ಗಂಗುಲಿ ಶತಕ ದಾಖಲಿಸಿದರೂ ಭಾರತಕ್ಕೆ ಗೆಲುವು ದಕ್ಕಲಿಲ್ಲ

Update: 2017-05-27 17:07 GMT

ನೈರೋಬಿ, ಮೇ 27: ಕೀನ್ಯದಲ್ಲಿ ನಡೆದ ಎರಡನೆ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ನಲ್ಲಿ ನ್ಯೂಝಿಲೆಂಡ್ ತಂಡ ಚಾಂಪಿಯನ್ ಪಟ್ಟ ಗೆಲ್ಲುವ ಮೂಲಕ ಮೊದಲ ಐಸಿಸಿ ಟ್ರೋಫಿಯನ್ನು ಎತ್ತಿಕೊಂಡಿತು.
2000, ಅ.15ರಂದು ನಡೆದ ಫೈನಲ್‌ನಲ್ಲಿ ಭಾರತದ ವಿರುದ್ಧ ನ್ಯೂಝಿಲೆಂಡ್ 4 ವಿಕೆಟ್‌ಗಳ ಜಯ ಗಳಿಸಿತು.
ಟಾಸ್ ಜಯಿಸಿದ ನ್ಯೂಝಿಲೆಂಡ್ ತಂಡ ಟೀಮ್ ಇಂಡಿಯಾವನ್ನು ಬ್ಯಾಟಿಂಗ್‌ಗೆ ಇಳಿಸಿತ್ತು. ಭಾರತ ಸೌರವ್ ಗಂಗುಲಿ ಶತಕ(117) ನೆರವಿನಲ್ಲಿ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 264 ರನ್ ಗಳಿಸಿತ್ತು.
ಗೆಲುವಿಗೆ 265 ರನ್‌ಗಳ ಸವಾಲನ್ನು ಪಡೆದ ನ್ಯೂಝಿಲೆಂಡ್ ತಂಡ 6 ಓವರ್‌ಗಳಲ್ಲಿ 37 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತ್ತು. 132 ರನ್ ತಲುಪುವಾಗ 5 ವಿಕೆಟ್ ಕಳೆದುಕೊಂಡಿತು. ಬಳಿಕ ಕ್ರಿಸ್ ಕೈರ್ನ್ಸ್ ಮತ್ತು ಕ್ರಿಸ್ ಹ್ಯಾರಿಸ್ 6ನೆ ವಿಕೆಟ್‌ಗೆ ದಾಖಲಿಸಿದ 122 ರನ್‌ಗಳ ಜೊತೆಯಾಟದ ನೆರವಿನಲ್ಲಿ ನ್ಯೂಝಿಲೆಂಡ್ ಚಾಂಪಿಯನ್ಸ್ ಟ್ರೋಫಿಯನ್ನು ತನ್ನಾದಾಗಿಸಿಕೊಂಡಿತು.
ಈ ಟೂರ್ನಮೆಂಟ್‌ನಲ್ಲಿ ಝಹೀರ್ ಖಾನ್, ಯುವರಾಜ್ ಸಿಂಗ್ ಮತ್ತು ಮರ್ಲಾನ್ ಸ್ಯಾಮುಯೆಲ್ಸ್ ಏಕದಿನ ಕ್ರಿಕೆಟ್‌ನಲ್ಲಿ ಪಾದಾರ್ಪಣೆ ಮಾಡಿದ್ದರು.

  ಈ ಟೂರ್ನಮೆಂಟ್‌ನಲ್ಲಿ ಎಲ್ಲ ಟೆಸ್ಟ್ ಪಂದ್ಯಗಳನ್ನು ಆಡುವ ತಂಡಗಳು ಸೇರಿದಂತೆ 11 ತಂಡಗಳು ಭಾಗವಹಿಸಿದ್ದವು. ಆತಿಥ್ಯ ವಹಿಸಿದ್ದ ಕೀನ್ಯ ಮತ್ತು ಚೊಚ್ಚಲ ಆವೃತ್ತಿಯ ಟೂರ್ನಮೆಂಟ್‌ನ್ನು ಆಯೋಜಿಸಿದ್ದ ಬಾಂಗ್ಲಾದೇಶ ಮೊದಲ ಬಾರಿ ಪಾಲ್ಗೊಂಡಿದ್ದವು. ಅ.3ರಂದು ಭಾರತ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಕೀನ್ಯ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಗಳಿಸಿತ್ತು. ಅ.7ರಂದು ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ 20 ರನ್‌ಗಳ ಜಯ ಗಳಿಸಿತು. ಅ.13ರಂದು ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಭಾರತ 95 ರನ್‌ಗಳ ಭರ್ಜರಿ ಜಯ ಗಳಿಸಿತ್ತು. ಆದರೆ ಫೈನಲ್‌ನಲ್ಲಿ ಭಾರತ ಪ್ರಶಸ್ತಿ ಜಯಿಸುವಲ್ಲಿ ಎಡವಿತು.

ಹೈಲೈಟ್ಸ್
*ವರ್ಷ : ಅ.3 ರಿಂದ ಅ.15, 2000
*ಆತಿಥ್ಯ: ಕೀನ್ಯ
*ಭಾಗವಹಿಸಿದ್ದ ತಂಡಗಳು:11
*ಪಂದ್ಯ :10

*ಚಾಂಪಿಯನ್: ನ್ಯೂಝಿಲೆಂಡ್

*ದ್ವಿತೀಯ ಸ್ಥಾನ : ಭಾರತ

*ಪಂದ್ಯಶ್ರೇಷ್ಠ: ಕ್ರಿಸ್ ಕೈರ್ನ್ಸ್

*ಗರಿಷ್ಠ ರನ್: ಸೌರವ್ ಗಂಗುಲಿ(348)
*ಗರಿಷ್ಠ ವಿಕೆಟ್: ವೆಂಕಟೇಶ್ ಪ್ರಸಾದ್ (8)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News