ಶಮಿ ಧರ್ಮವನ್ನು ಉಲ್ಲೇಖಿಸಿ ಟೀಕೆಗೆ ಗುರಿಯಾದ ಮಲಿಕ್

Update: 2017-05-27 16:18 GMT

ಲಂಡನ್, ಮೇ 27: ಪಾಕಿಸ್ತಾನದ ಬ್ಯಾಟ್ಸ್‌ಮನ್ ಶುಐಬ್ ಮಲಿಕ್ ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ಕುರಿತ ಹೇಳಿಕೆಯ ವೇಳೆ ಧರ್ಮವನ್ನು ಉಲ್ಲೇಖಿಸಿ ಸಮಸ್ಯೆಗೆ ಸಿಲುಕಿದರು.

 ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಚಾರದ ಕಾರ್ಯಕ್ರಮದ ವೇಳೆ ಟ್ವಿಟರ್‌ನ ಮೂಲಕ ಕ್ರಿಕೆಟ್ ಅಭಿಮಾನಿಗಳೊಂದಿಗೆ ಸಂವಹನ ನಡೆಸಿದ ಮಲಿಕ್‌ರಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಉತ್ತಮ ಬೌಲರ್ ಯಾರು ಎಂದು ಕೇಳಿದಾಗ, ‘‘ಭಾರತೀಯ ತಂಡದಲ್ಲಿ ಮುಹಮ್ಮದ್ ಶಮಿ ಉತ್ತಮ ಬೌಲರ್ ಆಗಿದ್ದಾರೆ. ಅವರೊಬ್ಬ ‘ಮುಸ್ಲಿಂ’ ಎಂಬ ಕಾರಣಕ್ಕೆ ನಾನು ಹೀಗೆ ಹೇಳುತ್ತಿಲ್ಲ. ನಾನು ಅವರ ಬೌಲಿಂಗ್‌ನ್ನು ನೋಡಿದ್ದೇನೆ. ಅವರ ವಿರುದ್ಧ ಆಡಿದ್ದೇನೆ. ಅವರ ಬೌಲಿಂಗ್‌ನ್ನು ಎದುರಿಸಲು ನನಗೆ ಕಷ್ಟವಾಯಿತು’’ ಎಂದರು.

ಮಲಿಕ್ ತಾನು ನೀಡಿದ್ದ ಉತ್ತರದಲ್ಲಿ ಮುಹಮ್ಮದ್ ಶಮಿಯ ಧರ್ಮವನ್ನು ಉಲ್ಲೇಖಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಕಾರಣವಾಯಿತು.

ನಿಮ್ಮ ನೆಚ್ಚಿನ ಆಟಗಾರನ ಕುರಿತು ಹೇಳುವಾಗ ಆತನ ಧರ್ಮದ ಬಗ್ಗೆ ಹೇಳುವ ಅಗತ್ಯವಿರಲಿಲ್ಲ ಎಂದು ಓರ್ವ ಅಭಿಮಾನಿ ಟ್ವೀಟ್ ಮಾಡಿದ್ದಾನೆ.

 ‘ಮುಸ್ಲಿಂ ಎಂಬ ಕಾರಣಕ್ಕೆ’ಪದ ಬಳಕೆ ಅನಗತ್ಯವಾಗಿತ್ತು. ಅಲ್ಲಿ ಅದರ ಅಗತ್ಯವೂ ಇರಲಿಲ್ಲ ಎಂದು ಇನ್ನೊಬ್ಬ ಅಭಿಮಾನಿ ಟ್ವೀಟ್ ಮಾಡಿದ್ದ.

ಮಲಿಕ್ ಓರ್ವ ಉತ್ತಮ ಆಟಗಾರ. ಅವರ ಅಭಿಪ್ರಾಯ ಒಪ್ಪಿಕೊಳ್ಳುವೆ. ಆದರೆ, ಮಾತಿನ ಮಧ್ಯೆ ಶಮಿಯ ಧರ್ಮವನ್ನು ನಮೂದಿಸುವ ಅಗತ್ಯವಿರಲಿಲ್ಲ ಎನ್ನುವುದು ಇತರ ಕೆಲವರ ಅಭಿಪ್ರಾಯವಾಗಿತ್ತು.

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆರನೆ ಬಾರಿ ಆಡುತ್ತಿರುವ ಪಾಕಿಸ್ತಾನದ ಮೊದಲ ಬ್ಯಾಟ್ಸ್‌ಮನ್ ಆಗಿರುವ ಮಲಿಕ್ ಆಡಿದ ಒಂದು ಮಾತು ಟ್ವಿಟ್ಟರ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News