×
Ad

ಪ್ರಧಾನಿಗೆ ಬರೆದ ಪತ್ರಕ್ಕೆ ಉತ್ತರ ಬರುವವರೆಗೆ ಕೇರಳದಲ್ಲಿ ಆದೇಶ ಜಾರಿಯಾಗದು: ಪಿಣರಾಯಿ ವಿಜಯನ್

Update: 2017-05-29 18:06 IST

ತಿರುವನಂತಪುರಂ, ಮೇ 29: ನಾವು ಏನನ್ನು ತಿನ್ನಬೇಕು ಎಂಬುದನ್ನು ದಿಲ್ಲಿ, ನಾಗ್‌ಪುರದವರು ನಿರ್ಧರಿಸುವುದು ಬೇಡ. ಒಂದು ವೇಳೆ ಅವರು ನಿರ್ಧರಿಸಿದರೂ ನಾವದನ್ನು ಪಾಲಿಸುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಅಲ್ಲದೆ ಕೇಂದ್ರದ ಆದೇಶವನ್ನು ವಿರೋಧಿಸಿ ತಾನು ಪ್ರಧಾನಿಗೆ ಬರೆದಿರುವ ಪತ್ರಕ್ಕೆ ಕೇಂದ್ರದಿಂದ ಪ್ರತಿಕ್ರಿಯೆ ಬರುವವರೆಗೆ ಕೇರಳದಲ್ಲಿ ಈ ಆದೇಶ ಜಾರಿಗೆ ಬರುವುದಿಲ್ಲ ಎಂದು ವಿಜಯನ್ ಸ್ಪಷ್ಟಪಡಿಸಿದ್ದಾರೆ.

     ಈ ಮಧ್ಯೆ, ಹತ್ಯೆಗಾಗಿ ಜಾನುವಾರು ಮಾರಾಟ ನಿಷೇಧಿಸಿದ ಕೇಂದ್ರ ಸರಕಾರದ ಕ್ರಮಕ್ಕೆ ದಕ್ಷಿಣ ಭಾರತದಾದ್ಯಂತ ವಿರೋಧ ವ್ಯಕ್ತವಾಗಿದೆ . ಪಾಂಡಿಚೇರಿ, ತಮಿಳುನಾಡು ರಾಜ್ಯಗಳಿಂದಲೂ ಆಕ್ಷೇಪ ವ್ಯಕ್ತವಾಗಿದೆೆ.

     

ಕೇಂದ್ರದ ಆದೇಶಕ್ಕೆ ಕೇರಳದ ಎಲ್ಲಾ ಪಕ್ಷಗಳೂ ವಿರೋಧ ಸೂಚಿಸಿವೆ. ಸಚಿವ ಸಂಪುಟದ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲಾಗುವುದು. ಹೊಸ ಕಾನೂನಿನ ವಿರುದ್ಧ ಕೇರಳ ಸರಕಾರ ಕಾನೂನು ಹೋರಾಟಕ್ಕೆ ಮುಂದಾದರೂ ಆಶ್ಚರ್ಯವೇನಿಲ್ಲ ಎಂದು ಕೇರಳ ಕೃಷಿ ಸಚಿವ ವಿ.ಎಸ್.ಸುನಿಲ್‌ಕುಮಾರ್ ತಿಳಿಸಿದ್ದಾರೆ. ಶೀಘ್ರವೇ ನಡೆಯಲಿರುವ ಸರ್ವಪಕ್ಷಗಳ ಸಭೆಯಲ್ಲಿ ಕೇಂದ್ರ ಸರಕಾರದ ನಿರ್ಧಾರವನ್ನು ಕೋರ್ಟಿನಲ್ಲಿ ಪ್ರಶ್ನಿಸುವ ಕುರಿತು ಚರ್ಚಿಸಲಾಗುವುದು ಎಂದವರು ತಿಳಿಸಿದರು. ಕೇಂದ್ರದ ಆದೇಶ ಹೊರಬಿದ್ದ ಬಳಿಕ ಕೇರಳ ಸಿಪಿಎಂ ಪಕ್ಷದ ವತಿಯಿಂದ 200ಕ್ಕೂ ಹೆಚ್ಚು ಗೋಮಾಂಸ ಉತ್ಸವ ಹಮ್ಮಿಕೊಳ್ಳಲಾಗಿದ್ದು ಮಾಂಸದ ಅಡುಗೆಯನ್ನು ಉಚಿತವಾಗಿ ಹಂಚಲಾಗಿದೆ.

 ಕೇಂದ್ರದ ಆದೇಶವನ್ನು ವಿರೋಧಿಸಿ ಸೋಮವಾರ ‘ಕಪ್ಪು ದಿನ’ವನ್ನಾಗಿ ಕೇರಳ ಕಾಂಗ್ರೆಸ್ ಪಕ್ಷ ಆಚರಿಸಿತು. ಆದರೆ ಕಣ್ಣೂರಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯ ಅಂಗವಾಗಿ ಎತ್ತೊಂದನ್ನು ಸಾರ್ವಜನಿಕವಾಗಿ ವಧೆ ಮಾಡಿದ್ದು ಪ್ರತಿಭಟನೆಗೆ ಕಪ್ಪು ಚುಕ್ಕಿ ಇಟ್ಟಂತಾಯಿತು. ಈ ಘಟನೆಯನ್ನು ಅನಾಗರಿಕ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಣ್ಣಿಸಿದ್ದು ಘಟನೆಯಲ್ಲಿ ಒಳಗೊಂಡಿದ್ದ ಕಾರ್ಯಕರ್ತರನ್ನು ಅಮಾನತು ಮಾಡಲಾಗಿದೆ.

