10ನೆ ಫ್ರೆಂಚ್ ಓಪನ್ ಪ್ರಶಸ್ತಿಯ ಮೇಲೆ ನಡಾಲ್ ಕಣ್ಣು

Update: 2017-05-27 16:17 GMT

ಪ್ಯಾರಿಸ್, ಮೇ 27: ವಿಶ್ವದ ನಂ.5ನೆ ಆಟಗಾರ ರಫೆಲ್ ನಡಾಲ್ 10ನೆ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸುವ ಗುರಿ ಹಾಕಿಕೊಂಡಿದ್ದಾರೆ.

2015ರಲ್ಲಿ ನೊವಾಕ್ ಜೊಕೊವಿಕ್ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದ ನಡಾಲ್ ಕಳೆದ ವರ್ಷ ಗಾಯದ ಸಮಸ್ಯೆ ಕಾಣಿಸಿಕೊಂಡ ಕಾರಣ ಮೂರನೆ ಸುತ್ತಿನಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಈ ವರ್ಷ ಪ್ರಶಸ್ತಿ ಗೆಲ್ಲುವ ಫೇವರಿಟ್ ಆಟಗಾರನಾಗಿ ಫ್ರೆಂಚ್ ಓಪನ್‌ನ್ನು ಪ್ರವೇಶಿಸುತ್ತಿದ್ದಾರೆ.

30ರ ಹರೆಯದ ನಡಾಲ್ ಈವರ್ಷ ಈಗಾಗಲೇ 10 ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಮಾಂಟೆ ಕಾರ್ಲೊ ಹಾಗೂ ಬಾರ್ಸಿಲೋನ ಟೂರ್ನಿಗಳಲ್ಲಿ ಚಾಂಪಿಯನ್ ಆಗಿ ಮಿಂಚಿದ್ದಾರೆ.

ಮ್ಯಾಡ್ರಿಡ್ ಓಪನ್‌ನಲ್ಲಿ ಐದನೆ ಬಾರಿ ಸಿಂಗಲ್ಸ್ ಪ್ರಶಸ್ತಿಯನ್ನು ಜಯಿಸಿದ್ದರು. ಈ ಟೂರ್ನಿಯಲ್ಲಿ ಜೊಕೊವಿಕ್ ವಿರುದ್ಧ ಕಳೆದ 2 ವರ್ಷಗಳಿಂದ ಎದುರಿಸುತ್ತಿದ್ದ ಗೆಲುವಿನ ಬರ ನೀಗಿಸಿಕೊಂಡಿದ್ದರು.

ಸ್ಪೇನ್ ಆಟಗಾರ ನಡಾಲ್ ಫ್ರೆಂಚ್ ಓಪನ್‌ನಲ್ಲಿ ಗಮನಾರ್ಹ ದಾಖಲೆ ಹೊಂದಿದ್ದಾರೆ. 72 ಪಂದ್ಯಗಳನ್ನು ಜಯಿಸಿದ್ದು, ಕೇವಲ ಎರಡರಲ್ಲಿ ಸೋತಿದ್ದಾರೆ. 2015ರಲ್ಲಿ ಜೊಕೊವಿಕ್ ಹಾಗೂ 2009ರಲ್ಲಿ ರಾಬಿನ್ ಸೊಡೆರ್ಲಿಂಗ್ ವಿರುದ್ಧ ನಡಾಲ್ ಸೋತಿದ್ದರು. 2009ರಲ್ಲಿ ನಡಾಲ್ ಸೋತ ಹಿನ್ನೆಲೆಯಲ್ಲಿ ಫೆಡರರ್ ಚೊಚ್ಚಲ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ್ದರು.

35ರ ಪ್ರಾಯದ ಫೆಡರರ್ 8ನೆ ಬಾರಿ ವಿಂಬಲ್ಡನ್ ಪ್ರಶಸ್ತಿ ಜಯಿಸುವ ಉದ್ದೇಶದಿಂದ ಈ ವರ್ಷ ಫ್ರೆಂಚ್ ಓಪನ್‌ನಲ್ಲಿ ಆಡುತ್ತಿಲ್ಲ. ಹಾಲಿ ಚಾಂಪಿಯನ್ ಜೊಕೊವಿಕ್ ಹಾಗೂ ವಿಶ್ವದ ನಂ.1 ಆಟಗಾರ ಆ್ಯಂಡಿ ಮರ್ರೆ ಫ್ರೆಂಚ್ ಓಪನ್‌ಗೆ ಮೊದಲು ಕಳಪೆ ಫಾರ್ಮ್‌ನಲ್ಲಿದ್ದಾರೆ. ನಡಾಲ್ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.

