ಶಿಕ್ಷಕಿ ಯುದ್ಧಾಪರಾಧವೆಸಗಿದ್ದಾರೆಂದು ಬರೆದ 11 ವರ್ಷದ ವಿದ್ಯಾರ್ಥಿನಿ

Update: 2017-05-27 11:14 GMT

ಗ್ಲಾಸ್ಗೋ,ಮೇ 27 : ತನ್ನ ಶಾಲಾ ಶಿಕ್ಷಕಿ ಯುದ್ಧಾಪರಾಧ ಎಸಗಿದ್ದಾರೆಂದು 11 ವರ್ಷದ ಬಾಲಕಿಯೊಬ್ಬಳ ದೂರು ಸಾಕಷ್ಟು ಚರ್ಚೆಗೀಡಾಗಿದೆಯಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿಯೂ ಬಿಟ್ಟಿದೆ.

ವಿದ್ಯಾರ್ಥಿಗಳ ಫೀಡ್ ಬ್ಯಾಕ್ ಫಾರ್ಮ್ ನಲ್ಲಿ ಬಾಲಕಿ ಆವಾ ಬೆಲ್‌ ಹೀಗೆಂದು ಬರೆದಿದ್ದಾಳೆ ‘‘ ಸಾಮೂಹಿಕ ಶಿಕ್ಷೆ ನೀಡುವುದು ನ್ಯಾಯಸಮ್ಮತವಲ್ಲ ಏಕೆಂದರೆ ಹೆಚ್ಚಿನವರು ಏನೂ ತಪ್ಪು ಮಾಡಿಲ್ಲ 1949ರ ಜಿನೀವಾ ಸಮಾವೇಶದ ಪ್ರಕಾರ ಇದು ಯುದ್ಧಾಪರಾಧ.’’

ಆವಾ ಹೀಗೆ ಬರೆದ ವಿಚಾರವನ್ನು ಆಕೆಯ ತಂದೆ ಗ್ಯಾವಿನ್ ಬೆಲ್‌ಲ್ ಟ್ವಿಟ್ಟರಿನಲ್ಲಿ ಹೇಳಿಕೊಂಡಿದ್ದಾರೆ. ‘‘ಆಕೆಗೆ ಶಿಕ್ಷೆ ನೀಡಬೇಕೇ ಇಲ್ಲವೇ ಐಸ್ ಕ್ರೀಮ್ ಖರೀದಿಸಿ ಕೊಡಬೇಕೇ ಎಂದು ನನಗೆ ತಿಳಿಯತ್ತಿಲ್ಲ,’’ ಎಂದೂ ಅವರು ಬರೆದಿದ್ದಾರೆ.

ಆಕೆಯ ಬರಹವಿರುವ ಫೀಡ್ ಬ್ಯಾಕ್ ಫಾರ್ಮಿನ ಫೋಟೋ ಗೆ ಟ್ವಿಟ್ಟರಿನಲ್ಲಿ 4 ಲಕ್ಷಕ್ಕೂ ಅಧಿಕ ಲೈಕುಗಳು ಬಂದಿವೆ. ಗ್ಯಾವಿನ್ ಬೆಲ್‌ಲ್ ಗ್ಲಾಸ್ಗೋ ನಿವಾಸಿಯಾಗಿದ್ದಾರೆ ಹಾಗೂ ತಮ್ಮ ಹಿರಿಯ ಪುತ್ರಿಗೆ 11 ವರ್ಷವಾಗಿದ್ದರೂ 47 ವರ್ಷದವರಂತೆ ವರ್ತಿಸುತ್ತಿದ್ದಾಳೆ ಎಂದು ಬರೆದಿದ್ದಾರೆ.

‘‘ತನ್ನ ಶಿಕ್ಷಕಿ ಒಬ್ಬರು ಅದ್ಭುತ ವ್ಯಕ್ತಿ ಎಂದು ಆಕೆ ತಿಳಿಯುತ್ತಾಳೆ,’’ ಎಂದು ಸ್ಪಷ್ಟೀಕರಣ ನೀಡಿರುವ ಬೆಲ್‌ಲ್ ‘‘ಶಾಲೆಗಳಲ್ಲಿನ ಶೈಕ್ಷಣಿಕ ನ್ಯಾಯ ಪದ್ಧತಿಯ ವಿರುದ್ಧ ಆಕೆಗೆ ಅಸಮಾಧಾನವಿದೆ’’ ಎಂದು ಆಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಮಕ್ಕಳ ಕಾರ್ಯಚಟುವಟಿಕೆಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡುವ ಕಾರ್ಯಕ್ರಮವೊಂದರಲ್ಲಿ ತಾನು ತನ್ನ ಪುತ್ರಿ ಬರೆದಿರುವುದನ್ನು ಓದಿದೆ ಎಂದು ಹೇಳುವ ಅವರು ತನ್ನ ಪುತ್ರಿ ಮನೆಯಲ್ಲಿ ಯಾವುದೇ ವಾದದಲ್ಲಿ ಸೋಲುವುದಿಲ್ಲ ಎಂದಿದ್ದಾರೆ.

ಆವಾ ಬೆಲ್‌ ಳ ಈ ಬರಹಕ್ಕೆ ಟ್ವಿಟ್ಟರಿಗರಿಂದ ಹಾಗೂ ಶಾಲೆಯ ಇತರ ಮಕ್ಕಳ ಪೋಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News