ಅಮೆರಿಕ ಅಧ್ಯಕ್ಷರ ಮುಸ್ಲಿಮ್ ವಿರೋಧಿ ಹೇಳಿಕೆ ವಿರುದ್ಧ ಪ್ರತಿಭಟನೆ

Update: 2017-06-03 14:35 GMT

ನ್ಯೂಯಾರ್ಕ್, ಜೂ.2: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇಸ್ಲಾಮ್ ವಿರೋಧಿ ಭಾಷಣಗಳಿಗೆ ಪ್ರತಿಭಟನೆಯಾಗಿ, ಮುಸ್ಲಿಮರ ಗುಂಪೊಂದು ಗುರುವಾರ ದಿನದ ರಮಝಾನ್ ಉಪವಾಸ ವ್ರತವನ್ನು ಕೊನೆಗೊಳಿಸುವ ಮೊದಲು ಇಲ್ಲಿನ ಟ್ರಂಪ್ ಟವರ್ ಹೊರಗೆ ಸಾಮೂಹಿಕ ನಮಾಝ್ ಸಲ್ಲಿಸಿದರು.

ವಲಸಿಗರ ರಕ್ಷಣಾ ಗುಂಪುಗಳು ಆಯೋಜಿಸಿದ್ದ ಈ ಇಫ್ತಾರ್ ಕೂಟದಲ್ಲಿ 100ಕ್ಕೂ ಅಧಿಕ ಮುಸ್ಲಿಮರು ಪಾಲ್ಗೊಂಡಿದ್ದರು. ಅಷ್ಟೇ ಸಂಖ್ಯೆಯ ಮುಸ್ಲಿಮೇತರ ಬೆಂಬಲಿಗರು ಕೂಡಾ ಉಪಸ್ಥಿತರಿದ್ದರು.

ಪ್ರಾರ್ಥನೆಗೆ ಮುನ್ನ ಪ್ರತಿಭಟನಕಾರರು ಟ್ರಂಪ್ ಟವರ್ ಸಮೀಪ ಜಮಾಯಿಸಿದಾಗ ಪೊಲೀಸರು ಅವರ ಮೇಲೆ ನಿಕಟ ನಿಗಾವಿರಿಸಿದರು.

ನ್ಯೂಯಾರ್ಕ್‌ನ ಮ್ಯಾನ್‌ಹಟನ್‌ನಲ್ಲಿರುವ ‘ಟ್ರಂಪ್ ಟವರ್’, ಡೊನಾಲ್ಡ್ ಟ್ರಂಪ್ ಒಡೆತನದ ಉದ್ಯಮಸಂಸ್ಥೆಗಳ ಕಾರ್ಯಾಲಯವಾಗಿದೆ.

 ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಗಾಂಬಿಯಾದ 26 ವರ್ಷದ ಮುಸ್ಲಿಮ್ ಅಮೆರಿಕನ್ ಮಹಿಳೆ ಫಾತಿಮತ್ ವಾಗಿ ಸುದ್ದಿಗಾರರ ಜೊತೆ ಮಾತನಾಡುತ್ತಾ, ಮುಸ್ಲಿಮರ ವಿರುದ್ಧದ ನಕಾರಾತ್ಮಕ ಹೇಳಿಕೆಗಳ ವಿರುದ್ಧ ಪ್ರತಿಭಟಿಸಲು ತಾನು ಬಂದಿರುವುದಾಗಿ ಹೇಳದ್ದಾರೆ.

ಯಹೂದಿ ನಿರಾಶ್ರಿತರ ಸಂಘದ ಅಧ್ಯಕ್ಷೆ ಮ್ಯಾಗಿ ಗ್ಲಾಸ್, ತಮ್ಮ ಎಲ್ಲಾ ಮುಸ್ಲಿಂ ನೆರೆಹೊರೆಯವರು ಹಾಗೂ ಸ್ನೇಹಿತರಿಗೆ ಬೆಂಬಲ ವ್ಯಕ್ತಪಡಿಸಲು ಬಂದಿರುವುದಾಗಿ ಹೇಳಿದ್ದಾರೆ.

 ಈ ಮಧ್ಯೆ ಕಾರ್ಯಕ್ರಮದ ಸಂಯೋಜಕಿ ಲಿಂಡಾ ಸರ್ಸೌರ್ ಅವರು ಪ್ರತಿಭಟನೆಯಲ್ಲಿ ಭಾರೀ ಸಂಖ್ಯೆಯ ಮಂದಿ ಪಾಲ್ಗೊಂಡಿರುವ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News