ಫಲ್ಗುಣಿ ನದಿ ನೀರು ಕಲುಷಿತ ಪ್ರಕರಣ: ಸದನ ಸಮಿತಿ ರಚಿಸಿ ಕ್ರಮ- ಮೇಯರ್

Update: 2017-05-31 10:48 GMT

ಮಂಗಳೂರು, ಮೇ 31: ಮರವೂರು ಅಣೆಕಟ್ಟು ಸಮೀಪದ ಕೈಗಾರಿಕೆಗಳ ತ್ಯಾಜ್ಯ ಹಾಗೂ ರಾಸಾಯನಿಕಯುಕ್ತ ನೀರಿನಿಂದ ಫಲ್ಗುಣಿ ನದಿ ನೀರು ಕಲುಷಿತಗೊಂಡಿರುವ ಕುರಿತಂತೆ ಪಾಲಿಕೆಯ ಸದನ ಸಮಿತಿ ರಚಿಸಿ ಪರಿಶೀಲನೆ ನಡೆಸಿ ಸೂಕ್ತ ಕ್ರಮಕ್ಕೆ ಮನಪಾ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.

ಮೇಯರ್ ಕವಿತಾ ಸನಿಲ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಫಲ್ಗುಣಿ ನದಿ ನೀರು ಕಲುಷಿತಗೊಂಡ ಕುರಿತು ತೀವ್ರ ಚರ್ಚೆ ನಡೆಯಿತು.

ವಿಷಯ ಪ್ರಸ್ತಾಪಿಸಿದ ಸದಸ್ಯ ದಯಾನಂದ ಶೆಟ್ಟಿ, ಫಲ್ಗುಣಿ ನದಿ ನೀರು ಕಲುಷಿತಗೊಂಡು ಜಾನುವಾರು ಹಾಗೂ ಜಲಚರಗಳು ಸಾವೀಗೀಡಾಗಿವೆ. ನದಿಗೆ ನಗರ ಪಾಲಿಕೆ ಒಳಚರಂಡಿ ನೀರು ಸೇರುತ್ತಿದೆ ಎಂಬ ಆರೋಪ ಕೇಳಿ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೇಯರ್ ಕವಿತಾ ಸನಿಲ್ ಪ್ರತಿಕ್ರಿಯಿಸಿ, ಎರಡು ವಾರಗಳ ಈ ಹಿಂದೆ ಈ ಬಗ್ಗೆ ತಾನು ಹಾಗೂ ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷರು, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹಾಗೂ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಕೊಂಬೂರು ಮಠ, ಪಚ್ಚನಾಡಿ, ಮಂಜಲ್‌ಪಾದೆ ಹಾಗೂ ಫಲ್ಗುಣಿ ನದಿವರೆಗೆ ಭೇಟಿ ನೀಡಿ ಮನಪಾದ ತ್ಯಾಜ್ಯ ನೀರು ನದಿಗೆ ಸೇರುತ್ತಿಲ್ಲ ಎಂಬುದನ್ನು ಖಾತರಿ ಪಡಿಸಲಾಗಿದೆ. ಫಲ್ಗುಣಿಗೆ ಸ್ಥಳೀಯ ಕೈಗಾರಿಕೆಗಳ ರಾಸಾನಿಯಕ ನೀರು ಸೇರಿರುವುದರಿಂದ ಜಲಚರಗಳ ಸಾವು ಸಂಭವಿಸಿರುವ ಬಗ್ಗೆ ಎನ್‌ಐಟಿಕೆಯ ತನಿಖಾ ವರದಿುೂ ತಿಳಿಸಿದೆ ಎಂದು ಸ್ಪಷ್ಟಪಡಿಸಿದರು.

ಸದಸ್ಯ ದೀಪಕ್ ಪೂಜಾರಿ ಮಾತನಾಡಿ, ಮಹಾನಗರ ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಫಲ್ಗುಣಿ ನದಿ ನೀರು ವಿಷಪೂರಿತವಾಗಿದೆ. ಹಾಗಾಗಿ ತ್ಯಾಜ್ಯವನ್ನು ಬಿಡುತ್ತಿರುವ ಕಂಪನಿಗಳಿಗೆ ನೋಟಿಸು ನೀಡಿ ಮನಪಾದಿಂದ ಆ ಕೈಗಾರಿಕೆಗಳಿಗೆ ಪೂರೈಕೆಯಾಗುತ್ತಿರುವ ನೀರನ್ನು ಸ್ಥಗಿತೊಳಿಸಬೇಕು ಎಂದು ಒತ್ತಾಯಿಸಿದರು.

