ರೋಲ್ಸ್ ರಾಯ್ಸ್ ನಿಂದ ವಿಶ್ವದ ಅತ್ಯಂತ ದುಬಾರಿ ಕಾರು: ಇದರ ಬೆಲೆ ಕೇಳಿದರೆ ಹೌಹಾರುವಿರಿ!

Update: 2017-05-28 15:00 GMT

ಹೊಸದಿಲ್ಲಿ, ಮೇ 28: ಜಗತ್ತಿನ ಪ್ರಸಿದ್ಧ ಕಾರು ತಯಾರಿಕಾ ಸಂಸ್ಥೆ ರೋಲ್ಸ್ ರಾಯ್ಸ್ ಇತಿಹಾಸದಲ್ಲೇ ಅತಿ ದುಬಾರಿ ಕಾರೊಂದನ್ನು ತಯಾರಿಸಿದೆ. “ಸ್ವೆಪ್ಟೈಲ್” ಹೆಸರಿನ ಈ ವಿಲಾಸಿ ಕಾರಿನ ಬೆಲೆ ಹಲವು ಲಕ್ಷಗಳಲ್ಲ, ಬದಲಾಗಿ ಬರೋಬ್ಬರಿ 84 ಕೋಟಿ ರೂ.ಗಳು.

ಆಕರ್ಷಕ ಸ್ಟೈಲ್, ವಿಶೇಷ ವಿನ್ಯಾಸದ ಈ ಕಾರನ್ನು ಒಬ್ಬರೇ ಗ್ರಾಹಕರಿಗಾಗಿ ತಯಾರಿಸಲಾಗಿದ್ದು, 2013ರಲ್ಲೇ ಇದರ ಕೆಲಸ ಆರಂಭಗೊಂಡಿತ್ತು. ಇಟಲಿಯ ಕೋಂಕೋರ್ಸೋ ದ ಎಲಿಗಾಂಝಾದಲ್ಲಿ ಈ ಕಾರನ್ನು ಪ್ರದರ್ಶನಕ್ಕಿಡಲಾಗಿತ್ತು,

ತಮ್ಮದೇ ಪರಿಕಲ್ಪನೆಯ ಕಾರನ್ನು ತಯಾರಿಸುವಂತೆ ಶ್ರೀಮಂತ ಗ್ರಾಹಕರೊಬ್ಬರು ರೋಲ್ಸ್ ರಾಯ್ಸ್ ಸಂಸ್ಥೆಯನ್ನು ಸಂಪರ್ಕಿಸಿದ್ದು, ಅವರ ಪರಿಕಲ್ಪನೆಯಂತೆಯೇ 1920 ಹಾಗೂ 1930ರ ವಿನ್ಯಾಸದಿಂದ ಪ್ರೇರಿತವಾಗಿ ಈ ಕಾರನ್ನು ತಯಾರಿಸಲಾಗಿದೆ. “ವಿಶಿಷ್ಟ ವಿಹಾರ ನೌಕೆಗಳು ಹಾಗೂ ಖಾಸಗಿ ವಿಮಾನಗಳ ಸಂಗ್ರಾಹಕ ಹಾಗೂ ಮಾಲಕ” ಎಂದು ರೋಲ್ಸ್ ರಾಯ್ಸ್ ಸ್ವೆಪ್ಟೈಲ್ ನ ಏಕಮಾತ್ರ ಮಾಲಕರನ್ನು ವರ್ಣಿಸಿದೆ.

1925ರ ಫಾಂಟೋಮ್ ಐ ರೌಂಡ್ ಡೋರ್ ಕಾರಿನಿಂದ ಪ್ರೇರಿತವಾದ “ದ ಸ್ವೆಲ್ಟ್ ಟ್ಯಾಪರಿಂಗ್ ಗ್ಲಾಸ್ ಹೌಸ್”, 1934ರ ಫಾಂಟೋಮ್ 11 ಸ್ಟ್ರೀಮ್ ಲೈನ್ ಸಲೂನ್ ನಿಂದ ಪ್ರೇರಿತವಾದ ಇತರ ಸ್ಟೈಲ್ ಗಳು, 1934ರ ಗರ್ನೀ ನಟ್ಟಿಂಗ್ ಫಾಂಟೋಮ್ 11 ಡೋರ್ ಲೈಟ್ ಸಲೂನ್ ಹಾಗೂ ಪಾರ್ಕ್ ವಾರ್ಡ್ 20/25 ಲಿಮೌಸೈನ್ ಕೋಪ್ ಪ್ರೇರಿತ ವಿನ್ಯಾಸಗಳು ಈ ಕಾರಿನ ವಿಶೇಷತೆಗಳಾಗಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರೋಲ್ಸ್ ರಾಯ್ಸ್ ಕಾರ್ಸ್ ಸಿಇಒ ಟೋರ್ಸ್ಟೆನ್ ಮುಲ್ಲರ್ ಒಟ್ವೋಸ್, ““ಸ್ವೆಪ್ಟೈಲ್ ನಿಶ್ಚಯವಾಗಿಯೂ ಅದ್ಭುತ ಕಾರು. ಈ ಕಾರು ತನ್ನದೇ ಆದ ವಿಶೇಷತೆಗಳಿಂದ ಪ್ರಯಾಣದ ಸುಖವನ್ನು ಹೆಚ್ಚಿಸುತ್ತದೆ. ವಿಶ್ವದ ಪ್ರಸಿದ್ಧ ಕಾರುಗಳಲ್ಲಿ ಸ್ವೆಪ್ಟೈಲ್ ಸ್ಥಾನ ಗಿಟ್ಟಿಸಿದೆ” ಎಂದಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News