ಹಾಡಹಗಲೇ ಮಹಿಳೆಯನ್ನು ಕಡಿದು ಕೊಂದು ವಿಡಿಯೋ ಮಾಡಿದ ಕಿರಾತಕ
ಲುಧಿಯಾನ, ಮೇ 29: ಸಾರ್ವಜನಿಕ ಪ್ರದೇಶದಲ್ಲೇ ಹಾಡಹಗಲೇ ಯುವಕನೋರ್ವ ಮಹಿಳೆಯೋರ್ವರ ಮೇಲೆ ಕೊಡಲಿಯಿಂದ ದಾಳಿ ನಡೆಸಿ, ಆಕೆಯನ್ನು ಕೊಂದು ಹಾಕಿದ ಘಟನೆ ಲುಧಿಯಾನದಿಂದ 30 ಕಿ.ಮೀ. ದೂರದ ಕಿಲಾ ರಾಯ್ಪುರ್ ಗ್ರಾಮದಲ್ಲಿ ನಡೆದಿದೆ.
ಆರೋಪಿ ಮನೀಂದರ್ ಸಿಂಗ್ ಎಂಬಾತ ಸರಬ್ಜೀತ್ ಕೌರ್ ಎಂಬ ಮಹಿಳೆ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭ ಆಕೆಯನ್ನು ಹಿಂಬಾಲಿಸಿ ಕೊಡಲಿಯಿಂದ ಕತ್ತು ಹಾಗೂ ಎದೆಭಾಗಕ್ಕೆ ಕಡಿದಿದ್ದಾನೆ, ನಂತರ ತನ್ನ ಮೊಬೈಲ್ ಫೋನ್ ತೆಗೆದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯ ವಿಡಿಯೋ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ,
ನಂತರ ಆರೋಪಿ ಮನೀಂದರ್ ಪೊಲೀಸರಿಗೆ ಕರೆ ಮಾಡಿ ತಾನು ಎಸಗಿದ ಅಪರಾಧದ ಬಗ್ಗೆ ತಿಳಿಸಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಸರಬ್ಜೀತ್ ಕೌರ್ ಪುತ್ರಿ ಲಖ್ವೀಂದರ್ ಕೌರ್ ದೂರಿನ ಹಿನ್ನೆಲೆಯಲ್ಲಿ ಡೆಹ್ಲೋನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿ ಧ್ರುಮನ್ ನಿಂಬ್ಲೆ ತಿಳಿಸಿದ್ದಾರೆ,
ಮನೀಂದರ್ ಸಿಂಗ್ ಗೆ ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಪರ್ಕವಿದ್ದುದು ಸರಬ್ಜೀತ್ ರಿಗೆ ಗೊತ್ತಿತ್ತು. ಇದೇ ಕಾರಣದಿಂದ ಆಕೆಯನ್ನು ಕೊಲೆಗೈದಿದ್ದಾನೆ ಎಂದು ತಿಳಿದುಬಂದಿದೆ.