ರುಚಿಸೋಯಾ, ಎಂಸಿಎಫ್, ಎಂಆರ್‌ಪಿಎಲ್ ಮೊದಲಾದವುಗಳ ರಾಸಾನಿಯಕ ನೀರು ಫಲ್ಗುಣಿ ನದಿ ಸೇರುತ್ತಿದೆ ಎಂದು ವಿಪಕ್ಷ ನಾಯಕ ಗಣೇಶ್ ಹೊಸಬೆಟ್ಟು ಹಾಗೂ ನವೀನ್ ಡಿಸೋಜಾ ಕೂಡಾ ದನಿಗೂಡಿಸಿದರು.
ಈ ಬಗ್ಗೆ ಪರಿಷತ್‌ನಲ್ಲಿ ನಿರ್ಣಯ ಮಾಡಿ ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಪತ್ರ ಬರೆಯುವುದು ಸೂಕ್ತ ಎಂದು ಮುಖ್ಯ ಸಚೇತಕ ಶಶಿಧರ ಹೆಗ್ಡೆ ಅಭಿಪ್ರಾಯಿಸಿದರು.

ಜಿಲ್ಲಾಧಿಕಾರಿ ಕೂಡಾ ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ ಯಾವುದೇ ಕ್ರಮ ಆಗಿಲ್ಲ. ಕಂಪನಿಗಳ ನಿರ್ಲಕ್ಷದಿಂದ ಜಲಚರಗಳು ಸಾವು ಸಂಭವಿಸಿದೆ ಎಂದು ದೀಪಕ್ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯರ ಆಕ್ರೋಶ, ಅಸಮಾಧಾನ, ಆಕ್ಷೇಪವನ್ನು ಆಲಿಸಿದ ಮೇಯರ್ ಕವಿತಾ ಸನಿಲ್, ಈ ಬಗ್ಗೆ ಸದನ ಸಮಿತಿ ರಚಿಸಿ ಪರಿಶೀಲನೆ ನಡೆಸಿ ನದಿ ನೀರು ಕಲುಷಿತಕ್ಕೆ ಕಾರಣವಾದ ಕೈಗಾರಿಕೆಗಳಿಗೆ ನೀರು ಕಡಿತಗೊಳಿಸುವ ಕುರಿತಂತೆ ಕ್ರಮ ಕೈಗೊಳ್ಳಲಾಗುವುದು. ಮಾತ್ರವಲ್ಲದೆ, ಬೆಂಗಳೂರಿನ ನಡೆಯುವ ಪರಿಸರ ಸಂಬಂಧಿ ಸಭೆಯಲ್ಲಿ ಈ ಬಗ್ಗೆ ತಾನು ಪ್ರಸ್ತಾಪಿಸುವುದಾಗಿ ಹೇಳಿದರು.

