ಮ್ಯಾಂಚೆಸ್ಟರ್ ದಾಳಿಯ ಶಂಕಿತ ಉಗ್ರನ ಫೋಟೋ ಬಿಡುಗಡೆ

Update: 2017-05-28 16:42 GMT

ಲಂಡನ್,ಮೇ 28: ಮ್ಯಾಂಚೆಸ್ಟರ್ ನಗರದಲ್ಲಿ 22 ಮಂದಿಯನ್ನು ಬಲಿತೆಗೆದುಕೊಂಡ ಭೀಕರ ಭಯೋತ್ಪಾದಕ ದಾಳಿಯನ್ನು ನಡೆಸಿದ್ದನೆನ್ನಲಾದ ಶಂಕಿತ ಉಗ್ರನ ಛಾಯಾಚಿತ್ರವನ್ನು ಬ್ರಿಟಿಶ್ ತನಿಖಾಧಿಕಾರಿಗಳು ರವಿವಾರ ಬಿಡುಗಡೆಗಳಿಸಿದ್ದು, ಆತನನ್ನು ಸಲ್ಮಾನ್ ಅಬಿದಿ ಎಂದು ಗುರುತಿಸಲಾಗಿದೆ. ಕಪ್ಪುಬಣ್ಣದ ಜಾಕೆಟ್ , ಬೇಸ್‌ಬಾಲ್ ಹ್ಯಾಟ್ ಮತ್ತು ಜೀನ್ಸ್ ಪ್ಯಾಂಟ್ ಹಾಗೂ ಕನ್ನಡಕವನ್ನು ಉಗ್ರ ಧರಿಸಿದ್ದನು. ದಾಳಿಗೆ ಮುನ್ನ ಸಿಸಿಟಿವಿಯಲ್ಲಿ ಸೆರೆಹಿಡಿಯಲಾದ ದೃಶ್ಯಾವಳಿಗಳಲ್ಲಿ ಉಗ್ರನ ಗುರುತನ್ನು ಪತ್ತೆಹಚ್ಚಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

 ಮ್ಯಾಂಚೆಸ್ಟರ್ ದಾಳಿಗೆ ಸಂಬಂಧಿಸಿ ಸಲ್ಮಾನ್ ಅಬಿದಿಯ ಸಹೋದರ ಸೇರಿದಂತೆ 11 ಮಂದಿಯನ್ನು ಈವರೆಗೆ ಬಂಧಿಸಲಾಗಿದೆ. ಮ್ಯಾಂಚೆಸ್ಟರ್‌ನಲ್ಲಿ ಜನಿಸಿದ ಅಬಿದಿಯ ತಂದೆತಾಯಿಗಳು ಮೂಲತಃ ಲಿಬಿಯದವರೆನ್ನಲಾಗಿದೆ. ಕೆಲ ಸಮಯ ಲಿಬಿಯದಲ್ಲಿದ್ದ ಅಬಿದಿ ಮೇ 18ರಂದು ಬ್ರಿಟನ್‌ಗೆ ಆಗಮಿಸಿದ್ದನು.ಬ್ರಿಟನ್‌ನ ಮ್ಯಾಂಚೆಸ್ಟರ್‌ನಲ್ಲಿ ಪಾಪ್ ಗಾಯಕಿ ಅರಿಯಾನ ಗ್ರಾಂಡೆಯ ಸಂಗೀತ ಗೋಷ್ಟಿಯ ಸಂದರ್ಭದಲ್ಲಿ ಭಯೋತ್ಪಾದಕ ದಾಳಿಯನ್ನು ನಡೆಸಲಾಗಿತ್ತು. ಈ ಘಟನೆಯಲ್ಲಿ 22 ಮಂದಿ ಮೃತಪಟ್ಟು, 119ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News