ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ಗುಜರಾತ್ ಕಾಂಗ್ರೆಸ್ ಮುಖ್ಯಸ್ಥನ ಕರೆ

Update: 2017-06-03 12:34 GMT

ಹೊಸದಿಲ್ಲಿ,ಜೂ.3: ಚುನಾವಣೆಗಳನ್ನು ಗೆಲ್ಲುವ ಹತಾಶ ಪ್ರಯತ್ನದಲ್ಲಿರುವ ಕಾಂಗ್ರೆಸ್ ಪಕ್ಷವು ಬಿಜೆಪಿಯೊಂದಿಗೆ ಪೈಪೋಟಿಗೆ ಬಿದ್ದಿರುವ ಮತ್ತು ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವಂತೆ ಕೇಂದ್ರವನ್ನು ಆಗ್ರಹಿಸಿರುವ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಭರತಸಿಂಹ ಸೋಳಂಕಿ ಅವರಿಗೆ ಪರೋಕ್ಷ ಬೆಂಬಲವನ್ನು ವ್ಯಕ್ತಪಡಿಸಿದೆ.

ಈ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆಯನ್ನು ನೀಡಲು ಎಐಸಿಸಿ ನಿರಾರಿಸಿ ದ್ದರೆ, ಬಿಜೆಪಿಯನ್ನು ಎದುರಿಸಲು ತನಗೆ ಸಾಧ್ಯವಿರುವವರೆಗೆ ಇಂತಹ ಹೇಳಿಕೆಗಳಿಗೆ ಪಕ್ಷದ ಆಕ್ಷೇಪವಿಲ್ಲ ಎಂದು ನಾಯಕರು ಹೇಳಿದ್ದಾರೆ. ಆದರೆ ಸೋಳಂಕಿ ದಿಢೀರ್‌ನೆ ‘ಗೋಭಕ್ತ’ರಾಗಿರುವ ಏಕೈಕ ಕಾಂಗ್ರೆಸ್ ನಾಯಕರೇನಲ್ಲ.

ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಹಾಗೂ ಗುಜರಾತ್ ಉಸ್ತುವಾರಿ ಹೊಂದಿರುವ ಕಾರ್ಯದರ್ಶಿ ಜಿತು ಪಟ್ವಾರಿ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಗೋವನ್ನು ‘ರಾಷ್ಟ್ರಮಾತೆ’ ಎಂದು ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.

 ‘‘ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕೆಂಬ ಪರಿಕಲ್ಪನೆಯನ್ನು ನಾನು ಸ್ವಾಗತಿಸುತ್ತೇನೆ. ಆದರೆ ಗೋವು ನಮ್ಮ ಮಾತೆಯಾಗಿದೆ ಮತ್ತು ಮಾತೆಯನ್ನು ರಾಷ್ಟ್ರೀಯ ಪ್ರಾಣಿ ಎಂದು ಹೆಸರಿಸಲು ಹೇಗೆ ಸಾಧ್ಯ? ಗೋವನ್ನು ರಾಷ್ಟ್ರಮಾತೆ ಎಂದು ಘೋಷಿಸಬೇಕು ’’ಎಂದು ಅವರು ಟ್ವೀಟಿಸಿದ್ದಾರೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಹತಾಶಗೊಂಡಿರುವ ಕಾಂಗ್ರೆಸ್ ಗೆಲುವಿಗಾಗಿ ಹಂಬಲಿಸುತ್ತಿದೆ. ಬಿಜೆಪಿಯು ಕಾಂಗ್ರೆಸ್‌ನ್ನು ‘ಹಿಂದು ವಿರೋಧಿ’ ಪಕ್ಷವೆಂದು ಬ್ರಾಂಡ್ ಮಾಡಿದೆ ಮತ್ತು ಪಕ್ಷವು ಬಹುಸಂಖ್ಯಾತ ಸಮುದಾಯದ ವಿಶ್ವಾಸವನ್ನು ಗೆಲ್ಲಲು ಸರ್ವಪ್ರಯತ್ನಗಳನ್ನೂ ಮಾಡಲಿದೆ ಎಂದು ಪಕ್ಷದ ನಾಯಕರೋರ್ವರು ಹೇಳಿದರು.

ಅದೇನೇ ಇರಲಿ, ನಮಗೆ ಚುನಾವಣೆಗಳನ್ನು ಗೆಲ್ಲಬೇಕಾಗಿದೆ. ಗೋವಿನ ವಿಷಯದಲ್ಲಿ ನಮ್ಮ ನಾಯಕರ ಹೇಳಿಕೆಗಳಲ್ಲಿ ತಪ್ಪೇನಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ರೋರ್ವರು ತಿಳಿಸಿದರು.

 ಕಾಂಗ್ರೆಸ್‌ನ್ನು ಹಿಂದು ವಿರೋಧಿ ಎಂದು ಬಿಂಬಿಸಿದ್ದರಿಂದ ಉತ್ತರ ಪ್ರದೇಶದಲ್ಲಿ ಪಕ್ಷದ ಬಲ ಏಳು ಸ್ಥಾನಗಳಿಗೆ ಕುಸಿದಿದೆ ಎಂದು ಪಕ್ಷದ ಕೆಲವು ನಾಯಕರು ಭಾವಿಸಿದ್ದಾರೆ. ಬ್ರಾಹ್ಮಣರಾದ ಶೀಲಾ ದೀಕ್ಷಿತ್ ಮತ್ತು ಪ್ರಮೋದ ತಿವಾರಿಯವರನ್ನು ಪಕ್ಷವು ಪ್ರೋತ್ಸಾಹಿಸಿದ್ದರೂ ಪಕ್ಷವು ಅಲ್ಪಸಂಖ್ಯಾತರ ಪರವಾಗಿದೆ ಎಂದು ಬಿಂಬಿಸಲಾಗುತ್ತಿದೆ ಎನ್ನುವುದನ್ನು ಕಾಂಗ್ರೆಸ್‌ಗೆ ಉತ್ತರ ಪ್ರದೇಶದಿಂದ ಲಭಿಸಿರುವ ಮರುಮಾಹಿತಿಗಳು ಬಹಿರಂಗಗೊಳಿಸಿವೆ.

ಸೋಳಂಕಿ ಮತ್ತು ಪಟ್ವಾರಿ ಮಾತ್ರ ಕಾಂಗ್ರೆಸ್ ಗೋಭಕ್ತರಲ್ಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಅವರು, ತಾನು ಮಧ್ಯಪ್ರದೇಶದ ಮುಖ್ಯಮಂತ್ರಿ ಯಾಗಿದ್ದಾಗ ಗೋಹತ್ಯೆಯನ್ನು ನಿಷೇಧಿಸಿದ್ದೆ ಎಂದು ಅಧಿಕೃತವಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಮುಂಬರುವ ದಿನಗಳಲ್ಲಿ ಹಿಂದು ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲೂ ಕಾಂಗ್ರೆಸ್ ಉದ್ದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News