ಒಳಚರಂಡಿ ಅವ್ಯವಸ್ಥೆಗೆ ಸದಸ್ಯರ ಆಕ್ರೋಶ

ನಗರದ ಒಳಚರಂಡಿ ಕಾಮಗಾರಿಯಲ್ಲಿನ ಅವ್ಯವಸ್ಥೆಯಿಂದಾಗಿ (ಯುಜಿಡಿ) ಬಾವಿ ನೀರು, ಕೆರೆಗಳ ನೀರು ಕಲುಷಿತವಾಗುತ್ತಿದೆ. ಮುಳಿಹಿತ್ಲು, ಬಜಾಲ್ ಮೊದಲಾದ ಕಡೆ ಎಸ್‌ಟಿಪಿ (ಒಳಚರಂಡಿ ಸಂಸ್ಕರಣಾ ಘಟಕ) ನೀರು ಮಳೆಗಾಲದಲ್ಲಿ ರಸ್ತೆಯಲ್ಲೇ ಹರಿಯುತ್ತದೆ. ಐದು ವೆಟ್‌ವೆಲ್‌ಗಳೂ ಕೂಡಾ ಅಸಮರ್ಪವಾಗಿವೆ ಎಂದು ವಿಪಕ್ಷ ಸದಸ್ಯ ಸುಧೀರ್ ಶೆಟ್ಟಿ ಆಕ್ಷೇಪಿಸಿದರು.
ನೂತನವಾಗಿ ನಿರ್ಮಾಣಗೊಂಡ ಸುರತ್ಕಲ್ ಎಸ್‌ಟಿಪಿಯಲ್ಲಿ ಸ್ವಿಚ್ ಬೋರ್ಡ್ ಹಾಕಲು ಪೆನ್ ಉಪಯೋಗಿಸಬೇಕಾದ ಪರಿಸ್ಥಿತಿ ಇದೆ ಎಂದು ವಿಪಕ್ಷ ನಾಯ ಗಣೇಶ್ ಹೊಸಬೆಟ್ಟು ಹೇಳಿದರು.

ಜಪ್ಪಿನಮೊಗರು ಒಳಚರಂಡಿ ನೀರು ತೆರೆದ ತೋಡುಗಳಲ್ಲಿ ಹರಿದು ಹೋಗುತ್ತಿದೆ ಎಂದು ಸುರೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಆಯುಕ್ತ ಮುಹಮ್ಮದ್ ನಝೀರ್ ಪ್ರತಿಕ್ರಿಯಿಸಿ, ಸುರತ್ಕಲ್ ಎಸ್‌ಟಿಪಿಗೆ ಎರಡು ವಾರದ ಹಿಂದೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಸಣ್ಣ ಪುಟ್ಟ ತೊಂದರೆಯ ನಡುವೆಯೂ ಅಲ್ಲಿ ತ್ಯಾಜ್ಯ ಸಂಸ್ಕರಣೆ ನಡೆಯುತ್ತಿದೆ. ಆದರೆ ವೆಟ್‌ವೆಲ್‌ಗಳ ಸಮಸ್ಯೆ ತೀವ್ರವಾಗಿದೆ. ಪಂಪ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅದಕ್ಕಾಗಿ ಪಚ್ಚನಾಡಿ, ಕೊಂಬೂರುಮಠದಲ್ಲಿ ಜನರೇಟರ್ ವ್ಯವಸ್ಥೆ ಮಾಡಲು ಸೂಚಿಲಾಗಿದೆ ಎಂದರು.

ಎಡಿಬಿ ಯೋಜನೆಯಡಿ ಕುಡ್ಸೆಂಪ್‌ನವರು ಅಳವಡಿಸಿದ ಪಂಪ್‌ಗಳು ಒಂದು ವರ್ಷದಲ್ಲಿ, ಅದೂ ಐದೂ ಪಂಪ್‌ಗಳು ಹಾಳಾಗಿ ರುವುದು ಹೇಗೆ ಎಂದು ಸದಸ್ಯ ಮಹಾಬಲ ಮಾರ್ಲ ಪ್ರಶ್ನಿಸಿದರು. ಈ ಬಗ್ಗೆ ಕೆಲ ಹೊತ್ತು ಸದನದಲ್ಲಿ ಸದಸ್ಯರ ನಡುವೆ ಪರಸ್ಪರ ಚರ್ಚೆ ನಡೆಯಿತು.

ಮಲೇರಿಯಾ ನಿರ್ಮೂಲನೆಗೆ ಸಂಬಂಧಿಸಿ ಮನಪಾದಿಂದ ಸಾಕಷ್ಟು ಕ್ರಮಗಳನ್ನು ವಹಿಸಲಾಗುತ್ತಿದ್ದರೂ ನಗರ ಮಲೇರಿಯಾದಲ್ಲಿ ನಂ. 1 ಸ್ಥಾನದಲ್ಲಿದೆ. ಈ ಬಗ್ಗೆ ಮನಪಾ ಗಮನ ಹರಿಸಿ ಸಮರ್ಪಕ ಕಾರ್ಯಕ್ರಮ ರೂಪಿಸಬೇಕು ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತ ಐವನ್ ಡಿಸೋಜಾ ಸಲಹೆ ನೀಡಿದರು.

