ಲಂಡನ್ ನಲ್ಲಿ ಭಾರತೀಯ ಮೂಲದ ವ್ಯಕ್ತಿಯ ಕೊಲೆ: ಆರೋಪಿಯ ಸುಳಿವು ನೀಡಿದವರಿಗೆ 8 ಲಕ್ಷ ರೂ. ಬಹುಮಾನ ಘೋಷಣೆ
ಲಂಡನ್, ಜೂ.2: ಅಪರಿಚಿತ ವ್ಯಕ್ತಿಯೋರ್ವ ಬೇಸ್ ಬಾಲ್ ಬ್ಯಾಟ್ ನಲ್ಲಿ ದಾಳಿ ನಡೆಸಿದ ಪರಿಣಾಮ ಭಾರತೀಯ ಮೂಲದ ವ್ಯಕ್ತಿಯೋರ್ವ ಮೃತಪಟ್ಟಿದ್ದು, ಆರೋಪಿಯ ಸುಳಿವು ನೀಡಿದವರಿಗೆ 10 ಸಾವಿರ ಪೌಂಡ್ (8,26,768 ಲಕ್ಷ ರೂ.) ಬಹುಮಾನ ನೀಡುವುದಾಗಿ ಸ್ಕಾಟ್ ಲ್ಯಾಂಡ್ ಯಾರ್ಡ್ ಹೇಳಿದೆ.
45ರ ಹರೆಯದ ಸತ್ನಾಮ್ ಸಿಂಗ್ ತನ್ನ ಗೆಳೆಯನೊಂದಿಗೆ ನೈರುತ್ಯ ಲಂಡನ್ ನ ಹೇಸ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಆಗಮಿಸಿದ ವ್ಯಕ್ತಿಯೋರ್ವ ಬೇಸ್ ಬಾಲ್ ಬ್ಯಾಟ್ ನಿಂದ ಹಲ್ಲೆ ನಡೆಸಿದ್ದ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೇ 23ರಂದು ಮೃತಪಟ್ಟಿದ್ದರು.
ಸತ್ನಾಮ್ ಸಿಂಗ್ ರನ್ನು ಕೊಲೆಗೈದಿರುವ ವ್ಯಕ್ತಿಯನ್ನು ಪತ್ತೆಹಚ್ಚಲು ನೆರವು ನೀಡುವವರಿಗೆ 12,870 ಡಾಲರ್ ಬಹುಮಾನ ನೀಡುವುದಾಗಿ ಸ್ಕಾಟ್ ಲ್ಯಾಂಡ್ ಯಾರ್ಡ್ ಘೋಷಿಸಿದೆ.
“ಕೊಲೆಯತ್ನವೆಂದು ಪರಿಗಣಿಸಲಾಗಿದ್ದ ಪ್ರಕರಣದ ಇದೀಗ ಕೊಲೆ ಪ್ರಕರಣವಾಗಿ ಬದಲಾಗಿದೆ. 3 ತಿಂಗಳ ಹಿಂದೆ ಸತ್ನಾಮ್ ರ ಮೇಲೆ ದಾಳಿ ನಡೆದಿದ್ದು, ಇದೀಗ ಅವರ ನಿಧನದಿಂದ ಬಂಧುಮಿತ್ರರು ತೀವ್ರ ಆಘಾತಕ್ಕೊಳಗಾಗಿದ್ದಾರೆ.” ಎಂದು ಡಿಟೆಕ್ಟಿವ್ ಇನ್ಸ್ ಪೆಕ್ಟರ್ ಜಾನ್ ಮೀಗರ್ ಹೇಳಿದ್ದಾರೆ.
“ಜನಾಂಗೀಯ ದ್ವೇಷದ ಕೃತ್ಯ ಎನ್ನಲು ಯಾವುದೇ ಪುರಾವೆಯಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿದಿದೆ” ಎಂದವರು ಹೇಳಿದ್ದಾರೆ.