ಕುಡಂಕುಳಂನಲ್ಲಿ ಇನ್ನೆರಡು ಅಣುವಿದ್ಯುತ್ ಘಟಕ
ಸೈಂಟ್‌ಪೀಟರ್ಸ್‌ಬರ್ಗ್ (ರಶ್ಯ),ಜೂ.2: ತಮ್ಮ ಮಧ್ಯೆ ಇರುವ ದಶಕಗಳ ‘ವಿಶೇಷ ಹಾಗೂ ವ್ಯೆಹಾತ್ಮಕ ಪಾಲುದಾರಿಕೆ’ಯನ್ನು ಗುರುವಾರ ಭಾರತ ಹಾಗೂ ರಶ್ಯ ಪುನರುಚ್ಚರಿಸಿದ್ದು, ತಮಿಳುನಾಡಿನ ಕುಡಂಕುಳಂನಲ್ಲಿ ಇನ್ನೂ ಎರಡು ಅಣುವಿದ್ಯುತ್ ಸ್ಥಾವರಗಳ ಸ್ಥಾಪನೆ ಸೇರಿದಂತೆ ಐದು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿವೆ. ನಾಲ್ಕು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಸೈಂಟ್‌ಪೀಟರ್ಸ್‌ಬರ್ಗ್‌ನಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಜೊತೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದ ಸಂದರ್ಭದಲ್ಲಿ ಈ ಒಪ್ಪಂದಗಳಿಗೆ ಅಂಕಿತ ಹಾಕಲಾಯಿತು.
ಈ ವರ್ಷ ಭಾರತ ಹಾಗೂ ರಶ್ಯಗಳ ನಡುವಿನ ರಾಜತಾಂತ್ರಿಕ ಬಾಂಧವ್ಯಕ್ಕೆ 70 ವರ್ಷ ತುಂಬಲಿರುವ ಹಿನ್ನೆಲೆಯಲ್ಲಿ ಉಭಯದೇಶಗಳ ನಡುವಿನ ಮಾತುಕತೆ ಹೆಚ್ಚಿನ ಮಹತ್ವ ಪಡೆದಿದೆ.
ಪುಟಿನ್ ಜೊತೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಪ್ರಧಾನಿ ನರೇಂದ್ರ ಮೋದಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಕುಡಂಕುಳ ಅಣುವಿದ್ಯುತ್ ಸ್ಥಾವರದ ಕೊನೆಯ ಘಟಕಗಳ ಸ್ಥಾಪನೆಗಾಗಿ ಏರ್ಪಟ್ಟ ಒಪ್ಪಂದವು ಎರಡೂ ದೇಶಗಳ ಬಾಂಧವ್ಯವನ್ನು ಬಲಪಡಿಸಲಿದೆ ಎಂದರು. ಅಣುಸ್ಥಾವರ ಘಟಕಗಳ ನಿರ್ಮಾಣಕ್ಕಾಗಿ ರಶ್ಯ ಸರಕಾರವು ಮುಂದಿನ ವರ್ಷದಿಂದ ಭಾರತಕ್ಕೆ 10 ವರ್ಷಗಳ ಅವಧಿಗೆ 4.2 ಶತಕೋಟಿ ಡಾಲರ್ ಸಾಲದ ನೆರವು ನೀಡಲಿದೆ ಎಂದು ರಶ್ಯದ ವಿತ್ತ ಸಚಿವ ಆ್ಯಂಟನ್ ಸಿಲುವಾನೊವ್ ತಿಳಿಸಿದ್ದಾರೆ.
ಈ ಒಪ್ಪಂದದಿಂದಾಗಿ ನಾಗರಿಕ ಅಣು ಶಕ್ತಿ ಕ್ಷೇತ್ರದಲ್ಲಿ ಭಾರತ-ರಶ್ಯ ನಡುವಿನ ಬಾಂಧವ್ಯ ಇನ್ನಷ್ಟು ಗಾಢವಾಗುವ ನಿರೀಕ್ಷೆಯಿದೆ.
ಮೋದಿ ಹಾಗೂ ಪುತಿನ್ ನಡುವೆ ಮಾತುಕತೆಯ ಬಳಿಕ ಬಿಡುಗಡೆಗೊಳಿಸಲಾದ ‘21ನೇ ಶತಮಾನದ ದೃಷ್ಟಿಕೋನ’ ಎಂಬ ಶೀರ್ಷಿಕೆಯ ದಾಖಲೆಪತ್ರವನ್ನು ಬಿಡುಗಡೆಗೊಳಿಸಲಾಯಿತು. ‘‘ ನಮ್ಮ ದೇಶಗಳ ನಡುವೆ ಶಕ್ತಿಯ ಸೇತುವೆಯನ್ನು ನಿರ್ಮಿಸಲು ಹಾಗೂ ಅಣುಶಕ್ತಿ ಇಂಧನ, ಜಲ ಇಂಗಾಲ, ಜಲಶಕ್ತಿ ಹಾಗೂ ಪುನರ್‌ನವೀಕರಣಯೋಗ್ಯ ಇಂಧನ ಸಂಪನ್ಮೂಲ ಸೇರಿದಂತೆ ಇಂಧನ ಕ್ಷೇತ್ರದಲ್ಲಿ ದ್ವಿಪಕ್ಷೀಯ ಬಾಂಧವ್ಯಗಳನ್ನು ವಿಸ್ತರಿಸಲು ಶ್ರಮಿಸಲಿದ್ದೇವೆ’’ ಎಂದು ದಾಖಲೆಪತ್ರವು ತಿಳಿಸಿದೆ.