ಪಂಪ್‌ವೆಲ್‌ನಲ್ಲಿ ಒಳಚರಂಡಿ ಕಾಮಗಾರಿ ಸ್ಥಗಿತ: ಕ್ರಮಕ್ಕೆ ಸೂಚನೆ

ಪಂಪ್‌ವೆಲ್‌ನಲ್ಲಿ ಒಳಚರಂಡಿ ಕಾಮಗಾರಿ ಕೆಲ ತಿಂಗಳಿನಿಂದ ಸ್ಥಗಿತಗೊಂಡಿದೆ. ಇದರಿಂದ ತೊಂದರೆಯಾಗಿದೆ ಎಂದು ಸದಸ್ಯೆ ಆಶಾ ಡಿಸಿಲ್ವಾ ಸಭೆಯಲ್ಲಿ ಪ್ರಸ್ತಾಪಿಸಿದರು.
ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಮೂವರು ಖಾಸಗಿ ಆಸ್ತಿಯ ಮಾಲಕರಿಂದ ಆಕ್ಷೇಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿದೆ ಎಂದರು.

ಆಯುಕ್ತ ಮುಹಮ್ಮದ್ ನಝೀರ್ ಮಾತನಾಡಿ, ಖಾಸಗಿಯವರ ಮನವೊಲಿಕೆಗೆ ಪ್ರಯತ್ನಿಸಿ, ಇಲ್ಲವಾದಲ್ಲಿ ಸ್ವಾಧೀನಕ್ಕೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉಪ ಮೇಯರ್ ರಜನೀಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ರವೂಫ್, ಸಬಿತಾ ಮಿಸ್ಕಿತ್ ಉಪಸ್ಥಿತರಿದ್ದರು.

ಒಳಚರಂಡಿ ಅವ್ಯವಸ್ಥೆ ಬಗ್ಗೆ ತನಿಖೆಗೆ ಐವನ್ ಡಿಸೋಜಾ ಸಲಹೆ:
ಸಭೆಯಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜಾ ಪ್ರತಿಕ್ರಿಯಿಸಿ, ಒಳಚರಂಡಿ ಯೋಜನೆಗೆ ಸರಕಾರದ ಹಣ ಖರ್ಚು ಮಾಡಲಾಗಿದೆ. ಹಾಗಿದ್ದರೂ ನಗರದ ಬಹುತೇಕ ಕೆರೆಗಳಿಗೆ ಒಳಚರಂಡಿ ನೀರು ಸೇರುತ್ತಿರುವುದು ಕಂಡು ಬರುತ್ತಿದೆ. ಕೆರೆ ಸಂಜೀವಿನಿ ಯೋಜನೆ ಮೂಲಕ ಸರಕಾರ ನಗರದ ಕೆರೆಗಳ ಅಭಿವೃದ್ಧಿಗೆ ಮುಂದಾಗಿದೆ. ಆದರೆ ಒಳಚರಂಡಿ ತ್ಯಾಜ್ಯ ಸೇರುವ ಸಮಸ್ಯೆ ಬಗೆಹರಿಯದೆ ಕೆರೆಗಳ ಅಭಿವೃದ್ಧಿ ಕಾರ್ಯ ನಿಷ್ಪ್ರಯೋಜಕವಾಗಲಿದೆ. ಹಾಗಾಗಿ ಮೊದಲು ಈ ಕಾಮಗಾರಿಗಳಲ್ಲಿ ಆಗಿರುವ ಲೋಪದ ಬಗ್ಗೆ ತನಿಖೆ ಆಗಬೇಕು. ಇಲ್ಲವಾದಲ್ಲಿ ಸರಕಾರದ ಹಣ ದೊಡ್ಡ ಮಟ್ಟದಲ್ಲಿ ಪೋಲು ಮಾಡಿದಂತಾಗುತ್ತದೆ. ಈ ಬಗ್ಗೆ ತಾನು ಮುಂದಿನ ಅಧಿವೇಶನದಲ್ಲೂ ಪ್ರಸ್ತಾಪಿಸುವುದಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News