ರಮಝಾನ್‌ನಲ್ಲಿ ನನ್ನ ಉತ್ಸಾಹ ಇಮ್ಮಡಿ: ರಿಕ್ಷಾ ಹಸನಾಕ

Update: 2017-06-03 11:58 GMT

"ನನಗೀಗ 67 ವರ್ಷ. 30 ವರ್ಷಗಳಿಂದ ರಿಕ್ಷಾದ ಮಾಲಕ-ಚಾಲಕನಾಗಿ ಮಂಗಳೂರಿನಲ್ಲೇ ದುಡಿಯುತ್ತಿದ್ದೇನೆ. ವರ್ಷದ 11 ತಿಂಗಳ ಪೈಕಿ ನನಗೆ ರಮಝಾನ್ ಅಂದರೆ ಹೆಚ್ಚು ಇಷ್ಟ. ಯಾಕೆಂದರೆ ನಾನು ಚಹಾ ಮತ್ತು ಪಾನ್ ಬೀಡಾ, ತಾಂಬೂಲ (ವೀಳ್ಯದ ಎಲೆ) ಪ್ರಿಯ. ರಿಕ್ಷಾ ಚಲಾಯಿಸುವಾಗಲೆಲ್ಲಾ ನನಗೆ ಪಾನ್ ಜಗಿಯುತ್ತಿರಬೇಕು. ಆಗಾಗ ಚಹಾ ಕುಡಿಯುತ್ತಿರಬೇಕು. ಆದರೆ ರಮಝಾನ್‌ನಲ್ಲಿ ನನಗೆ ಇದರ ರಗಳೆಯೇ ಇಲ್ಲ. ಇದರಿಂದ ನನ್ನ ಹಣ ಮತ್ತು ಸಮಯ ಉಳಿತಾಯವಾಗುತ್ತದೆ".

ಇದು ಮಲಾರ್ ಅರಸ್ತಾನದ ಕೆಳಗಿನ ಮಾರ್ಗ ನಿವಾಸಿ ಕೆ.ಎಂ. ಹಸನಬ್ಬ (ರಿಕ್ಷಾ ಹಸನಾಕ)ರ ಮಾತು. ಮೂಲತ: ಬಂಟ್ವಾಳ ತಾಲೂಕಿನ ಸಜಿಪಮುನ್ನೂರಿನ ಮಲೈಬೊಟ್ಟು ನಿವಾಸಿಯಾಗಿರುವ ಹಸನಬ್ಬ ಸುಮಾರು 45 ವರ್ಷದ ಹಿಂದೆ ಮದುವೆಯಾದ ಒಂದೆರಡು ವರ್ಷದ ಬಳಿಕ ಪತ್ನಿಯ ತವರೂರಲ್ಲಿ ನೆಲೆಸತೊಡಗಿದರು. 1974ರ ನೆರೆಗೆ ಮಲೈಬೊಟ್ಟುವಿನಲ್ಲಿದ್ದ ಇವರ ಹೊಟೇಲ್-ಅಂಗಡಿ ಆಹುತಿಯಾಯಿತು. ಆ ಬಳಿಕ ಪಾವೂರು ಗ್ರಾಮದ ಗಾಡಿಗದ್ದೆ ಎಂಬಲ್ಲಿ ಹೊಟೇಲ್ ತೆರೆದರೂ ಕೂಡ ಅದು ಕೈ ಹತ್ತಲಿಲ್ಲ. ಹಾಗಾಗಿ 1980ರಲ್ಲಿ ರಿಕ್ಷಾ ಖರೀದಿಸಿ ಮಂಗಳೂರಿನಲ್ಲಿ ಬಾಡಿಗೆಗೆ ಓಡಿಸತೊಡಗಿದರು

