×
Ad

2 ಲಕ್ಷ ರೂ. ಮತ್ತು ಹೆಚ್ಚಿನ ನಗದು ವ್ಯವಹಾರದ ವಿರುದ್ಧ ಐಟಿ ಎಚ್ಚರಿಕೆ

Update: 2017-06-02 23:15 IST

ಹೊಸದಿಲ್ಲಿ, ಜೂ.2: 2 ಲಕ್ಷ ರೂ. ಮತ್ತು ಹೆಚ್ಚಿ ನ ನಗದು ವ್ಯವಹಾರಗಳನ್ನು ನಡೆಸುವುದರ ವಿರುದ್ಧ ಶುಕ್ರವಾರ ಜನರಿಗೆ ಎಚ್ಚರಿಕೆಯನ್ನು ನೀಡಿರುವ ಆದಾಯ ತೆರಿಗೆ ಇಲಾಖೆಯು, ಇಂತಹ ಸಂದರ್ಭಗಳಲ್ಲಿ ಹಣ ಸ್ವೀಕರಿಸುವ ವ್ಯಕ್ತಿ ಅದರ ಎರಡು ಪಟ್ಟು ಮೊತ್ತವನ್ನು ದಂಡವಾಗಿ ಪಾವತಿಸ ಬೇಕಾಗುತ್ತದೆ ಎಂದು ತಿಳಿಸಿದೆ.

ಇಂತಹ ವ್ಯವಹಾರಗಳ ಬಗ್ಗೆ ಗೊತ್ತಿರುವವರು ತನಗೆ ಇ-ಮೇಲ್ ಮೂಲಕ ಮಾಹಿತಿ ನೀಡುವಂತೆಯೂ ಅದು ಸೂಚಿಸಿದೆ.
ಹಣಕಾಸು ಕಾಯ್ದೆ 2017ರ ಮೂಲಕ ಸರಕಾರವು 2017, ಎ.1ರಿಂದ 2 ಲ.ರೂ. ಮತ್ತು ಹೆಚ್ಚಿನ ನಗದು ವ್ಯವಹಾರಗಳನ್ನು ನಿಷೇಧಿಸಿದೆ.
ಆದಾಯ ತೆರಿಗೆ ಕಾಯ್ದೆಯಲ್ಲಿ ಹೊಸದಾಗಿ ಸೇರಿಸಲಾಗಿರುವ ಕಲಂ 269ಎಸ್‌ಟಿ ಏಕೈಕ ವಹಿವಾಟು ಅಥವಾ ವ್ಯಕ್ತಿಯಿಂದ ಒಂದು ಕಾರ್ಯಕ್ರಮ ಅಥವಾ ಸಂದರ್ಭದಲ್ಲಿಯ ವಹಿವಾಟಿಗೆ ಸಂಬಂಧಿಸಿದಂತೆ ಒಂದು ದಿನದಲ್ಲಿ ಇಂತಹ ವ್ಯವಹಾರಗಳನ್ನು ನಿಷೇಧಿಸುತ್ತದೆ.
ಕಲಂ 269ಎಸ್‌ಟಿಯನ್ನು ಉಲ್ಲಂಘಿಸಿದರೆ ಹಣವನ್ನು ಸ್ವೀಕರಿಸುವ ವ್ಯಕ್ತಿಗೆ ಶೇ.100 ದಂಡವನ್ನು ವಿಧಿಸಲಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆಯು ಪ್ರಮುಖ ದೈನಿಕಗಳಲ್ಲಿ ಪ್ರಕಟಿಸಿರುವ ಜಾಹೀರಾತಿನಲ್ಲಿ ಸ್ಪಷ್ಟಪಡಿಸಿದೆ.
ವಿತ್ತಸಚಿವ ಅರುಣ್ ಜೇಟ್ಲಿ ಅವರು 2017-18ರ ಮುಂಗಡಪತ್ರದಲ್ಲಿ ಮೂರು ಲ.ರೂ.ಗೂ ಹೆಚ್ಚಿನ ನಗದು ವಹಿವಾಟನ್ನು ನಿಷೇಧಿಸುವ ಪ್ರಸ್ತಾವವನ್ನು ಮಂಡಿಸಿದ್ದರು. ಬಳಿಕ ಈ ಮಿತಿಯನ್ನು ಹಣಕಾಸು ಮಸೂದೆಗೆ ತಿದ್ದುಪಡಿಯನ್ನು ತರುವ ಮೂಲಕ ಎರಡು ಲ.ರೂ.ಗೆ ಇಳಿಸಲಾಗಿತ್ತು
ಈ ನಿರ್ಬಂಧವು ಸರಕಾರ, ಬ್ಯಾಂಕಿಂಗ್ ಕಂಪೆನಿ, ಅಂಚೆ ಕಚೇರಿ ಉಳಿತಾಯ ಬ್ಯಾಂಕ್ ಅಥವಾ ಸಹಕಾರಿ ಬ್ಯಾಂಕ್ ಸ್ವೀಕರಿಸುವ ಮೊತ್ತಗಳಿಗೆ ಅನ್ವಯಿಸುವುದಿಲ್ಲ ಎಂದು ಐಟಿ ಇಲಾಖೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News