ಯುಪಿಎಸ್ಸಿ ಸಾಧಕರು: 22 ಲಕ್ಷ ರೂ. ವೇತನದ ಆಫರ್ ಬಿಟ್ಟ ಹಿಮಾಂಶು ಜೈನ್ ಈಗ ಐಎಎಸ್ ಅಧಿಕಾರಿ

Update: 2017-06-02 14:57 GMT

ರೋಹ್ಟಕ್, ಜೂ.2: ತನ್ನ ಬಾಲ್ಯದ ಕನಸನ್ನು ನನಸು ಮಾಡಿಕೊಳ್ಳುವ ಸಲುವಾಗಿ ಅಮೆಝಾನ್ ಹಾಗೂ ಗೂಗಲ್ ನಂತಹ ಬಹುರಾಷ್ಟ್ರೀಯ ಕಂಪೆನಿಗಳ ಭಾರೀ ವೇತನದ ಆಫರನ್ನು ನಿರಾಕರಿಸಿದ್ದ ಹಿಮಾಂಶು ಜೈನ್ ಯುಪಿಎಸ್ ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 44ನೆ ರ್ಯಾಂಕ್ ಗಳಿಸಿದ್ದಾರೆ.

ಹೈದರಾಬಾದ್ ಮೂಲದ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಹಿಮಾಂಶು ಜೈನ್ ಅವರಿಗೆ ಅಮೆಝಾನ್ ಹಾಗೂ ಗೂಗಲ್ ನಂತಹ ಬಹುರಾಷ್ಟ್ರೀಯ ಕಂಪೆನಿಗಳಿಂದ ಭಾರೀ ಆಫರ್ ಗಳು ಬಂದಿತ್ತು.

“ಮೂರು ತಿಂಗಳುಗಳ ಕಾಲ ನಾನು ಅಮೆಝಾನ್ ನಲ್ಲಿ ಇಂಟರ್ನ್ ಆಗಿದ್ದೆ. ಆನಂತರ ಅವರು ವಾರ್ಷಿಕ 22 ಲಕ್ಷ ರೂ. ವೇತನದ ಆಫರ್ ನೀಡಿದ್ದರು. ಆದರೆ ಇಂಟರ್ನ್ ಶಿಪ್ ಸಂದರ್ಭ ನಾನು ಮಾಡಬೇಕಾದ ಕೆಲಸ ಇದಲ್ಲ ಎಂದು ನಿರ್ಧರಿಸಿದೆ” ಎನ್ನುತ್ತಾರೆ ಹಿಮಾಂಶು.

ಆನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ಹುದ್ದೆಗೂ ಅವರು ಅರ್ಜಿ ಸಲ್ಲಿಸಿದ್ದು, ಕೆಲಸವೂ ಲಭಿಸಿತ್ತು. ಆದರೆ ಅವರ ಉದ್ದೇಶ ಬೇರೆಯದೇ ಆಗಿತ್ತು. ಶಾಲೆಗಳಿಗೆ ಭೇಟಿ ನೀಡುವ ಜಿಲ್ಲಾಧಿಕಾರಿಗಳನ್ನು ಗಮನಿಸುತ್ತಿದ್ದ ಹಿಮಾಂಶು ತಾನೂ ಅವರಂತೆಯೇ ಆಗಬೇಕು ಎಂದು ಬಯಸಿದ್ದರು. “ದೇಶವನ್ನು ಬದಲಾಯಿಸಲು ಐಎಎಸ್ ಅಧಿಕಾರಿಗಳಿಗೆ ಸಾಧ್ಯ ಎನ್ನುವುದನ್ನು ನಾನು ಶಿಕ್ಷಕರು ಹಾಗೂ ಕುಟುಂಬಸ್ಥರಿಂದ ಅರಿತೆ” ಎನ್ನುತ್ತಾರೆ.

ತನ್ನ ಬಾಲ್ಯದ ಕನಸನ್ನು ನನಸು ಮಾಡಿಕೊಳ್ಳುವ ಸಲುವಾಗಿ ಹೊಸದಿಲ್ಲಿಗೆ ಆಗಮಿಸಿದ ಅವರು ಯುಪಿಎಸ್ ಸಿ ಪರೀಕ್ಷೆ ಬರೆಯಲು ಕಠಿಣ ಅಭ್ಯಾಸ ನಡೆಸಿದರು. ಮೊದಲ ಎರಡು ಪ್ರಯತ್ನಗಳಲ್ಲಿ ನಿರೀಕ್ಷಿತ ಫಲಿತಾಂಶ ಲಭಿಸದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪರೀಕ್ಷೆ ಎದುರಿಸಿದ ಅವರು 44ನೆ ರ್ಯಾಂಕ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News