ಮ್ಯಾಂಚೆಸ್ಟರ್ ದಾಳಿಯ ಗಾಯಾಳುಗಳ ಚಿಕಿತ್ಸೆ ನೀಡಿದ ವೈದ್ಯನಿಗೆ ಕಿರುಕುಳ
ಲಂಡನ್, ಮೇ 29: ಮ್ಯಾಂಚೆಸ್ಟರ್ ಭಯೋತ್ಪಾದಕ ದಾಳಿಯ ಗಾಯಾಳುಗಳ ಪ್ರಾಣವನ್ನು ರಕ್ಷಿಸಲು ರಾತ್ರಿ ಹಗಲೆನ್ನದೆ 48 ತಾಸುಗಳ ಕಾಲ ನಿರಂತರವಾಗಿ ಶುಶ್ರೂಷೆ ನೀಡಿದ 37 ವರ್ಷ ವಯಸ್ಸಿನ ಪಾಕ್ ಮೂಲದ ವೈದ್ಯರೊಬ್ಬರು, ಜನಾಂಗೀಯ ನಿಂದನೆಗೊಳಗಾದ ಘಟನೆಯನ್ನು ಬ್ರಿಟಿಶ್ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.
ಮೂಳೆ ತಜ್ಞರಾದ ನವೀದ್ ಯಾಸಿನ್ ಅವರು ಮೇ 22ರಂದು ನಡೆದ ಮ್ಯಾಂಚೆಸ್ಟರ್ ದಾಳಿಯ ಸಂತ್ರಸ್ತರಿಗೆ ಚಿಕಿತ್ಸೆ ನೀಡಲು ಸಲ್ಫರ್ಡ್ ರಾಯಲ್ ಆಸ್ಪತ್ರೆಗೆ ತೆರಳಿದಾಗ, ಮಧ್ಯವಯಸ್ಕನೊಬ್ಬ ಅವರನ್ನು ಎಳೆದಾಡಿ, ನಿಂದಿಸಿದನೆಂದು ಮ್ಯಾಂಚೆಸ್ಟರ್ ಇವ್‌ನಿಂಗ್ ನ್ಯೂಸ್ ಪತ್ರಿಕೆ ತಿಳಿಸಿದೆ.
ನವೀದ್ ಅವರನ್ನು ‘ಕಂದುಬಣ್ಣದವ, ಭಯೋತ್ಪಾದಕ ’ ಇತ್ಯಾದಿ ಪದಗಳಿಂದ ಜರೆದ ಆತ ‘ನಿನ್ನ ದೇಶಕ್ಕೆ ಮರಳು, ನಿಮಗೆ ಇಲ್ಲಿ ಜಾಗವಿಲ್ಲ’ ಎಂದು ಮೂದಲಿಸಿದನೆಂದು ಪತ್ರಿಕೆ ತಿಳಿಸಿದೆ.
ಆತ ನನ್ನ ಚರ್ಮದ ಬಣ್ಣ ಹಾಗೂ ಜನಾಂಗದ ಬಗ್ಗೆ ಪೂರ್ವಾಗ್ರಹದ ಮಾತುಗಳನ್ನಾಡಿರುವುದು ನನಗೆ ನೋವುಂಟು ಮಾಡಿದೆ ಎಂದು ಯಾಸಿನ್ ಹೇಳಿದ್ದಾರೆ. ಭಯೋತ್ಪಾದನೆಗೆ ಯಾವುದೇ ಧರ್ಮ ಅಥವಾ ಜನಾಂಗದ ಭೇದವಿಲ್ಲ, ಅದೇ ರೀತಿ ಈ ಜನಾಂಗೀಯ ನಿಂದನೆಯೂ ಇದಕ್ಕೆ ಹೊರತಲ್ಲ ಎಂದವರು ಹೇಳಿದ್ದಾರೆ.
ಮ್ಯಾಂಚೆಸ್ಟರ್ ದಾಳಿಗೆ ತನ್ನ ಮಗಳೂ ಬಲಿಯಾಗುವ ಸಾಧ್ಯತೆಯಿತ್ತು ಎಂದು ಯಾಸಿನ್ ಹೇಳುತ್ತಾರೆ. ತನ್ನ ಹಿರಿಯ ಪುತ್ರಿ ಅಮೆಲಿಯಾ, ಭಯೋತ್ಪಾದಕ ದಾಳಿ ನಡೆದ ಗಾಯಕಿ ಅರಿಯಾನಾ ಗ್ರಾಂಡೆಯ ಸಂಗೀತಗೋಷ್ಟಿಯಲ್ಲಿ ಭಾಗವಹಿಸುವವಳಿದ್ದಳು. ಆದರೆ ಮರುದಿನ ಶಾಲಾತರಗತಿಯಿದ್ದ್ದುರಿಂದ, ಸಂಗೀತಗೋಷ್ಠಿಗೆ ಆಕೆ ಹೋಗುವುದನ್ನು ತಾನು ಹಾಗೂ ಪತ್ನಿ ವಿರೋಧಿಸಿದ್ದಾಗಿ ನವೀದ್ ಯಾಸಿನ್ ತಿಳಿಸಿದ್ದಾರೆ.