ಕುಡಕುಳಂ ಅಣುವಿದ್ಯುತ್ ಸ್ಥಾವರದ 5 ಹಾಗೂ 6ನೇ ರಿಯಾಕ್ಟರ್‌ಗಳನ್ನು ಭಾರತೀಯ ಅಣುಶಕ್ತಿ ನಿಗಮ (ಎನ್‌ಪಿಸಿಐಎಲ್) ಹಾಗೂ ರಶ್ಯದ ರೊಸಾಟೊಮ್ ಸಂಸ್ಥೆಯ ಸಹಸಂಸ್ಥೆಯಾದ ಜೆಎಸ್‌ಸಿ ಆಟಂಸ್ಟ್ರೊಯ್ ಎಕ್ಸ್‌ಪೋರ್ಟ್ ನಿರ್ಮಿಸಲಿದೆ. ಈ ಎರಡೂ ಘಟಕಗಳ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 1 ಸಾವಿರ ಮೆಗಾವ್ಯಾಟ್‌ಗಳಾಗಿವೆ.
ಪ್ರಸ್ತುತ ಕುಡಂಕುಳಂನಲ್ಲಿ 1 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ರಿಯಾಕ್ಟರ್ ಕಾರ್ಯಾಚರಿಸುತ್ತಿದ್ದು, ಇನ್ನೊಂದು ಘಟಕ 1 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ರಿಯಾಕ್ಟರ್ ಈ ವರ್ಷ ಕಾರ್ಯಾರಂಭಿಸುವ ನಿರೀಕ್ಷೆಯಿದೆ. ಇಷ್ಟೇ ಸಾಮರ್ಥ್ಯದ ಇನ್ನೆರಡು ಘಟಕಗಳು ಈಗ ನಿರ್ಮಾಣ ಹಂತದಲ್ಲಿವೆ.
ಪ್ರಧಾನಿ ಮೋದಿ ಹಾಗೂ ಪುತಿನ್ ಮಧ್ಯೆ 2015ರಲ್ಲಿ ಏರ್ಪಟ್ಟಿದ್ದ ಒಪ್ಪಂದದ ಪ್ರಕಾರ ಕುಡಂಕುಳಂ ಅಣುವಿದ್ಯುತ್ ಸ್ಥಾವರದ 5 ಹಾಗೂ 6ನೆ ಘಟಕದ ನಿರ್ಮಾಣಕ್ಕೆ 2016ರಲ್ಲಿ ಅಂಕಿತ ಹಾಕಬೇಕಾಗಿತ್ತು. ಆದರೆ ಘಟಕಗಳ ನಿರ್ಮಾಣಕ್ಕೆ ರಶ್ಯದ ಆರ್ಥಿಕ ನೆರವಿಗೆ ಸಂಬಂಧಿಸಿ ಉಂಟಾದ ಬಿಕ್ಕಟ್ಟಿನಿಂದ ಈ ಒಪ್ಪಂದಕ್ಕೆ ಸಹಿಬೀಳುವುದು ವಿಳಂಬಗೊಂಡಿತ್ತು.
ಕುಡಂಕುಳಂನಲ್ಲಿ ಹೆಚ್ಚುವರಿ ಎರಡು ಅಣುಶಕ್ತಿ ಘಟಕಗಳ ಸ್ಥಾಪನೆಯ ಹೊರತಾಗಿ ಅಲ್ಲದೆ ಇನ್ನೂ ನಾಲ್ಕು ಒಪ್ಪಂದಗಳಿಗೆ ಉಭಯದೇಶಗಳು ಸಹಿಹಾಕಿವೆ
ಈ ಸಂದರ್ಭದಲ್ಲಿ ಹೊರಡಿಸಲಾದ ಜಂಟಿ ಘೋಷಣೆಯೊಂದರಲ್ಲಿ ಎರಡೂ ದೇಶಗ ಎಲ್ಲಾ ವಿಧದ ಭಯೋತ್ಪಾದನೆಯನ್ನು ಖಂಡಿಸಿವೆ. ಸೈದ್ಧಾಂತಿಕ, ಧಾರ್ಮಿಕ, ಜನಾಂಗೀಯ, ರಾಜಕೀಯ ಹೀಗೆ ಯಾವುದೇ ಕಾರಣಕ್ಕಾಗಿಯೂ ಭಯೋತ್ಪಾದನೆಯನ್ನು ಸಮರ್ಥಿಸಲು ಸಾಧ್ಯವಿಲ್ಲವೆಂದು ಉಭಯದೇಶಗಳು ಜಂಟಿ ಘೋಷಣೆಯಲ್ಲಿ ತಿಳಿಸವೆ.