×
Ad

‘ಪಾಕೀಝಾ’ ನಟಿ ಗೀತಾ ಕಪೂರ್ ವೃದ್ಧಾಶ್ರಮಕ್ಕೆ ಸ್ಥಳಾಂತರ

Update: 2017-06-02 23:16 IST

ಮುಂಬೈ, ಜೂ.2: ‘ಪಾಕೀಝಾ’ ಮತ್ತು ‘ರಝಿಯಾ ಸುಲ್ತಾನ’ ಚಿತ್ರಗಳಲ್ಲಿನ ತನ್ನ ಪಾತ್ರಗಳಿಂದಾಗಿ ಜನಪ್ರಿಯರಾಗಿದ್ದ ಬಾಲಿವುಡ್‌ನ ಹಿರಿಯ ನಟಿ ಗೀತಾ ಕಪೂರ್ ಅವರನ್ನು ಇಲ್ಲಿಯ ‘ಜೀವನ್ ಆಶಾ’ ವೃ ಮನೆಯನ್ನು ್ಧಾಶ್ರಮಕ್ಕೆ ಸ್ಥಳಾಂತರಿಸಲಾಗಿದೆ. ಸುಮಾರು ಒಂದು ತಿಂಗಳ ಹಿಂದೆ ಗೀತಾರ ಪುತ್ರ ಆಕೆಯನ್ನು ಇಲ್ಲಿಯ ಆಸ್ಪತ್ರೆಯೊಂದರಲ್ಲಿ ತೊರೆದು ಹೋಗಿದ್ದ.

ಚಿತ್ರ ನಿರ್ಮಾಪಕರಾದ ಅಶೋಕ ಪಂಡಿತ್ ಮತ್ತು ರಮೇಶ ತೌರಾನಿ ಅವರು ಗುರುವಾರ ಗೀತಾರ ಆಸ್ಪತ್ರೆ ವೆಚ್ಚ 1.5 ಲ.ರೂ.ಗಳನ್ನು ಪಾವತಿಸದ್ದಲ್ಲದೆ, ಆಕೆಯನ್ನು ಅಂಧೇರಿಯಲ್ಲಿನ ವೃದ್ಧಾಶ್ರಮಕ್ಕೆ ಸೇರಿಸುವಲ್ಲಿ ನೆರವಾಗಿದ್ದಾರೆ.
ಎ.21ರಂದು ರಕ್ತದೊತ್ತಡದ ಏರಿಳಿತದಿಂದ ಬಳಲುತ್ತಿದ್ದ ಗೀತಾ(58)ರನ್ನು ಪ್ರಜ್ಞಾಶೂನ್ಯ ಸ್ಥಿತಿಯಲ್ಲಿ ಆಕೆಯ ಪುತ್ರ, ವೃತ್ತಿಯಿಂದ ಕೋರಿಯೊಗ್ರಾಫರ್ ಆಗಿರುವ ರಾಜಾ ಕಪೂರ್ ಚಿಕಿತ್ಸೆಗಾಗಿ ಗೋರೆಗಾಂವ್‌ನ ಎಸ್‌ಆರ್‌ವಿ ಆಸ್ಪತ್ರೆಗೆ ಕರೆತಂದಿದ್ದ. ಆಕೆಯನ್ನು ದಾಖಲಿಸಿ ಕೊಂಡ ವೈದ್ಯರು ಅಗತ್ಯ ಠೇವಣಿಯನ್ನು ಪಾವತಿಸುವಂತೆ ಸೂಚಿಸಿದ್ದರು. ಎಟಿಎಂನಿಂದ ಹಣ ತರುವ ನೆಪದಲ್ಲಿ ಅಲ್ಲಿಂದ ಹೊರಬಿದ್ದಿದ್ದ ಮಗರಾಯ ಮತ್ತೆ ವಾಪಸಾಗಿರಲಿಲ್ಲ. ಗೀತಾ ಗುಣಮುಖರಾದ ಬಳಿಕ ಆಸ್ಪತ್ರೆಯ ಅಧಿಕಾರಿಗಳು ತಮ್ಮಲ್ಲಿ ಲಭ್ಯವಿದ್ದ ವಿಳಾಸಕ್ಕೆ ತೆರಳಿ ವಿಚಾರಿಸಿದಾಗ ರಾಜಾ ಕಪೂರ್ ಖಾಲಿ ಮಾಡಿದ್ದ ವಿಷಯ ಗೊತ್ತಾಗಿತ್ತು.
ಹಲವಾರು ಮಾಧ್ಯಮ ಪ್ರತಿನಿಧಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಇದರಿಂದ ಗೀತಾ ಕೊಂಚ ಹೆದರಿಕೊಂಡಿದ್ದರು. ಆಕೆ ಅಳತೊಡಗುವಾಗ ವಾರ್ಡ್‌ನಲ್ಲಿಯ ಇತರ ರೋಗಿಗಳಿಗೆ ತೊಂದರೆಯಾಗುತ್ತಿತ್ತು. ಜನರು ತನ್ನ ಭೇಟಿಗೆ ಬರುತ್ತಾರೆ, ಆದರೆ ಯಾರೂ ತನ್ನನ್ನು ತನ್ನ ಮನೆಗೆ ಕರೆದೊಯ್ಯುತ್ತಿಲ್ಲ ಎಂದು ಆಕೆ ದುಃಖಿಸುತ್ತಿದ್ದರು ಎಂದು ಚಿಕಿತ್ಸೆಯ ಹೊಣೆ ಹೊತ್ತಿದ್ದ ಡಾ.ದಿಪೇಂದ್ರ ತ್ರಿಪಾಠಿ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಮಗ ಮರಳಿ ಬಂದು ತನ್ನನ್ನು ಮನೆಗೆ ಕರೆದೊಯ್ಯುತ್ತಾನೆ ಎಂದು ಆಕೆ ಈಗಲೂ ವಿಶ್ವಾಸ ಹೊಂದಿದ್ದಾರೆ ಎಂದರು.
ಗೀತಾರನ್ನು ಮಗ ಆಸ್ಪತ್ರೆಯಲ್ಲಿ ತೊರೆದು ಹೋಗಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರೂ ಯಾವುದೇ ಬಂಧುಗಳು ಆಕೆಯನ್ನು ನೋಡಲು ಬಂದಿರಲಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News