ಮಾನವ ಸಹಿತ ಅಂತರಿಕ್ಷ ಯಾತ್ರೆಗೆ ಇಸ್ರೋ ರಾಕೆಟ್ ಸಜ್ಜು

Update: 2017-05-28 16:33 GMT

ಹೊಸದಿಲ್ಲಿ, ಮೇ 28: ಭಾರತೀಯರನ್ನು ಭಾರತೀಯ ನೆಲದಿಂದಲೇ ಅಂತರಿಕ್ಷಕ್ಕೆ ಕೊಂಡೊಯ್ಯುವ ರಾಕೆಟನ್ನು ಇಸ್ರೊ ಅಭಿವೃದ್ಧಿಪಡಿಸಿದ್ದು ಜೂನ್ ಪ್ರಥಮ ವಾರದಲ್ಲಿ ಇದರ ಪರೀಕ್ಷಾ ಪ್ರಯೋಗ ನಡೆಯಲಿದೆ.

   ಸಂಪೂರ್ಣ ಬೆಳವಣಿಗೆ ಹೊಂದಿದ 200 ಏಶ್ಯಾದ ಆನೆಗಳಷ್ಟು ತೂಕ ಇರುವ ಈ ರಾಕೆಟ್ ದೇಶದಲ್ಲಿ ತಯಾರಿಸಲಾದ ಅತ್ಯಧಿಕ ತೂಕದ ರಾಕೆಟ್ ಆಗಿದ್ದು ಅಂತರಿಕ್ಷಕ್ಕೆ ಮಾನವ ಸಹಿತ ರಾಕೆಟ್ ಉಡಾಯಿಸುವ ಸಾಮರ್ಥ್ಯ ಇರುವ ಪ್ರತಿಷ್ಠಿತ ರಾಷ್ಟ್ರಗಳ ಸಮೂಹಕ್ಕೆ ಭಾರತವನ್ನು ಸೇರ್ಪಡೆಗೊಳಿಸಲಿದೆ.

  ಆಂಧ್ರಪ್ರದೇಶದ ಶ್ರೀಹರಿಕೋಟ ಕೇಂದ್ರದಲ್ಲಿ ಸಜ್ಜುಗೊಂಡಿರುವ ಈ ರಾಕೆಟ್‌ಗೆ ಜಿಎಸ್‌ಎಲ್‌ವಿ ಎಂಕೆ-3 ಎಂದು ಹೆಸರಿಸಲಾಗಿದ್ದು ಭಾರತದಲ್ಲಿ ತಯಾರಾದ ಅತ್ಯಧಿಕ ಭಾರದ ರಾಕೆಟ್ ಇದಾಗಿದೆ. ಇದು ಭಾರೀ ತೂಕದ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕೊಂಡೊಯ್ಯಲು ಸಮರ್ಥವಾಗಿದೆ. ಈ ಮೂಲಕ ಬಿಲಿಯಾಂತರ ಡಾಲರ್ ವ್ಯವಹಾರದ ವಿಶ್ವ ಉಡ್ಡಯನ ಮಾರುಕಟ್ಟೆಗೆ ಪ್ರವೇಶಿಸುವ ಅವಕಾಶವನ್ನು ಇಸ್ರೊ ಪಡೆಯಲಿದೆ . ಈ ನಿಟ್ಟಿನಲ್ಲಿ ಪರೀಕ್ಷಾ ಪ್ರಯೋಗದ ಯಶಸ್ಸಿಗಾಗಿ ಸರ್ವ ಸಿದ್ಧತೆಯನ್ನೂ ನಡೆಸಲಾಗುತ್ತಿದೆ ಎಂದು ಇಸ್ರೊ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ತಿಳಿಸಿದ್ದಾರೆ.

 ಜೂನ್‌ನಲ್ಲಿ ಪ್ರಥಮ ಪರೀಕ್ಷಾ ಪ್ರಯೋಗ ನಡೆಸಲಾಗುವುದು. ಅಲ್ಲದೆ ಆರಕ್ಕೂ ಹೆಚ್ಚು ಬಾರಿ ಪರೀಕ್ಷೆ ನಡೆಸಲಾಗುತ್ತದೆ. ಇದು ಯಶಸ್ವಿಯಾದರೆ ಭಾರತದ ನೆಲದಿಂದ ಭಾರತೀಯರನ್ನು ಅಂತರಿಕ್ಷಕ್ಕೆ ಕೊಂಡೊಯ್ಯಬಲ್ಲ ಭಾರತದಲ್ಲೇ ತಯಾರಾದ ರಾಕೆಟ್ ಆಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News