ಬೆಳಗ್ಗೆ ಸುಮಾರು 10 ಗಂಟೆಗೆ ಮಂಗಳೂರಿಗೆ ಕಾಲಿಡುವ ಇವರು ಸಂಜೆ 5 ಗಂಟೆಗೆ ಮನೆಗೆ ಮರಳುತ್ತಾರೆ. ಪತ್ನಿ ಮತ್ತು 7 ಹೆಣ್ಣು ಮಕ್ಕಳ ತುಂಬು ಕುಟುಂಬ ಇವರದ್ದು. ರಿಕ್ಷಾದಲ್ಲಿ ದುಡಿದ ಹಣದಿಂದಲೇ 5 ಹೆಣ್ಣು ಮಕ್ಕಳನ್ನು ಮದುವೆ ಮಾಡಿಸಿದ್ದಾರೆ. ಗಂಡು ಮಕ್ಕಳಿಲ್ಲದ ಕಾರಣ ಈ ಇಳಿವಯಸ್ಸಿನಲ್ಲೂ ದಿನಂಪ್ರತಿ ಬಸ್ಸಿನಲ್ಲಿ 25 ಕಿ.ಮೀ. ಕ್ರಮಿಸಿ ಮಂಗಳೂರಿನಲ್ಲಿ ದುಡಿಯುತ್ತಾರೆ. ರಿಕ್ಷಾವನ್ನೇ ತನ್ನ ದುಡಿಮೆಗೆ ಬಳಸುತ್ತಿದ್ದ ಕಾರಣ ಊರಲ್ಲಿ "ರಿಕ್ಷಾ ಹಸನಾಕ" ಎಂದೇ ಗುರುತಿಸಲ್ಪಟ್ಟಿದ್ದಾರೆ. ಚಳಿ, ಮಳೆ, ಗಾಳಿ, ಬೇಸಿಗೆ ಏನೇ ಇದ್ದರೂ ಹಸನಾಕರಿಗೆ ಸಮಸ್ಯೆ ಇಲ್ಲ. ತನ್ನ ದಿನದ ಪಾಲಿನ ಹಣ ಗಳಿಸಿಯೇ ಊರಿಗೆ ಹೋಗುತ್ತಾರೆ.

"ನನಗೆ ರಮಝಾನ್‌ನಲ್ಲಿ ಹೆಚ್ಚು ಲವಲವಿಕೆಯಿಂದ ದುಡಿಯಲು ಇಷ್ಟ. ವಯೋಸಹಜವಾಗಿ ಆರಂಭದ ಒಂದೆರಡು ದಿನ ನನಗೆ ಉಪವಾಸ ಸ್ವಲ್ಪ ಕಷ್ಟವಾದರೂ ಕೂಡ ಬಳಿಕ ಸಲೀಸಾಗಿರುತ್ತದೆ. ಇತರ ದಿನಗಳಲ್ಲಿ ಚಹಾ, ಊಟ, ತಿಂಡಿ, ಪಾನ್ ಬೀಡಾ, ತಾಂಬೂಲ ತಿನ್ನಲು ಸಮಯ ವ್ಯಯವಾಗುತ್ತದೆ. ಆದರೆ ರಮಝಾನ್‌ನಲ್ಲಿ ಅದ್ಯಾವ ಸಮಸ್ಯೆಯೂ ಇಲ್ಲ. ಬಾಂಗ್ (ಅಝಾನ್) ಆದ ತಕ್ಷಣ ಹತ್ತಿರದ ಮಸೀದಿಗೆ ಹೋಗಿ ನಮಾಝ್ ಮಾಡಿ ಒಂದೈದು ನಿಮಿಷ ದಣಿವಾರಿಸಿ ಮತ್ತೆ ಎಂದಿನಂತೆ ರಿಕ್ಷಾ ಓಡಿಸುತ್ತೇನೆ".

"ನನ್ನಂತಹ ಬಡಪಾಯಿಗೆ ರಮಝಾನ್ ಅಗತ್ಯ. ಇದರಿಂದ ನನ್ನ ದೇಹ, ಮನಸ್ಸು ಕೂಡ ಶುದ್ಧವಾಗುತ್ತದೆ. ರಮಝಾನ್‌ನಲ್ಲಿ ದಿನದ 12 ಗಂಟೆ ದುಡಿದರೂ ನನಗೆ ದಣಿವು ಎಂಬುದು ಇಲ್ಲ. ನಾನು ಆಯಾಸ ಎಂದು ಮನೆಯಲ್ಲಿ ಕೂತರೆ ಪತ್ನಿ-ಮಕ್ಕಳು ಹಸಿವಿನಿಂದ ಕೂರಬೇಕಾದೀತು. ಹಾಗಾಗಿ ದಿನದ ಹೆಚ್ಚು ಹೊತ್ತು ದುಡಿಯಲು ಇಷ್ಟ ಪಡುತ್ತೇನೆ. ರಮಝಾನ್‌ನಲ್ಲಿ ಅದಕ್ಕೆ ಸಾಕಷ್ಟು ಸಮಯಾವಕಾಶ ಇರುತ್ತದೆ."

-ಹಸನಾಕ, ರಿಕ್ಷಾ ಚಾಲಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News