×
Ad

ಹೈಕೋರ್ಟ್ ನ್ಯಾಯಾಧೀಶರ ಗೋ ಪುರಾಣ!

Update: 2017-05-31 21:16 IST

ಜೈಪುರ್,ಮೇ 31: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನಿರ್ದೇಶ ನೀಡಿರುವ ರಾಜಸ್ಥಾನ ಉಚ್ಚ ನ್ಯಾಯಾಲಯದ ನ್ಯಾ.ಮಹೇಶಚಂದ್ ಶರ್ಮಾ ಅವರು ಗೋವು,ಅದರ ಮೂತ್ರ ಮತ್ತು ಸಗಣಿಯ ಮಹತ್ವವನ್ನೂ ಪಟ್ಟಿ ಮಾಡಿದ್ದಾರೆ.

* ಗೋವಿನಲ್ಲಿ 33 ಕೋಟಿ ದೇವಾನುದೇವತೆಗಳು ವಾಸವಾಗಿದ್ದಾರೆ ಎಂದು ನಂಬಲಾಗಿದೆ ಮತ್ತು ಸಮುದ್ರ ಮಥನದಲ್ಲಿ ಲಕ್ಷ್ಮೀದೇವಿಯ ಜೊತೆಗೆ ಗೋವು ಕೂಡ ಉದ್ಭವಿಸಿತ್ತೆಂದು ಹಿಂದು ಪುರಾಣಗಳಲ್ಲಿ ಹೇಳಲಾಗಿದೆ.

* ಗೋವು ಆಮ್ಲಜನಕವನ್ನು ಸೇವಿಸಿ ಆಮ್ಲಜನಕವನ್ನೇ ಹೊರಗೆ ಹಾಕುವ ಏಕೈಕ ಜೀವಂತ ಪ್ರಾಣಿಯಾಗಿದೆ ಮತ್ತು ಸ್ವಯಂ ಅದು ಸರ್ವರೋಗಗಳನ್ನೂ ಗುಣಪಡಿಸಬಲ್ಲ ಆಸ್ಪತ್ರೆಯಂತಿದೆ.

* ಗೋಮೂತ್ರವು ಯಕೃತ್ತು, ಹೃದಯ ಮತ್ತು ಮನಸ್ಸುಗಳನ್ನು ಆರೋಗ್ಯಪೂರ್ಣ ವಾಗಿರಿಸುತ್ತದೆ ಮತ್ತು ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದು ವಯಸ್ಸಾಗುವುದನ್ನೂ ನಿಧಾನಗೊಳಿಸುತ್ತದೆ.

* ಗೋಮೂತ್ರ ಸೇವನೆಯಿಂದ ವ್ಯಕ್ತಿಯ ಹಿಂದಿನ ಜನ್ಮದಲ್ಲಿನ ಪಾಪಗಳು ತೊಳೆದು ಹೋಗುತ್ತವೆ.

* ಮನೆಯ ಗೋಡೆಗಳಿಗೆ ಗೋವಿನ ಸಗಣಿಯನ್ನು ಲೇಪಿಸಿದರೆ ಅದು ಮನೆಮಂದಿಯನ್ನು ವಿಕಿರಣದಿಂದ ರಕ್ಷಿಸುತ್ತದೆ ಎಂದು ರಷ್ಯದ ವಿಜ್ಞಾನಿಯೋರ್ವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

* ಗೋವು ತನ್ನ ಕೋಡುಗಳ ಮೂಲಕ ಕಾಸ್ಮಿಕ್ ಎನರ್ಜಿಯನ್ನು ಹೀರಿಕೊಳ್ಳುತ್ತದೆ.

* ಹಾಲಿನ ಸೇವನೆಯು ಕ್ಯಾನ್ಸರ್ ರಕ್ತಕಣಗಳನ್ನು ಪ್ರವೇಶಿಸದಂತೆ ತಡೆಯುತ್ತದೆ.

* ಗೋವಿನ ಸಗಣಿಯು ಕಾಲರಾ ಕ್ರಿಮಿಗಳನ್ನು ಕೊಲ್ಲುತ್ತದೆ.

* ಗೋವಿನ ಸಗಣಿಯು ವಾರ್ಷಿಕ 4,500 ಲೀ.ಜೈವಿಕ ಅನಿಲವನ್ನು ಉತ್ಪಾದಿಸುತ್ತದೆ. ದೇಶದಲ್ಲಿಯ ಎಲ್ಲ ಗೋವುಗಳ ಸಗಣಿಯಿಂದ ಜೈವಿಕ ಅನಿಲವನ್ನು ಉತ್ಪಾದಿಸಿದರೆ, ದೇಶವು 6.80 ಲ.ಟನ್ ಉರುವಲನ್ನು ಉಳಿಸಬಹುದು ಮತ್ತು 14 ಕೋಟಿ ಮರಗಳನ್ನು ಕಡಿಯುವುದನ್ನು ತಪ್ಪಿಸಬಹುದು.

* ಗೋವು 180 ಅಡಿ ಉದ್ದದ ಬೃಹತ್ ಕರುಳನ್ನು ಹೊಂದಿರುವ ಏಕೈಕ ಸಸ್ತನಿ ಪ್ರಾಣಿಯಾಗಿದೆ. ಇದರಿಂದಾಗಿ ಗೋವಿನ ಹಾಲು ಮಾನವ ಶರೀರದಲ್ಲಿ ವಿಟಾಮಿನ್ ಎ ಅನ್ನು ಉತ್ಪಾದಿಸುವ ಕೆರೋಟಿನ್ ಅನ್ನು ಒಳಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News