ರಾಜ್ಯ ಹೆದ್ದಾರಿಗಳನ್ನುಜಿಲ್ಲಾ ರಸ್ತೆಗಳನ್ನಾಗಿಸಿ ಮದ್ಯದಂಗಡಿ ತೆರೆದ ಕೇರಳ ಸರ್ಕಾರ

Update: 2017-05-31 10:11 GMT

ಮಲಪ್ಪುರಂ,ಮೇ 31: ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳ 500 ಮೀಟರ್ ವ್ಯಾಪ್ತಿಯಲ್ಲಿ ಮದ್ಯಮಾರಾಟ ನಿಷೇಧಿಸಿರುವ ಸುಪ್ರೀಂಕೋರ್ಟಿನ ತೀರ್ಪು ಇರುವ ಹಿನ್ನೆಲೆಯಲ್ಲಿ ಈ ಹಿಂದೆ ರಾಜ್ಯ ಹೆದ್ದಾರಿಗಳಾಗಿದ್ದ ರಸ್ತೆಗಳನ್ನು ಜಿಲ್ಲಾ ಪ್ರಧಾನ ರಸ್ತೆಗಳಾಗಿ ಮಾರ್ಪಡಿಸುವ ಮೂಲಕ ಲೋಕೋಪಯೋಗಿ ಇಲಾಖಾ ಅಧಿಕಾರಿಗಳ ಸಹಾಯದಿಂದ ರಾಜ್ಯಾದ್ಯಂತ ಮದ್ಯದಂಗಡಿಗಳನ್ನು ತೆರೆಯಲು ಕೇರಳ ಸರಕಾರ ಅನುವು ಮಾಡಿಕೊಟ್ಟಿದೆ.

ಲೋಕೋಪಯೋಗಿ ಇಲಾಖೆ ಈ ಹಿಂದೆ ರಾಜ್ಯಹೆದ್ದಾರಿಯಾಗಿಸಿದ ರಸ್ತೆಗಳಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಅನುವು ಆಗುವಂತೆ ಅವುಗಳಿಗೆ ಜಿಲ್ಲಾಮುಖ್ಯ ರಸ್ತೆಗಳೆಂದು ಅವುಗಳನ್ನು ಮರುನಾಮಕರಣಗೊಳಿಸುವ ಮೂಲಕ ಸುಪ್ರೀಂಕೋರ್ಟಿನ ಆದೇಶವನ್ನು ಉಪಾಯವಾಗಿ ಗಾಳಿಗೆ ತೂರಲಾಗುತ್ತಿದೆ.

 ಹೀಗೆ ಗುರುವಾಯೂರ್-ಅಲ್ತರ-ಪೊನ್ನಾನಿ, ವೈಪ್ಪಿನ್ ಪಳ್ಳಿಪ್ಪುರಂ, ವರ್ಕಲ-ಮಡತ್ತರ, ಪರಪ್ಪಂಗಾಡಿ-ಅರಿಕ್ಕೋಡ್, ಆಲಪ್ಪುಝ- ಅರ್ತುಂಗಲ್-ತೊಪ್ಪಂಪಡಿ, ಮಣ್ಣಾರ್‌ಕುಳತ್ತಿ-ಪಂಪ, ಕಾಪ್ಪಾಡ್-ತುಷಾರಗಿರಿ-ಅಡಿವಾರಂ, ತೃಶೂರ್-ಕುಟ್ಟಿಪ್ಪುರ, ಕರುವಾರಕುಂಡ್-ಮೇಲಾಟ್ಟೂರ್, ತಿರೂರ್-ಮಂಜೇರಿ, ಮಲಪ್ಪುರಂ-ಪರಪ್ಪನಂಗಾಡಿ ರಸ್ತೆಗಳು 2005 ನವೆಂಬರ್ 29ರ ಸರಕಾರಿ ಆದೇಶ ಪ್ರಕಾರ ರಾಜ್ಯ ಹೆದ್ದಾರಿಗಳಾಗಿದ್ದವು. ಇನ್ನು ಜಿಲ್ಲಾರಸ್ತೆಗಳಾಗಿ ರಸ್ತೆಬದಿಗಳಲ್ಲಿ ಮದ್ಯದಂಗಡಿಗಳು ರಾರಾಜಿಸಲಿವೆ. ವಳಂಚೇರಿ-ನಿಲಂಬೂರ್ ರಸ್ತೆಯನ್ನು 2007ರಲ್ಲಿ ರಾಜ್ಯಹೆದ್ದಾರಿ ಸ್ಥಾನಕ್ಕೇರಿಸಲಾಗಿತ್ತು.

ಆದರೆ ಇವೆಲ್ಲ ಜಿಲ್ಲಾ ರಸ್ತೆಗಳಾಗುತ್ತಿರುವುದರಿಂದ ಸುಪ್ರೀಂ ಕೋರ್ಟಿನ ಆದೇಶ ಇಲ್ಲಿಗೆ ಅನ್ವಯಿಸುವುದಿಲ್ಲ. ಅಧಿಕಾರಿಗಳ ಈ ಉಪಾಯದಡಿಯಲ್ಲಿ ಇಲ್ಲಿ ಮದ್ಯದಂಗಡಿಗಳಿಗೆ ಮರುಜೀವ ಸಿಗಲಿದೆ. ಸುಪ್ರೀಂಕೋರ್ಟಿನ ರಾಜ್ಯ ಹೆದ್ದಾರಿಗಳಲ್ಲಿಯೂ 500 ಮೀಟರ್ ವ್ಯಾಪ್ತಿಯಲ್ಲಿ ಮದ್ಯದಂಗಡಿ ಇರಬಾರದೆನ್ನುವ ಆದೇಶದಿಂದ ಕೇರಳದ ಬೆವರೇಜ್ ಕಾರ್ಪೊರೇಷನ್ ಬಹಳ ನಷ್ಟ ಅನುಭವಿಸಿತ್ತು. ಕಾರ್ಪೋರೇಷನ್‌ನ ಎಲ್ಲ ಮದ್ಯದಂಗಡಿಗಳನ್ನು ಸುಪ್ರೀಂಕೋರ್ಟಿನ ತೀರ್ಪಿನ ನಂತರ ಮುಚ್ಚಲಾಗಿತ್ತು.

ನ್ಯಾಯಾಲಯವನ್ನೆ ತಪ್ಪುದಾರಿಗೆಳೆಯುವ ಈ ಕ್ರಮವನ್ನು ವಿವಿಧ ಸಂಘಟನೆಗಳು ವಿರೋಧಿಸಿದ್ದು, ಮದ್ಯದಂಗಡಿ ತೆರೆಯಬಾರದೆಂದು ಸರಕಾರವನ್ನು ಒತ್ತಾಯಿಸಿವೆ. ಆದರೆ, ಅಬಕಾರಿ, ಲೋಕೋಪಯೋಗಿ ಇಲಾಖಾ ಸಚಿವಾಲಯದ ನೆರವಿನಲ್ಲಿ ಬೇವರೇಜ್ ಕಾರ್ಪೊರೇಷನ್‌ನ ಮದ್ಯದಂಗಡಿಗಳಿಗೆ ಮರುಜೀವ ಕೊಡುವ ಕ್ರಮ ಜಾರಿಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News