ಡಾಕ್ಟರ್, ಇಂಜಿನಿಯರ್ ಅಲ್ಲ: ಸಿಬಿಎಸ್‌ಇಯಲ್ಲಿ ದೇಶಕ್ಕೇ ಟಾಪರ್ ರಕ್ಷಾಗೆ ರಾಜಕೀಯ ಶಾಸ್ತ್ರದಲ್ಲಿ ಆಸಕ್ತಿ!
ಹೊಸದಿಲ್ಲಿ, ಮೇ 28: “ಕೀಬೋರ್ಡ್ ಪ್ಲೇಯರ್”, “ಓದಿನಲ್ಲಿ ಅತೀವ ಆಸಕ್ತಿಯಿರುವಾಕೆ” ಇದು ಇಂದು ಪ್ರಕಟವಾದ ಸಿಬಿಎಸ್ ಇ 12ನೆ ತರಗತಿ ಪರೀಕ್ಷಾ ಫಲಿತಾಂಶದಲ್ಲಿ 99.6ಶೇ. ಅಂಕ ಗಳಿಸುವ ಮೂಲಕ ದೇಶಕ್ಕೆ ಟಾಪರ್ ಆಗಿ ಹೊರಹೊಮ್ಮಿರುವ ರಕ್ಷಾ ಗೋಪಾಲ್ ಬಗ್ಗೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಶಿಕ್ಷಕರು ವಿವರಿಸುವ ರೀತಿ.
ಸಾಮಾನ್ಯವಾಗಿ ಸಿಬಿಎಸ್ ಇಯಂತಹ ಪರೀಕ್ಷೆಗಳಲ್ಲಿ ರ್ಯಾಂಕ್ ಗಳಿಸುವ ವಿದ್ಯಾರ್ಥಿಗಳು ಇಂಜಿನಿಯರ್ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ ಬಯಸುತ್ತಾರೆ. ಆದರೆ ದೇಶಕ್ಕೇ ಟಾಪರ್ ಆದ ವಿದ್ಯಾರ್ಥಿನಿಗೆ ಆಸಕ್ತಿಯಿರುವುದು ರಾಜಕೀಯ ಶಾಸ್ತ್ರದಲ್ಲಿ.
ದೆಹಲಿ ವಿಶ್ವವಿದ್ಯಾಲಯದಿಂದ ರಾಜಕೀಯ ಶಾಸ್ತ್ರವನ್ನು ಮುಂದುವರಿಸಲು ಬಯಸಿದ್ದು, ತದನಂತರ ಲೇಡಿ ಶ್ರೀರಾಮ್ ಕಾಲೇಜ್, ಮಿರಾಂದಾ ಹೌಸ್ ಅಥವಾ ಜೀಸಸ್ ಆ್ಯಂಡ್ ಮೇರಿ ಕಾಲೇಜಿನಲ್ಲಿ ಸೀಟು ಪಡೆಯುವ ಚಿಂತನೆಯಲ್ಲಿದ್ದೇನೆ ಎನ್ನುತ್ತಾರೆ ರಕ್ಷಾ.
“ಟ್ರಿನಿಟಿ ಕಾಲೇಜ್ ಆಫ್ ಮ್ಯೂಸಿಕ್ ಸಂಯೋಜಿತ ದಿಲ್ಲಿ ಮೂಲದ ಸಂಸ್ಥೆಯೊಂದರಲ್ಲಿ ರಕ್ಷಾ ಇಲೆಕ್ಟ್ರಿಕ್ ಕೀಬೋರ್ಡ್ ನಲ್ಲಿ 5 ಹಂತಗಳನ್ನು ಮುಗಿಸಿದ್ದಾಳೆ. ಇಷ್ಟೇ ಅಲ್ಲದೆ ಫ್ರೆಂಷ್ ಭಾಷೆಯಲ್ಲಿ ಸಿ1 ಗ್ರೇಡ್ ಪೂರ್ತಿಗೊಳಿಸಿದ್ದಾಳೆ. ನನ್ನ ತಂಗಿ ಓರ್ವ ಬಹುಮುಖ ಪ್ರತಿಭೆ” ಎನ್ನುತ್ತಾರೆ ರಕ್ಷಾ ಅವರ ಸಹೋದರಿ ಪ್ರೇರಣಾ.
