ಬಾಂಬರ್‌ನನ್ನು ಸಮಾಧಿ ಮಾಡಲು ಬ್ರಿಟನ್ ಮಸೀದಿಗಳ ನಕಾರ

Update: 2017-06-01 14:40 GMT

ಲಂಡನ್, ಜೂ. 1: ಕಳೆದ ವಾರ ಮ್ಯಾಂಚೆಸ್ಟರ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರ ವೇಳೆ ಆತ್ಮಹತ್ಯಾ ದಾಳಿ ನಡೆಸಿದ ಭಯೋತ್ಪಾದಕ ಸಲ್ಮಾನ್ ಅಬೇದಿಯ ಶವ ದಫನ ಮಾಡಲು ಬ್ರಿಟನ್‌ನ ಮಸೀದಿಗಳು ನಿರಾಕರಿಸಿವೆ.

ಅಮೆರಿಕದ ಪಾಪ್ ಹಾಡುಗಾರ್ತಿ ಆ್ಯರಿಯಾನಾ ಗ್ರಾಂಡ್‌ರ ಸಂಗೀತ ಕಾರ್ಯಕ್ರಮದ ಕೊನೆಯಲ್ಲಿ ನಡೆದ ಆತ್ಮಹತ್ಯಾ ದಾಳಿಯಲ್ಲಿ 22 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ.

ಲಿಬಿಯ ಮೂಲದ 22 ವರ್ಷದ ಬಾಂಬರ್‌ನ ಯಾವುದೇ ರೀತಿಯ ಅಂತ್ಯಸಂಸ್ಕಾರ ಗ್ರೇಟರ್ ಮ್ಯಾಂಚೆಸ್ಟರ್ ಪ್ರದೇಶದಲ್ಲಿ ನಡೆಯುವುದನ್ನು ತಡೆಯಲು ನಗರದ ಅಧಿಕಾರಿಗಳು ‘ಸಾಧ್ಯವಿರುವ ಎಲ್ಲ ಪ್ರಯತ್ನ’ಗಳನ್ನು ಮಾಡುತ್ತಿದ್ದಾರೆ ಎಂದು ‘ಮೆಟ್ರೊ’ ಗುರುವಾರ ವರದಿ ಮಾಡಿದೆ.

ಮ್ಯಾಂಚೆಸ್ಟರ್‌ನ ಕೌನ್ಸಿಲ್‌ಗಳು, ಅಂತ್ಯಸಂಸ್ಕಾರ ಮಾರ್ಗದರ್ಶಕರು ಮತ್ತು ಮಸೀದಿಗಳು ಅಬೇದಿಯ ದೇಹವನ್ನು ದಫನ ಮಾಡಲು ನಿರಾಕರಿಸಿವೆ.

ಈಗ ಆತನ ದೇಹ ನಗರದ ಹೊರವಲಯದಲ್ಲಿರುವ ಶವಾಗಾರವೊಂದರಲ್ಲಿದೆ.

ಸ್ಫೋಟಕ್ಕೆ ಸಂಬಂಧಿಸಿ ಒಟ್ಟು 16 ಮಂದಿಯನ್ನು ಬಂಧಿಸಲಾಗಿದೆ. ಅವರ ಪೈಕಿ ಮೂವರನ್ನು ಬಿಡುಗಡೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News