ್ರೀಡೆಗೆ ಈ ಜಾಗ ಸೂಕ್ತ ಎಂದು ಆಯ್ದುಕೊಂಡು ಮುಲ್ಕಿಯಲ್ಲಿ ಮಂತ್ರ ಕ್ಲಬ್ ಆರಂಭಿಸಿದರು. ಈ ಮೂಲಕ ಇದೀಗ ಸಸಿಹಿತ್ಲು ಬೀಚ್ ರಾಷ್ಟ್ರ ಮಟ್ಟದಲ್ಲಿ ಸರ್ಫಿಂಗ್ ಕ್ರೀಡೆಯ ಮೂಲಕ ಪ್ರಸಿದ್ಧಿಗೆ ಕಾರಣವಾಗಿದೆ.

ಈ ನಡುವೆ, ಅಂತಾರಾಷ್ಟ್ರೀಯ ಸರ್ಫಿಂಗ್ ಸಂಸ್ಥೆಯು ಒಲಿಂಪಿಕ್ ಸಮಿತಿಗೆ, ಸರ್ಫಿಂಗ್ ಕ್ರೀಡೆಯ ಸೇರ್ಪಡೆಗೆ ಸುಮಾರು 15 ವರ್ಷಗಳ ಹಿಂದೆ ಸಲ್ಲಿಸಿರುವ ಪ್ರಸ್ತಾಪದ ಹಿನ್ನೆಲೆಯಲ್ಲಿ 2020ರಲ್ಲಿ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಸರ್ಫಿಂಗ್ ಸ್ಪರ್ಧೆ ಸೇರ್ಪಡೆಯಾಗಿದೆ. ಇದರಿಂದಾಗಿ ಈಗಾಗಲೇ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿರುವ ಯುವ ಸರ್ಫರ್‌ಗಳು ಮುಂಬರುವ ಒಲಿಂಪಿಕ್ಸ್ ಕ್ರೀಡೆಯಲ್ಲೂ ಭಾಗವಹಿಸಿ ಜಯಗಳಿಸುವ ನಿರೀಕ್ಷೆಯನ್ನು ಹುಟ್ಟಿಸಿದೆ.

ಏಳರ ಹರೆಯದ ಕಮಲಿಗೆ ಸ್ಕೇಟರ್ ಆಗುವಾಸೆ!

 

ಸುಮಾರು ಮೂರು ಅಡಿ ಎತ್ತರದ ತೆಳ್ಳನೆ ದೇಹದ ಏಳು ವರ್ಷದ ಪುಟ್ಟ ಬಾಲೆ ಕಮಲಿ ಕಡಲ ಕಿನಾರೆಯ ಸ್ಕೇಟಿಂಗ್ ಬೋರ್ಡ್‌ನಲ್ಲಿ ಮಾಡುತ್ತಿದ್ದ ಸಾಹಸ ನೋಡುಗರನ್ನು ಆಕರ್ಷಿಸುತ್ತಿತ್ತು. ಅರ್ಧ ಚಂದ್ರಾಕೃತಿಯ ಏರು-ಇಳಿಜಾರು ರೂಪದ ದಪ್ಪನೆಯ ಮರದ ಹಲಗೆಯ ಮೇಲೆ ಸ್ಕೇಟಿಂಗ್ ಬೋರ್ಡ್ ಮೇಲೆ ಹತ್ತಿ ಯಾವುದೇ ಅಳುಕಿಲ್ಲದೆ ಅತ್ತಿಂದಿತ್ತ ಲೀಲಾಜಾಲವಾಗಿ ಚಲಿಸುತ್ತಿದ್ದ ಬಾಲೆ ಕಮಲಿಗೆ ತಾನು ದೊಡ್ಡವಳಾದ ಮೇಲೆ ಉತ್ತಮ ಸ್ಕೇಟರ್ ಆಗಬೇಕೆಂಬ ಆಸೆಯಂತೆ. ಕಮಲಿಗೆ ಸರ್ಫಿಂಗ್ ಕೂಡಾ ತಿಳಿದಿದೆಯಾದರೂ ಅಬ್ಬರದ ಅಲೆಗಳ ನಡುವೆ ಆಕೆಗೆ ಈಜಲು ಕೊಂಚ ಅಸಾಧ್ಯ ಎನ್ನುತ್ತಾರೆ ಆಕೆಯ ಜತೆಗಿದ್ದ ಹಿರಿಯ ಸಹಪಾಠಿಗಳು. ಇಂಗ್ಲಿಷ್ ಹಾಗೂ ತಮಿಳು ಮಾತನಾಡಬಲ್ಲ ಕಮಲಿ ಮೂಲತಃ ತಮಿಳುನಾಡಿನ ಮಹಾಬಲಿಪುರಂ ನಿವಾಸಿ. ತನ್ನ ಸರ್ಫರ್ ಮಾವನ ಜತೆ ಸಸಿಹಿತ್ಲುವಿಗೆ ಆಗಮಿ ಸಿರುವ ಈಕೆ ತನ್ನ ಮಾವನ ಜತೆ ನಾಲ್ಕರ ಹರೆಯದಲ್ಲೇ ಸ್ಕೇಟಿಂಗ್ ಅಭ್ಯಾಸ ಆರಂಭಿಸಿದ್ದಾಳಂತೆ.

# ಸರ್ಫಿಂಗ್‌ಗೆ ಅತ್ಯುತ್ತಮ ತಾಣ ಸಸಿಹಿತ್ಲು: ಚಂದ್ರಶೇಖರ್

ಸರ್ಫಿಂಗ್ ಕ್ರೀಡೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ, ಕಳೆದ ಬಾರಿ ಸರ್ಫಿಂಗ್ ಸ್ಪರ್ಧೆಯ ವೇಳೆ ಕಡಲಂಚಿನಲ್ಲಿ ಸರ್ಫಿಂಗ್ ಮಾಡಿದ್ದ ಮಂಗಳೂರು ಪೊಲೀಸ್ ಆಯುಕ್ತ ಚಂದ್ರಶೇಖರ್‌ರವರು, ಸಸಿಹಿತ್ಲು ಸರ್ಫಿಂಗ್ ಕ್ರೀಡೆಗೆ ಅತ್ಯುತ್ತಮ ತಾಣ ಎಂದು ಪ್ರತಿಕ್ರಿಯಿಸಿದರು. ದೇಹದ ಸಮತೋಲವನ್ನು ಕಾಯ್ದುಕೊಂಡು ನೀರಿನ ಅಲೆಗಳಲ್ಲಿ ಸರ್ಫಿಂಗ್ ಬೋರ್ಡ್ ಮೇಲೆ ಮಾಡುವ ಸಾಹಸ ಕ್ರೀಡೆಯಾದ ಸರ್ಫಿಂಗ್‌ಗೆ ಪ್ರಸ್ತುತ ಸಾಕಷ್ಟು ಅವಕಾಶಗಳು ಲಭ್ಯವಿದೆ. ಯುವಕರು ಈ ಬಗ್ಗೆ ಸಾಕಷ್ಟು ಆಸಕ್ತಿಯನ್ನು ತೋರಿಸುತ್ತಿದ್ದಾರೆ ಎಂದು ಅವರು ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News