ನೊಯ್ಡಾದ ಆ್ಯಮಿಟಿ ಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ ಮಾನವಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯಾಗಿರುವ ರಕ್ಷಾ ಇಂಗ್ಲಿಷ್ ಕೋರ್, ರಾಜಕೀಯ ಶಾಸ್ತ್ರ ಹಾಗೂ ಅರ್ಥಶಾಸ್ತ್ರ ವಿಷಯದಲ್ಲಿ 100 ಅಂಕಗಳನ್ನು ಗಳಿಸಿದ್ದಾರೆ. ಇತಿಹಾಸ ಹಾಗೂ ಮನಃಶಾಸ್ತ್ರ ವಿಷಯದಲ್ಲಿ 99 ಅಂಕಗಳೊಂದಿಗೆ ಶೇ.99.6 ಶೇ. ಫಲಿತಾಂಶ ದಾಖಲಿಸಿದ್ದಾರೆ.
ರಕ್ಷಾರ ಸಾಧನೆಯನ್ನು ಗಮನಿಸಿ ಈಕೆಯೂ ವರ್ಷವಿಡೀ ಪುಸ್ತಕಗಳನ್ನು ಓದುವುದರಲ್ಲೇ ತಲ್ಲೀನಳಾಗಿದ್ದಳು ಎಂದು ಕೆಲವರು ಭಾವಿಸುವುದಾದರೆ, ನಾವು ಯಾವತ್ತೂ ಆಕೆಯ ಶಿಕ್ಷಣದ ವಿಷಯದಲ್ಲಿ ಒತ್ತಡ ಹೇರಿರಲಿಲ್ಲ ಎನ್ನುತ್ತಾರೆ ರಕ್ಷಾರ ತಂದೆ ಗೋಪಾಲ್ ಶ್ರೀನಿವಾಸನ್.
ತನ್ನ ಸಣ್ಣ ವಯಸ್ಸಿನಲ್ಲೇ ಆಕೆ ಪ್ರಶಸ್ತಿಗಳನ್ನು ಗೆಲ್ಲುತ್ತಿದ್ದಳು. ಆದರೆ ಯಾವುದೇ ರೀತಿಯಲ್ಲಿ ನಾವು ಆಕೆಯ ಮೇಲೆ ಒತ್ತಡ ಹೇರಿರಲಿಲ್ಲ . ಕಲಿಕೆಯ ಅವಧಿಯಲ್ಲಿ ಬಿಡುವು ತೆಗೆದುಕೊಳ್ಳುವಂತೆ ನಾವೇ ಹೇಳುತ್ತಿದ್ದೆವು. ಇಷ್ಟೇ ಅಲ್ಲದೆ ಆಕೆಯ ಫಲಿತಾಂಶದ ಬಗ್ಗೆ ನಾವು ಅತಿಯಾದ ನಿರೀಕ್ಷೆಗಳನ್ನೇನೂ ಇಟ್ಟುಕೊಂಡಿಲ್ಲ. ಆಕೆಯಿಂದಾಗುವಷ್ಟು ಪ್ರಯತ್ನ ಮಾಡಿದ್ದರೆ ಸಾಕು” ಎಂದಿದ್ದೆವು ಎನ್ನುತ್ತಾರೆ ಶ್ರೀನಿವಾಸನ್ .
“ಓರ್ವ ಗೃಹಿಣಿಯಾಗಿ ನನ್ನ ಪುತ್ರಿಗೆ ಸರಿಯಾದ ನಿದ್ದೆ ಹಾಗೂ ಪೌಷ್ಟಿಕ ಆಹಾರಗಳು ಸಿಗುತ್ತಿವೆಯೇ ಎನ್ನುವ ಬಗ್ಗೆ ಗಮನಹರಿಸುತ್ತಿದ್ದೆ, ನಾವು ಯಾವುದೇ ಒತ್ತಡ ಹೇರಿಲ್ಲ ಹಾಗೂ ಆಕೆಯ ಯಾವುದೇ ಟ್ಯೂಶನ್ ಗಳನ್ನು ತೆಗೆದುಕೊಂಡಿಲ್ಲ” ಎಂದು ರಕ್ಷಾರ ತಾಯಿ ರಂಜಿನಿ ಹೇಳುತ್ತಾರೆ.