×
Ad

ರಮಝಾನ್ ನಲ್ಲಿ ಮಾತ್ರ ಒಳ್ಳೆಯವರಾಗುವ ಸೋಗಲಾಡಿಗಳ ವಿರುದ್ಧ ಪಾಕ್ ನಟಿಯ ಆಕ್ರೋಶ: ವೈರಲ್ ಪೋಸ್ಟ್

Update: 2017-05-29 14:21 IST

ಹೊಸದಿಲ್ಲಿ, ಮೇ 29: ಪವಿತ್ರ ರಮಝಾನ್ ತಿಂಗಳಲ್ಲಿ ಸಜ್ಜನರಂತೆ ಪೋಸು ಕೊಟ್ಟು ಪವಿತ್ರ ತಿಂಗಳು ಮುಗಿಯುತ್ತಲೇ ತಮ್ಮ ಹಳೆಯ ವರ್ತನೆಗೆ ಮರಳುವವರ ವಿರುದ್ಧ ಹರಿಹಾಯ್ದಿರುವ ಪಾಕ್ ನಟಿಯೊಬ್ಬರ ಫೇಸ್ಬುಕ್ ಪೋಸ್ಟೊಂದು ಇದೀಗ ವೈರಲ್ ಆಗುತ್ತಿದೆ.

ನಿಜವಾದ ಶ್ರದ್ಧೆಯಿಲ್ಲದೆ “ರಮಝಾನ್ ಮುಬಾರಕ್” ಎನ್ನುವ ಗ್ರಾಫಿಕ್ ಶುಭಾಶಯಗಳನ್ನು ಕಳುಹಿಸುವವರ ವಿರುದ್ಧ ಪಾಕ್ ನಟಿ ಹಾಗೂ ಟಿವಿ ಆ್ಯಂಕರ್ ಉಜ್ಹ್ನ ಶಾ ಕಿಡಿಕಾರಿದ್ದಾರೆ.  ಕೆಲವರಿಗೆ ಈ ತಿಂಗಳು ಪ್ರಾರ್ಥನೆ, ಶಿಸ್ತು ಹಾಗೂ ಪಾಪಪ್ರಜ್ಞೆಯದ್ದಾಗಿದ್ದರೆ, ಕೆಲವರು ಈ ತಿಂಗಳನ್ನು ಇಸ್ಲಾಮನ್ನು ಮಾರಲು ಹಾಗೂ ನಾಚಿಕೆಯಿಲ್ಲದ ಸೋಗಲಾಡಿತನಕ್ಕೆ ಬಳಸುತ್ತಾರೆ” ಎಂದು ತಮ್ಮ್ ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿದ್ದಾರೆ.

ಇದೇ ಸಂದರ್ಭ ತಾನು ಧರ್ಮದ ಕಟ್ಟಾ ಅನುಯಾಯಿಯಲ್ಲದಿದ್ದರೂ ಇಸ್ಲಾಮಿಗೆ ಅಗೌರವ ತೋರುವುದಿಲ್ಲ ಹಾಗೂ ನಂಬಿಕೆಯನ್ನು ಪಾಲಿಸುತ್ತೇನೆ ಎಂದಿದ್ದಾರೆ. ಉಜ್ಹ್ನ ಶಾ ಅವರ ಫೇಸ್ಬುಕ್ ಪೋಸ್ಟ್ ನ ಮುಖ್ಯಾಂಶ  ಈ ಕೆಳಗಿನಂತಿದೆ.

“ಒಂದು ವೇಳೆ ನೀವು ರಮಝಾನ್ ಗಿಂತ ಮೊದಲು ಹಾಗೂ ರಮಝಾನ್ ನ ನಂತರ ಇಸ್ಲಾಮಿನ ತತ್ವಗಳನ್ನು ಪಾಲಿಸದೆ ರಮಝಾನ್ ನಲ್ಲಿ ಮಾತ್ರ ಸಜ್ಜನರಂತೆ ಸೋಗಲಾಡಿತನ ಪ್ರದರ್ಶಿಸುವುದಾದರೆ, ‘ಪವಿತ್ರ ತಿಂಗಳ ಮಹತ್ವ’ದ ಬಗೆಗಿನ ಸಂದೇಶಗಳನ್ನೋ ಅಥವಾ ಗ್ರಾಫಿಕ್ ಕಾರ್ಡ್ ಗಳನ್ನೋ ನನಗೆ ಕಳುಹಿಸಬೇಡಿ. ಏಕೆಂದರೆ ಈದ್ ನಂತರ ನೀವು ಮತ್ತದೇ ಹಳೆಯ ಚಾಳಿಯನ್ನು ಮುಂದುವರಿಸುತ್ತೀರಿ ಎನ್ನುವುದು ನಿಮಗೂ ತಿಳಿದಿದೆ".

“ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದ ಅದೇ ಜನರು, ನನ್ನ ಹೆಸರಿಗೆ ಮಸಿ ಬಳಿಯಲು ಯತ್ನಿಸಿದ ಅದೇ ಜನರು, ನನ್ನ ಬಗ್ಗೆ ಅಸೂಯೆ ಹೊಂದಿರುವ ಅದೇ ಜನರು, ದೇಶದಲ್ಲಿರುವ ಅಸಹಾಯಕ ಜನರಿಗೆ ಧ್ವನಿಯಾಗದ ಅದೇ ಜನರು ಇಂತಹ ರಮಝಾನ್ ಸಂದೇಶಗಳನ್ನು, ಪದೇಪದೇ ವರ್ಷಂಪ್ರತಿ ಕಳುಹಿಸುತ್ತಲೇ ಇರುತ್ತಾರೆ. ಕೆಲವರಿಗೆ ಈ ತಿಂಗಳು ಪ್ರಾರ್ಥನೆ, ಶಿಸ್ತು ಹಾಗೂ ಪಾಪಪ್ರಜ್ಞೆಯ ಅರಿವಾಗುವ ತಿಂಗಳಾಗಿದ್ದರೆ, ಕೆಲವರಿಗೆ ರಮಝಾನ್ ಇಸ್ಲಾಮನ್ನು ಮಾರುವ ಹಾಗೂ ಸೋಗಲಾಡಿತನಗಳನ್ನು ಪ್ರದರ್ಶಿಸುವ ತಿಂಗಳಾಗಿದೆ.”

“ಇನ್ನು ಕೆಲ ಮಹಿಳೆಯರು ಶುಭ್ರ ಶ್ವೇತವರ್ಣದ ಶಿರವಸ್ತ್ರಗಳನ್ನು ಧರಿಸಿ ಅರೆಬಿಕ್ ಸೂಕ್ತಗಳನ್ನು ಸುಂದರವಾಗಿ ಓದುತ್ತಾರೆ. ಆದರೆ, ಅವರ ಆತ್ಮಗಳು ವರ್ಷದ ಎಲ್ಲಾ ತಿಂಗಳುಗಳಂತೆ ಕೊಳಕಾಗಿಯೇ ಉಳಿಯುತ್ತದೆ. ನಾನು ಧರ್ಮದ ಕಟ್ಟಾ ಅನುಯಾಯಿಯಲ್ಲದಿದ್ದರೂ ಇಸ್ಲಾಮಿಗೆ ಅಗೌರವ ತೋರುವುದಿಲ್ಲ ಹಾಗೂ ನಂಬಿಕೆಯನ್ನು ಪಾಲಿಸುತ್ತೇನೆ.”

ಸೂಚನೆ: ನನ್ನನ್ನು ಟೀಕಿಸುವುದಕ್ಕೆ ಮೊದಲು ನೀವು ಈ ಪೋಸ್ಟನ್ನು ಸಂಪೂರ್ಣವಾಗಿ ಓದಬೇಕು ಹಾಗೂ ನಾನು ಇಸ್ಲಾಮಿನ ತತ್ವಾದರ್ಶಗಳನ್ನು ಪಾಲಿಸುತ್ತಿರುವವರನ್ನು ಗುರಿ ಮಾಡುತ್ತಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು. ನಾನು ಗುರಿ ಮಾಡುತ್ತಿರುವುದು ಸೋಗಲಾಡಿತನ ಹಾಗೂ ಮುಖವಾಡ ಧರಿಸುವವರನ್ನು” ಎಂದು ಪೋಸ್ಟ್ ಮಾಡಿದ್ದಾರೆ.

ಉಜ್ಹ್ನ ಶಾ ಅವರ ಪೋಸ್ಟ್ ಗೆ ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಅವರ ಪ್ರಾಮಾಣಿಕತೆ ಹಾಗೂ ಧೈರ್ಯವಂತಿಕೆಯನ್ನು ಹಲವರು ಮೆಚ್ಚಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News