×
Ad

ಉಗ್ರ ದಾಳಿಗಳ ಬಗ್ಗೆ ಈಗಲೂ ಜಾಧವ್‌ರಿಂದ ಗುಪ್ತಚರ ಮಾಹಿತಿ: ಪಾಕ್

Update: 2017-05-30 21:05 IST

ಇಸ್ಲಾಮಾಬಾದ್, ಮೇ 30: ಸೇನಾ ನ್ಯಾಯಾಲಯವೊಂದರಿಂದ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಕುಲಭೂಷಣ್ ಜಾಧವ್ ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿಗಳ ಬಗ್ಗೆ ‘ಮಹತ್ವದ ಗುಪ್ತಚರ ಮಾಹಿತಿ’ಗಳನ್ನು ನೀಡುತ್ತಿದ್ದಾರೆ ಎಂದು ಪಾಕಿಸ್ತಾನದ ವಿದೇಶ ಕಚೇರಿ ವಕ್ತಾರ ನಫೀಸ್ ಝಕಾರಿಯ ‘ಡಾನ್ ನ್ಯೂಸ್’ಗೆ ಹೇಳಿದ್ದಾರೆ.

ಆದಾಗ್ಯೂ, ಜಾಧವ್ ನೀಡುತ್ತಿರುವ ಗುಪ್ತಚರ ಮಾಹಿತಿಯ ವಿವರಗಳನ್ನು ತಿಳಿಸಲು ಝಕಾರಿಯ ನಿರಾಕರಿಸಿದರು.
ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯ ಜಾಧವ್‌ರ ಮರಣ ದಂಡನೆಗೆ ಮೇ 18ರಂದು ತಡೆಯಾಜ್ಞೆ ನೀಡಿದೆ.
ಆದರೆ, ಈ ಪ್ರಕರಣದಲ್ಲಿ ತನ್ನ ವ್ಯಾಪ್ತಿಯನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ಇನ್ನಷ್ಟೇ ನಿರ್ಧರಿಸಬೇಕಾಗಿದೆ ಎಂದು ಪಾಕಿಸ್ತಾನಿ ಅಧಿಕಾರಿಗಳು ಹೇಳುತ್ತಿದ್ದಾರೆ.

ಈ ನಡುವೆ, ಜಾಧವ್ ‘ಬೇಹುಗಾರ’ ಎನ್ನುವುದನ್ನು ಸಾಬೀತುಪಡಿಸಲು ಪಾಕಿಸ್ತಾನದ ಬಳಿ ಹಲವು ಪುರಾವೆಗಳಿವೆ ಎಂದು ಪಾಕಿಸ್ತಾನದ ಅಟಾರ್ನಿ ಜನರಲ್ ಅಶ್ತಾರ್ ಔಸಫ್ ‘ಡಾನ್ ನ್ಯೂಸ್’ಗೆ ಹೇಳಿದರು.
ಜಾಧವ್ ಬಗ್ಗೆ ಹಲವಾರು ಮಾಹಿತಿಗಳನ್ನು ಪಾಕಿಸ್ತಾನ ಹೊಂದಿದ್ದು, ಭದ್ರತಾ ಕಾರಣಗಳಿಗಾಗಿ ಅವುಗಳನ್ನು ಬಹಿರಂಗಪಡಿಸುವಂತಿಲ್ಲ ಎಂದು ಔಸಫ್ ನುಡಿದರು.

‘‘ಅಂತಾರಾಷ್ಟ್ರೀಯ ನ್ಯಾಯಾಲಯವು ತನ್ನ ಕಲಾಪಗಳನ್ನು ಪುನಾರಂಭಿಸಿದ ಬಳಿಕ ಅದರ ಮುಂದೆ ಮಾತ್ರ ಪುರಾವೆಗಳನ್ನು ಮಂಡಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News