ಸಿಆರ್‌ಪಿಎಫ್ ಅಧಿಕಾರಿ ವಿರುದ್ಧ ಬಂಧನಾದೇಶ ಹೊರಡಿಸಲು ಕೆನಡ ನ್ಯಾಯಾಲಯ ನಕಾರ

Update: 2017-05-30 16:52 GMT

ಟೊರಾಂಟೊ, ಮೇ 30: ಕೆನಡ ಭೇಟಿಯಲ್ಲಿರುವ ಭಾರತದ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಸಮನ್ಸ್ ಅಥವಾ ಬಂಧನಾದೇಶ ಹೊರಡಿಸಬೇಕು ಎಂದು ಕೋರಿ ‘ಸಿಖ್ಸ್ ಫಾರ್ ಜಸ್ಟಿಸ್’ ಎಂಬ ಸಂಘಟನೆ ಸಲ್ಲಿಸಿದ ಅರ್ಜಿಯನ್ನು ಕೆನಡದ ನ್ಯಾಯಾಲಯವೊಂದು ತಿರಸ್ಕರಿಸಿದೆ.
ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್)ನ ಹಿರಿಯ ಅಧಿಕಾರಿಯಾಗಿ ನಿವೃತ್ತರಾದ ತೇಜಿಂದರ್ ಸಿಂಗ್ ಧಿಲ್ಲೋನ್ ಕೆನಡದಲ್ಲಿರುವ ಬಗ್ಗೆ ‘ಸಿಖ್ಸ್ ಫಾರ್ ಜಸ್ಟಿಸ್’ ಸರಿಯಾದ ಸಾಕ್ಷವನ್ನು ಒದಗಿಸಿಲ್ಲ ಎಂಬ ಕಾರಣವನ್ನು ನ್ಯಾಯಾಲಯ ತನ್ನ ನಿರ್ಧಾರಕ್ಕೆ ನೀಡಿದೆ.

ಆರಂಭದಲ್ಲಿ ತೇಜಿಂದರ್ ಸಿಂಗ್‌ಗೆ ಕೆನಡ ಪ್ರವೇಶವನ್ನು ನಿರಾಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಭಾರತಕ್ಕೆ ವಾಪಸಾಗಿದ್ದರು. ಬಳಿಕ ಹೊಸದಿಲ್ಲಿಯಲ್ಲಿರುವ ಕೆನಡ ರಾಯಭಾರ ಕಚೇರಿಯು ಹೊಸ ವೀಸಾ ಮತ್ತು ವಿಮಾನ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಅವರು ಮತ್ತೆ ಕೆನಡಕ್ಕೆ ಹೋದರು.
ಅವರು ಸೋಮವಾರ ಕೆನಡದಿಂದ ಹೊರಡುವುದೆಂದು ಆರಂಭದಲ್ಲಿ ನಿಗದಿಯಾಗಿತ್ತಾದರೂ, ರವಿವಾರ ರಾತ್ರಿಯೇ ಟೊರಾಂಟೊ ವಿಮಾನ ನಿಲ್ದಾಣದ ಮೂಲಕ ಕೆನಡ ತೊರೆದಿದ್ದಾರೆ.

‘ಸಿಖ್ಸ್ ಫಾರ್ ಜಸ್ಟಿಸ್’ ಶುಕ್ರವಾರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ ಹಿನ್ನೆಲೆಯಲ್ಲಿ ಅವರು ಬೇಗನೆ ಭಾರತಕ್ಕೆ ವಾಪಸಾಗಿರಬಹುದು ಎಂದು ಭಾವಿಸಲಾಗಿದೆ.

ಅರ್ಜಿಯ ವಿಚಾರಣೆಯು ಸೋಮವಾರ ಟೊರಾಂಟೊದಲ್ಲಿರುವ ಒಂಟಾರಿಯೊ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂತು. ತೇಜಿಂದರ್ ಸಿಂಗ್ ಕೆನಡದಲ್ಲಿರುವ ಬಗ್ಗೆ ಖಚಿತ ಮಾಹಿತಿಯಿಲ್ಲದಿರುವ ಹಿನ್ನೆಲೆಯಲ್ಲಿ, ಅವರ ವಿರುದ್ಧ ಸಮನ್ಸ್ ಅಥವಾ ಬಂಧನಾದೇಶ ಹೊರಡಿಸಲು ನ್ಯಾಯಾಲಯ ನಿರಾಕರಿಸಿತು.

ತೇಜಿಂದರ್ ಸಿಂಗ್ ಜಲಂಧರ್ ವಲಯದ ಡಿಐಜಿ ಆಗಿದ್ದಾಗ, ಅವರ ಅಧೀನದಲ್ಲಿದ್ದ ಪೊಲೀಸ್ ಅಧಿಕಾರಿಗಳು ಖಾಲಿಸ್ತಾನ ಪರವಾಗಿ ಪ್ರಚಾರ ಮಾಡುತ್ತಿದ್ದ ‘ರಾಷ್ಟ್ರೀಯವಾದಿ’ಗಳನ್ನು ಹಿಂಸಿಸಿದ್ದರು ಎಂಬುದಾಗಿ ‘ಸಿಖ್ಸ್ ಫಾರ್ ಜಸ್ಟಿಸ್’ ತನ್ನ ಅರ್ಜಿಯಲ್ಲಿ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News