ನಡಾಲ್ ಈ ವರ್ಷ ಆಸ್ಟ್ರೇಲಿಯನ್ ಓಪನ್‌ನಲ್ಲಿ ಫೈನಲ್‌ಗೆ ತಲುಪಿದ್ದರು. ಮೂರು ವರ್ಷಗಳ ಬಳಿಕ ಗ್ರಾನ್‌ಸ್ಲಾಮ್ ಟೂರ್ನಿಯ ಫೈನಲ್‌ಗೆ ತಲುಪಿದ್ದ ನಡಾಲ್ ಅವರು ಫೆಡರರ್ ವಿರುದ್ಧ ಶರಣಾಗಿ ರನ್ನರ್-ಅಪ್‌ಗೆ ತೃಪ್ತಿಪಟ್ಟುಕೊಂಡಿದ್ದರು. ಮಿಯಾಮಿ ಓಪನ್‌ನಲ್ಲಿ ಫೆಡರರ್ ವಿರುದ್ಧ ಫೈನಲ್‌ನಲ್ಲಿ ಎಡವಿದ್ದ ನಡಾಲ್ ಮ್ಯಾಡ್ರಿಡ್ ಓಪನ್‌ನಲ್ಲಿ 30ನೆ ಮಾಸ್ಟರ್ಸ್‌ ಪ್ರಶಸ್ತಿ ಗೆದ್ದುಕೊಂಡು ದಾಖಲೆ ನಿರ್ಮಿಸಿದ್ದರು.

ನಡಾಲ್ ಆವೆ ಮಣ್ಣಿನ ಟೆನಿಸ್ ಅಂಗಳದಲ್ಲಿ ವಿಶ್ವದ ಇಬ್ಬರು ಅಗ್ರಮಾನ್ಯ ಆಟಗಾರರಾದ ಮರ್ರೆ(8-2) ಹಾಗೂ ಜೊಕೊವಿಕ್(10-5) ವಿರುದ್ಧ ಉತ್ತಮ ದಾಖಲೆ ಹೊಂದಿದ್ದಾರೆ. ಫ್ರೆಂಚ್ ಓಪನ್‌ನಲ್ಲಿ ಮರ್ರೆ ವಿರುದ್ಧ ಆಡಿರುವ ಎರಡೂ ಪಂದ್ಯಗಳನ್ನು ಜಯಿಸಿದ್ದ ನಡಾಲ್ ಅವರು ಜೊಕೊವಿಕ್ ವಿರುದ್ಧ ಆಡಿರುವ 6 ಪಂದ್ಯಗಳ ಪೈಕಿ 5ರಲ್ಲಿ ಜಯ ಸಾಧಿಸಿ ಸ್ಪಷ್ಟ ಮೇಲುಗೈ ಸಾಧಿಸಿದ್ದಾರೆ.

ನಡಾಲ್ ಈ ವರ್ಷದ ಫ್ರೆಂಚ್ ಓಪನ್‌ನಲ್ಲಿ ಫ್ರೆಂಚ್‌ನ ಬೆನೊಟ್ ಪೈರೆ ಅವರನ್ನು ಎದುರಿಸುವ ಮೂಲಕ ತನ್ನ ಪ್ರಶಸ್ತಿಯ ಬೇಟೆ ಆರಂಭಿಸಲಿದ್ದಾರೆ. ಶುಕ್ರವಾರ ನಡೆದಿದ್ದ ಟೂರ್ನಿಯ ಡ್ರಾ ಪ್ರಕ್ರಿಯೆ ಪ್ರಕಾರ ನಡಾಲ್ ಸೆಮಿ ಫೈನಲ್ ಸುತ್ತಿನಲ್ಲಿ ಜೊಕೊವಿಕ್‌ರನ್ನು ಎದುರಿಸುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News