    ಕೇಂದ್ರದ ಆದೇಶವನ್ನು ವಿರೋಧಿಸಿ ತಮಿಳುನಾಡಿನಲ್ಲಿ ಮೇ 31ರಂದು ಬೃಹತ್ ಪ್ರತಿಭಟನೆ ಆಯೋಜಿಸಲು ವಿಪಕ್ಷ ಡಿಎಂಕೆ ನಿರ್ಧರಿಸಿದೆ. ಪಕ್ಷದ ಕಾರ್ಯಾಧ್ಯಕ್ಷ ಸ್ಟಾಲಿನ್ ಪ್ರತಿಭಟನೆಯ ನೇತೃತ್ವ ವಹಿಸಲಿದ್ದಾರೆ. ಸಂವಿಧಾನದಲ್ಲಿ ನೀಡಲಾಗಿರುವ ಆಹಾರದ ಹಕ್ಕನ್ನು ಕೇಂದ್ರ ಸರಕಾರ ಕಸಿದುಕೊಂಡಿದೆ ಎಂದು ಡಿಎಂಕೆ ತಿಳಿಸಿದೆ. ತಮಿಳುನಾಡಿನಲ್ಲಿ ಗೋಮಾಂಸಕ್ಕೆ ನಿಷೇಧ ಹೇರಲಾಗಿಲ್ಲ. ಆದರೆ ಹತ್ಯೆಗಾಗಿ ಜಾನುವಾರು ಮಾರಾಟ ನಿಷೇಧಿಸಿದ ಕೇಂದ್ರದ ನಿರ್ಧಾರವನ್ನು ನೆರೆಯ ರಾಜ್ಯಗಳಾದ ಕೇರಳ ಮತ್ತು ಕರ್ನಾಟಕ ವಿರೋಧಿಸಿರುವಾಗ, ತಮಿಳುನಾಡು ಸರಕಾರ ವೌನಧೋರಣೆ ತಳೆದಿರುವುದು ಸರಿಯಲ್ಲ ಎಂದು ಡಿಎಂಕೆ ಟೀಕಿಸಿದೆ. ಆದೇಶದ ಪ್ರತಿಯನ್ನು ಸಂಪೂರ್ಣ ಓದಿದ ಬಳಿಕವಷ್ಟೇ ಪ್ರತಿಕ್ರಿಯೆ ನೀಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ ತಿಳಿಸಿದ್ದಾರೆ.

ಕೇಂದ್ರದ ಆದೇಶಕ್ಕೆ ಪುದುಚೇರಿಯಲ್ಲಿ ಆಡಳಿತಾರೂಢ ಪಕ್ಷ ಕಾಂಗ್ರೆಸ್ ತೀವ್ರ ವಿರೋಧ ಸೂಚಿಸಿದೆ. ಕೇಂದ್ರ ಸರಕಾರದ ನಿರಂಕುಶ ಧೋರಣೆಗೆ ಇದು ನಿದರ್ಶನವಾಗಿದೆ. ಪುದುಚೇರಿಗೆ ಫ್ರೆಂಚ್ ಸಂಸ್ಕೃತಿಯೊಂದಿಗೆ ಸಂಬಂಧವಿದ್ದು ಇಲ್ಲಿ ಮಾಂಸ ಮತ್ತು ಗೋಮಾಂಸ ತಿನ್ನುವವರಿದ್ದಾರೆ. ಇವರನ್ನು ತಡೆಯುವ ಅಧಿಕಾರ ಕೇಂದ್ರ ಸರಕಾರಕ್ಕಿಲ್ಲ ಎಂದು ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಹೇಳಿದ್ದಾರೆ.

   ಕೇಂದ್ರ ಸರಕಾರದಿಂದ ಇದುವರೆಗೆ ಯಾವುದೇ ಅಧಿಸೂಚನೆ ಬಂದಿಲ್ಲ . ಆದೇಶ ಕೈಸೇರಿದ ಬಳಿಕ ಮುಂದಿನ ಕ್ರಮವನ್ನು ನಿರ್ಧರಿಸಲಾಗುವುದು ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಹಿಂದಿನ ಬಿಜೆಪಿ ಸರಕಾರ ರಾಜ್ಯದಲ್ಲಿ ಗೋಹತ್ಯೆ ನಿಷೇಧಿಸಿ ಜಾರಿಗೊಳಿಸಿದ್ದ ಆದೇಶವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರದ್ದುಗೊಳಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಜಾನುವಾರು ಹತ್ಯೆ ಮತ್ತು ಗೋಮಾಂಸ ಸೇವನೆಯ ವಿಷಯದಲ್ಲಿ ತಮ್ಮದೇ ಆದ ಕಾನೂನನ್ನು ಜಾರಿಗೊಳಿಸಲು ರಾಜ್ಯಗಳಿಗೆ ಅಧಿಕಾರವಿದೆ. ಆದರೆ ಕೇಂದ್ರ ಸರಕಾರ ಇತ್ತೀಚೆಗೆ ಹೊರಡಿಸಿದ ಅಧಿಸೂಚನೆ ‘ಪ್ರಾಣಿಗಳ ವಿರುದ್ಧ ಹಿಂಸಾತ್ಮಕ ವರ್ತನೆಯನ್ನು ತಡೆಯುವ ಕಾಯ್ದೆ’ಯಡಿ ಬರುವ ಕಾರಣ ಕೇಂದ್ರದ ಈ ಆದೇಶ ದೇಶದಾದ್ಯಂತ ಅನ್ವಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News