12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಪಾಸಾದ ತಾಯಿ, ಮಗ: ಅಪ್ಪ ಮಾತ್ರ ಫೇಲ್
ಕೊಲ್ಕತ್ತಾ, ಮೇ 31: ಪಶ್ಚಿಮ ಬಂಗಾಲದ ನಡಿಯ ಜಿಲ್ಲೆಯ ಉತ್ತರ್ ಪಟಿಕಬರಿ ಗ್ರಾಮದ ಮೂವರು ಸದಸ್ಯರ ಕುಟುಂಬವೊಂದು ಒಂದೇ ಶಾಲೆಯಲ್ಲಿ ಕಲಿತು ಪಶ್ಚಿಮ ಬಂಗಾಳ ಹಿರಿಯ ಮಾಧ್ಯಮಿಕ ಶಿಕ್ಷಣ ಮಂಡಳಿ ನಡೆಸಿದ 12ನೇ ತರಗತಿ ಪರೀಕ್ಷೆಗೆ ಕುಳಿತುಕೊಂಡು ಸುದ್ದಿಯಾಗಿದ್ದರೆ, ಈಗ ಈ ಕುಟುಂಬದ ತಾಯಿ-ಮಗ ಪರೀಕ್ಷೆಯಲ್ಲಿ ಪಾಸಾಗಿದ್ದರೆ, ತಂದೆ ಮಾತ್ರ ಅನುತ್ತೀರ್ಣರಾಗಿದ್ದಾನೆ.
32 ವರ್ಷದ ಕಲ್ಯಾಣಿ ಹಾಗೂ ಆಕೆಯ 18 ವರ್ಷದ ಪುತ್ರ ಬಿಪ್ಲಬ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆದರೆ ಕುಟುಂಬದ ಯಜಮಾನ, ರೈತನಾಗಿರುವ 42 ವರ್ಷದ ಬಲರಾಂ ರೈ ಉತ್ತೀರ್ಣನಾಗಲು ವಿಫಲನಾಗಿದ್ದಾನೆ.
ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದಾಗಲೇ ಬಲರಾಂ ನನ್ನು ವಿವಾಹವಾಗಿದ್ದ ಕಲ್ಯಾಣಿ ಒಟ್ಟು 500 ಅಂಕಗಳಲ್ಲಿ 228 ಅಂಕಗಳನ್ನು ಪಡೆದು ಶೇ 45.6 ಫಲಿತಾಂಶ ಪಡೆದಿದ್ದರೆ ಆಕೆಯ ಪುತ್ರ 253 ಅಂಕಗಳನ್ನು ಪಡೆದು ಶೇ 50.6 ಫಲಿತಾಂಶ ದಾಖಲಿಸಿದ್ದಾನೆ.
‘‘ನನ್ನ ತಂದೆಯೂ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುತ್ತಿದ್ದರೆ ನಮ್ಮ ಸಂತೋಷ ಇಮ್ಮಡಿಯಾಗುತ್ತಿತ್ತು. ಅವರು ಮುಂದಿನ ಬಾರಿ ತೇರ್ಗಡೆಯಾಗುವರು ಎಂಬ ಆಶಾವಾದ ಹೊಂದಿದ್ದೇನೆ’ ಎಂದು ಬಿಪ್ಲಬ್ ಹೇಳುತ್ತಾನೆ.
ಧಂತಾಲ ಗ್ರಾಮದಲ್ಲಿರುವ ಹಝ್ರಪುರ ಹೈಸ್ಕೂಲಿನಲ್ಲಿ ಕಲಿತ ಮಗ ಮತ್ತು ಆತನ ಹೆತ್ತವರು 12ನೇ ತರಗತಿಗಾಗಿ ಬಂಗಾಲಿ, ಇಂಗ್ಲಿಷ್, ಇತಿಹಾಸ, ಸಂಸ್ಕೃತ ಹಾಗೂ ತತ್ತ್ವಜ್ಞಾ ನ ವಿಷಯಗಳನ್ನು ಆಯ್ದುಕೊಂಡಿದ್ದರು. ಶಾಲೆಗೆ ಸಮವಸ್ತ್ರ ಧರಿಸಿ ಹೋಗುತ್ತಿದ್ದ ಮೂವರೂ ಒಂದೇ ತರಗತಿಯಲ್ಲಿ ಕುಳಿತುಕೊಳ್ಳುತ್ತಿದ್ದರು.
ಖಾಸಗಿ ಟ್ಯೂಷನ್ ಪಡೆಯುತ್ತಿದ್ದ ಬಿಪ್ಲಬ್ ಅಲ್ಲಿ ಕಲಿತಿದ್ದನ್ನು ಮನೆಗೆ ಹಿಂದಿರುಗಿದ ನಂತರ ತನ್ನ ಹೆತ್ತವರಿಗೆ ಕಲಿಸುತ್ತಿದ್ದ. ತಾನು ಇಂಗ್ಲಿಷ್ ಜ್ಞಾನ ಹೆಚ್ಚು ಹೊಂದಿಲ್ಲ ಎಂದು ಒಪ್ಪಿಕೊಳ್ಳುವ ಕಲ್ಯಾಣಿ ತನ್ನ ಪತಿ ಇತಿಹಾಸ ವಿಷಯದಲ್ಲಿ ಅಷ್ಟೊಂದು ನಿಪುಣರಾಗಿಲ್ಲ ಎಂದು ಹೇಳುತ್ತಾಳೆ.
ಇದೀಗ ತಾಯಿ ಮಗ ಮುಂದಿನ ಶಿಕ್ಷಣವನ್ನೂ ಜತೆಯಾಗಿಯೇ ಪಡೆಯಲು ನಿರ್ಧರಿಸಿದ್ದಾರೆ. ಇದರಿಂದ ನಮಗೆ ಪುಸ್ತಕಗಳು ಮತ್ತು ಇತರ ಕಲಿಕಾ ಸಾಮಗ್ರಿಗಳ ಉಳಿತಾಯವಾಗುವುದು ಎಂದು ಕಲ್ಯಾಣಿ ಹೇಳುತ್ತಾಳೆ.
ಆದರೆ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿರುವುದಕ್ಕೆ ನಿರಾಸೆಗೊಂಡಿರವ ಬಲರಾಂ ತನ್ನ ಫಲಿತಾಂಶದ ಪುನರ್ ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾನೆ. ಆದರೆ ಇದರಿಂದ ಪ್ರಯೋಜನವಾಗದೇ ಇದ್ದಲ್ಲಿ ಮುಂದಿನ ಬಾರಿ ಮತ್ತೆ ಪರೀಕ್ಷೆಗೆ ಹಾಜರಾಗುವುದಾಗಿಯೂ ಆತ ಹೇಳಿಕೊಂಡಿದ್ದಾನೆ.