ಉ.ಕೊರಿಯದಿಂದ ಮತ್ತೆ ಕ್ಷಿಪಣಿ ಪರೀಕ್ಷೆ : ಜಪಾನ್, ದ.ಕೊರಿಯ ತೀವ್ರ ಆಕ್ರೋಶ

Update: 2017-05-29 15:51 GMT

ಸಿಯೋಲ್, ಮೇ 29: ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿಯದ ಉತ್ತರ ಕೊರಿಯ ಸೋಮವಾರ ಮತ್ತೆ ಪ್ರಕ್ಷೇಪಕ ಕ್ಷಿಪಣಿಯೊಂದನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಅಲ್ಪ ದೂರ ವ್ಯಾಪ್ತಿಯ ಈ ಕ್ಷಿಪಣಿ ಜಪಾನ್ ಸಮುದ್ರದಲ್ಲಿ ಪತನಗೊಳ್ಳುವ ಮುನ್ನ ಆರು ನಿಮಿಷಗಳ ಕಾಲ ಸಂಚರಿಸಿತು ಎಂದು, ಪರಿಸ್ಥಿತಿಯ ಮೇಲೆ ನಿಗಾವಿರಿಸಿರುವ ಅಮೆರಿಕದ ಪೆಸಿಫಿಕ್ ಕಮಾಂಡ್ ತಿಳಿಸಿದೆ.

ಉತ್ತರ ಕೊರಿಯ ಇಂದು ನಡೆಸಿದ ಕ್ಷಿಪಣಿ ಪರೀಕ್ಷೆಯನ್ನು ನೆರೆಯ ರಾಷ್ಟ್ರವಾದ ಜಪಾನ್ ತೀವ್ರವಾಗಿ ಖಂಡಿಸಿದೆ ಹಾಗೂ ಅಮೆರಿಕದ ಜೊತೆ ಕೈಜೋಡಿಸಿ ‘ಸದೃಢವಾದ ಕ್ರಮ’ ಕೈಗೊಳ್ಳುವುದಾಗಿ ಹೇಳಿದೆ.

   ಈ ವಿಮಾನನಿರೋಧಕ ಕ್ಷಿಪಣಿ ವ್ಯವಸ್ಥೆಯ ಪರೀಕ್ಷಾರ್ಥ ಉಡಾವಣೆಯ ಮೇಲ್ವಿಚಾರಣೆಯನ್ನು ನಾಯಕ ಕಿಮ್ ಜೊಂಗ್ ಉನ್ ಖುದ್ದಾಗಿ ನಿರ್ವಹಿಸಿದ್ದರೆಂದು ಉತ್ತರ ಕೊರಿಯ ಹೇಳಿಕೊಂಡಿದೆ.

ಅಂತಾರಾಷ್ಟ್ರೀಯ ಸಮುದಾಯದ ಮರುಎಚ್ಚರಿಕೆಗಳನ್ನು ಕಡೆಗಣಿಸುತ್ತಿರುವ ಉತ್ತರ ಕೊರಿಯದ ಪ್ರಚೋದನಕಾರಿ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ’’ ಎಂದು ಜಪಾನ್ ಪ್ರಧಾನಿ ಶಿಂಜೊ ಅಬೆ ಇಂದು ಟೋಕಿಯೊದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

 ಈ ಮಧ್ಯೆ ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಗೆ ಕ್ಷಿಪಣಿ ಉಡಾವಣೆಯ ಬಗ್ಗೆ ಮಾಹಿತಿ ನೀಡಲಾಗಿದೆಯೆಂದು ಅಮೆರಿಕದ ಭದ್ರತಾ ಮಂಡಳಿಯ ವಕ್ತಾರರು ತಿಳಿಸಿದ್ದಾರೆ. ದಕ್ಷಿಣ ಕೊರಿಯ ನೂತನ ಅಧ್ಯಕ್ಷ ಮೂನ್ ಜೇ-ಇನ್ ಅವರು ಕ್ಷಿಪಣಿ ಉಡಾವಣೆಯ ಬಗ್ಗೆ ಅವಲೋಕನ ನಡೆಸುವಂತೆ ರಾಷ್ಟ್ರೀಯ ಭದ್ರತಾ ಮಂಡಳಿಗೆ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News