ದಯಾ ಮನವಿ ಅವಕಾಶ ಇರೋವರೆಗೆ ಜಾಧವ್ ಜೀವಂತ: ಪಾಕ್

Update: 2017-06-01 14:56 GMT

ಇಸ್ಲಾಮಾಬಾದ್, ಜೂ. 1: ಪಾಕಿಸ್ತಾನದಲ್ಲಿ ಬೇಹುಗಾರಿಕೆ ಆರೋಪದಲ್ಲಿ ಬಂಧಿಸಲ್ಪಟ್ಟು ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತ ರಾಷ್ಟ್ರೀಯ ಕುಲಭೂಷಣ್ ಜಾಧವ್‌ರ ದಯಾ ಮನವಿ ಹಕ್ಕು ಊರ್ಜಿತದಲ್ಲಿ ಇರುವವರೆಗೆ ಅವರು ಜೀವಂತವಿರುತ್ತಾರೆ ಎಂದು ಪಾಕಿಸ್ತಾನ ಗುರುವಾರ ಹೇಳಿದೆ.

‘‘ಅಂತಾರಾಷ್ಟ್ರೀಯ ನ್ಯಾಯಾಲಯದ ತಡೆಯಾಜ್ಞೆಯ ಹೊರತಾಗಿಯೂ, ಕ್ಷಮಾದಾನ ಕೋರುವ ಜಾಧವ್‌ರ ಅವಕಾಶಗಳು ಮುಗಿಯುವವರೆಗೆ ಅವರು ಜೀವಂತವಾಗಿರುತ್ತಾರೆ’’ ಎಂದು ಪಾಕಿಸ್ತಾನದ ವಿದೇಶ ಕಚೇರಿ ವಕ್ತಾರ ನಫೀಸ್ ಝಕಾರಿಯ ತಿಳಿಸಿದರು.

ಜಾಧವ್‌ಗೆ ದಯಾ ಭಿಕ್ಷೆ ಕೋರುವ ಎರಡು ಅವಕಾಶಗಳಿವೆ. ಮೊದಲನೆಯದು ಸೇನಾ ಮುಖ್ಯಸ್ಥರ ಬಳಿ ಕ್ಷಮಾದಾನ ಕೋರುವುದು ಹಾಗೂ ಎರಡನೆಯದು ದೇಶದ ಅಧ್ಯಕ್ಷರಲ್ಲಿ ಕ್ಷಮಾದಾನ ಕೋರುವುದು.

ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತ ಹೂಡಿರುವ ಮೊಕದ್ದಮೆ ಜಾಧವ್‌ಗೆ ಕಾನ್ಸುಲರ್ ಸಂಪರ್ಕವನ್ನು ಒದಗಿಸಬೇಕೆಂದು ಕೋರುವುದಕ್ಕೆ ಸಂಬಂಧಿಸಿದೆ ಎಂದು ಅವರು ಹೇಳಿದರು.

‘‘ಪಾಕಿಸ್ತಾನಿ ಕಾನೂನಿನ ಪ್ರಕಾರ, ಆಂತಾರಾಷ್ಟ್ರೀಯ ನ್ಯಾಯಾಲಯವೊಂದನ್ನು ಮೇಲ್ಮನವಿ ನ್ಯಾಯಾಲಯದಂತೆ ಪರಿಗಣಿಸಬಹುದೇ ಎನ್ನುವುದು ಪ್ರಶ್ನೆಯಲ್ಲ’’ ಎಂದು ಹೇಳಿದ ಝಕಾರಿಯ, ಪ್ರಕರಣದ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಭಾರತ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ತಾನು ಪಾಕಿಸ್ತಾನದಲ್ಲಿ ಗೂಢಚಾರಿಕೆ ನಡೆಸಿ ಭಯೋತ್ಪಾದನೆಯನ್ನು ಪ್ರಚೋದಿಸುತ್ತಿದ್ದೆ ಎಂಬ ಜಾಧವ್‌ರ ತಪ್ಪೊಪ್ಪಿಗೆ ಹೇಳಿಕೆಯ ಬಗ್ಗೆ ಮಾಹಿತಿ ನೀಡುವಂತೆ ಜನವರಿ 23ರಂದೇ ಪಾಕಿಸ್ತಾ ಕೋರಿಕೆ ಸಲ್ಲಿಸಿದ್ದರೂ, ಭಾರತ ಹಾಗೆ ಮಾಡಿಲ್ಲ ಎಂದು ವಕ್ತಾರರು ಹೇಳಿದರು. ಜಾಧವ್‌ರ ಗಲ್ಲು ಶಿಕ್ಷೆಗೆ ಅಂತಾರಾಷ್ಟ್ರೀಯ ನ್ಯಾಯಾಲಯ ತಡೆ ನೀಡಿರುವುದು ಒಂದು ಸಾಮಾನ್ಯ ವಿಷಯ ಎಂದರು.

ಬಲೂಚಿಸ್ತಾನ ಮತ್ತು ಕರಾಚಿಯಲ್ಲಿ ಭಯೋತ್ಪಾದನೆಯನ್ನು ಪ್ರಚೋದಿಸಿದ ಆರೋಪದಲ್ಲಿ ಪಾಕಿಸ್ತಾನದ ಸೇನಾ ನ್ಯಾಯಾಲಯವು ಜಾಧವ್‌ಗೆ ಮರಣ ದಂಡನೆ ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News